ಸಿಡ್ನಿ ಟೆಸ್ಟ್: ಆಸ್ಟ್ರೇಲಿಯ 193/2

Update: 2018-01-05 18:57 GMT

ಸಿಡ್ನಿ, ಜ.5: ಐದನೇ ಹಾಗೂ ಅಂತಿಮ ಟೆಸ್ಟ್‌ನ ಎರಡನೇ ದಿನದಾಟದಲ್ಲಿ ಆತಿಥೇಯ ಆಸ್ಟ್ರೇಲಿಯ ತಂಡ 2 ವಿಕೆಟ್‌ಗಳ ನಷ್ಟಕ್ಕೆ 193 ರನ್ ಗಳಿಸಿದೆ. ಎರಡನೇ ದಿನವಾದ ಶುಕ್ರವಾರ ದಿನದಾಟದಂತ್ಯಕ್ಕೆ ಮೂರನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 107 ರನ್ ಸೇರಿಸಿದ ಉಸ್ಮಾನ್ ಖ್ವಾಜಾ(ಔಟಾಗದೆ 91, 204 ಎಸೆತ, 7 ಬೌಂಡರಿ, 1 ಸಿಕ್ಸರ್) ಹಾಗೂ ನಾಯಕ ಸ್ಟೀವನ್ ಸ್ಮಿತ್(ಔಟಾಗದೆ 44, 88 ಎಸೆತ, 3 ಬೌಂಡರಿ) ತಂಡಕ್ಕೆ ಆಸರೆಯಾಗಿದ್ದಾರೆ.

ಸರಣಿಯಲ್ಲಿ 3ನೇ ಅರ್ಧಶತಕ ಪೂರೈಸಿರುವ ಖ್ವಾಜಾ ಆ್ಯಶಸ್ ಸರಣಿಯಲ್ಲಿ ಚೊಚ್ಚಲ ಶತಕ ದಾಖಲಿಸುವತ್ತ ಹೆಜ್ಜೆ ಇಟ್ಟಿದ್ದಾರೆ. ಸರಣಿಯಲ್ಲಿ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ ಸ್ಮಿತ್, ಖ್ವಾಜಾಗೆ ಉತ್ತಮ ಸಾಥ್ ನೀಡುತ್ತಿದ್ದಾರೆ.

20ರ ಹರೆಯದ ಯುವ ಸ್ಪಿನ್ನರ್ ಮಾಸನ್ ಕ್ರೇನ್ ಸ್ಪಿನ್ ಜಾದೂವಿನಿಂದ ಸ್ಮಿತ್ ಹಾಗೂ ಖ್ವಾಜಾಗೆ ಸವಾಲಾಗಿದ್ದಾರೆ. 17 ಓವರ್‌ಗಳಲ್ಲಿ 58 ರನ್ ನೀಡಿರುವ ಅವರು ಇನ್ನೂ ವಿಕೆಟ್ ಪಡೆದಿಲ್ಲ. ಸರಣಿಯಲ್ಲಿ ನಾಲ್ಕನೇ ಅರ್ಧಶತಕ(56) ದಾಖಲಿಸಿರುವ ವಾರ್ನರ್ ಆ್ಯಂಡರ್ಸನ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದ್ದಾರೆ.

ಇದಕ್ಕೆ ಮೊದಲು 5 ವಿಕೆಟ್‌ಗಳ ನಷ್ಟಕ್ಕೆ 233 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ 346 ರನ್‌ಗೆ ಆಲೌಟಾಯಿತು. ಪ್ಯಾಟ್ ಕಮ್ಮಿನ್ಸ್(4-80) ಯಶಸ್ವಿ ಬೌಲರ್ ಎನಿಸಿಕೊಂಡಿದ್ದರೆ, ಮಿಚೆಲ್ ಸ್ಟಾರ್ಕ್(2-80) ಹಾಗೂ ಹೇಝಲ್‌ವುಡ್(2-65) ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.

  ಅಜೇಯ 55 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಡೇವಿಡ್ ಮಲಾನ್ ನಿನ್ನೆಯ ಮೊತ್ತಕ್ಕೆ 7 ರನ್ ಸೇರಿಸುವಷ್ಟರಲ್ಲಿ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು. ಪರ್ತ್ ಟೆಸ್ಟ್‌ನಲ್ಲಿ ಶತಕ ಸಿಡಿಸಿರುವ ಮಲಾನ್ ಸರಣಿಯಲ್ಲಿ 47.25ರ ಸರಾಸರಿಯಲ್ಲಿ 378 ರನ್ ಗಳಿಸಿದ್ದಾರೆ. ಟಾಮ್ ಕುರ್ರನ್(39), ಆಲ್‌ರೌಂಡರ್ ಮೊಯಿನ್ ಅಲಿ(30)ಹಾಗೂ ಸ್ಟುವರ್ಟ್ ಬ್ರಾಡ್(31) ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು.

ಮತ್ತೊಂದು ಮೈಲುಗಲ್ಲು ತಲುಪಿದ ಸ್ಮಿತ್

ಆಸ್ಟ್ರೇಲಿಯ ನಾಯಕ ಸ್ಟೀವನ್ ಸ್ಮಿತ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ಮೈಲುಗಲ್ಲು ತಲುಪಿದ್ದಾರೆ. ಸ್ಮಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 6,000 ರನ್ ಪೂರೈಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

111ನೇ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದ ಸ್ಮಿತ್ ತಮ್ಮದೇ ದೇಶದ ಬ್ಯಾಟಿಂಗ್ ದಂತಕತೆ ಡಾನ್ ಬ್ರಾಡ್ಮನ್ ಬಳಿಕ ವೇಗವಾಗಿ 6000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.

ಪ್ರಸ್ತುತ ಐದು ಪಂದ್ಯಗಳ ಸರಣಿಯಲ್ಲಿ ಸ್ಮಿತ್ ಮೂರು ಶತಕಗಳನ್ನು ದಾಖಲಿಸಿದ್ದಾರೆ. ಸರಣಿಯುದ್ದಕ್ಕೂ ಇಂಗ್ಲೆಂಡ್ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿರುವ ಸ್ಮಿತ್ 5ನೇ ಟೆಸ್ಟ್‌ನ 2ನೇ ದಿನದಾಟದಂತ್ಯಕ್ಕೆ ಔಟಾಗದೇ 44 ರನ್ ಗಳಿಸಿದ್ದು ಮತ್ತೊಂದು ಶತಕದ ನಿರೀಕ್ಷೆಯಲ್ಲಿದ್ದಾರೆ. ಸ್ಮಿತ್ ಸರಣಿಯಲ್ಲಿ ಈತನಕ ಒಟ್ಟು 648 ರನ್ ಗಳಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್

►ಇಂಗ್ಲೆಂಡ್ ಮೊದಲ ಇನಿಂಗ್ಸ್: 112.3 ಓವರ್‌ಗಳಲ್ಲಿ 346/10

(ಜೋ ರೂಟ್ 83, ಡೇವಿಡ್ ಮಲಾನ್ 62, ಅಲಿಸ್ಟರ್ ಕುಕ್ 39, ಟಾಮ್ ಕುರ್ರನ್ 39, ಸ್ಟುವರ್ಟ್ ಬ್ರಾಡ್ 31, ಪ್ಯಾಟ್ ಕಮ್ಮಿನ್ಸ್ 4-80, ಸ್ಟಾರ್ಕ್ 2-80, ಹೇಝಲ್‌ವುಡ್ 2-65)

►ಆಸ್ಟ್ರೇಲಿಯ ಮೊದಲ ಇನಿಂಗ್ಸ್: 67 ಓವರ್‌ಗಳಲ್ಲಿ 193/2

(ಉಸ್ಮಾನ್ ಖ್ವಾಜಾ ಅಜೇಯ 91, ಡೇವಿಡ್ ವಾರ್ನರ್ 56, ಸ್ಟೀವನ್ ಸ್ಮಿತ್ ಅಜೇಯ 44, ಆ್ಯಂಡರ್ಸನ್ 1-25, ಬ್ರಾಡ್ 1-28)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News