ಆಹಾರ ಸತ್ಯ-ಮಿಥ್ಯ

Update: 2018-01-06 16:38 GMT

ಮನುಷ್ಯ ಮಿಶ್ರಾಹಾರಿ ಎಂಬುದು ನಿರ್ವಿವಾದಿತ ಸತ್ಯ ಮತ್ತು ಇದು ಒಳ್ಳೆಯದೇ. ಮನುಷ್ಯ ಪ್ರಾಣಿಗೆ ವೈವಿಧ್ಯಮಯವಾದ ಆಹಾರ ಪದಾರ್ಥಗಳನ್ನು ಅರಗಿಸಿಕೊಳ್ಳುವ ಸಾಮರ್ಥ್ಯವಿದೆ. ಆತ ಏನನ್ನು ತಿನ್ನಬೇಕು? ಏನನ್ನು ತಿನ್ನಬಾರದು? ಎಂಬುದನ್ನು ಆಹಾರ ವಿಜ್ಞಾನಿಗಳು ಆಹಾರ ಯೋಜಕರಿಂದಲೇ ತಿಳಿಯಬೇಕಿಲ್ಲ.

ಶಿಲಾಯುಗದಲ್ಲಿನ ಮನುಷ್ಯ ಮಾಂಸಾಹಾರಿಯೇ ಆಗಿದ್ದ. ಕಾಡಲ್ಲಿ ಸಿಗುತ್ತಿದ್ದ ಹಣ್ಣು-ಹಂಪಲು, ಗೆಡ್ಡೆ ಗೆಣಸುಗಳು ಅವನನ್ನು ಪೊರೆಯಲು ಸಹಕಾರಿಯಾಗಿದ್ದವು. ಅದೆಷ್ಟೋ ಸಾವಿರ ವರ್ಷಗಳ ವಿಕಾಸದ ಹಾದಿಯನ್ನು ಕ್ರಮಿಸಿರುವ ಮನುಷ್ಯ ಕಾಡಿನಿಂದ ನಾಡಿಗೆ ಬಂದು ಸಮಾಜಜೀವಿಯಾಗಿ ಕೃಷಿ ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದು ಇತ್ತೀಚೆಗಿನ 2,000 ವರ್ಷಗಳಿಂದ.

ಆಹಾರ ಗುರುತಿಸುವಿಕೆ, ಅಡುಗೆಯ ವಿಧಾನಗಳು, ಊಟಕ್ಕೆ ಸಂಬಂಧಿಸಿದ ಆಚರಣೆಗಳು ಆಹಾರದಲ್ಲಿ ಆದ ಶೋಧನೆ... ಹೀಗೆ ಈ ಪ್ರಕ್ರಿಯೆ ಇಂದಿಗೂ ನಿರಂತರವಾಗಿ ಮುಂದುವರಿಯುತ್ತಲೇ ಇರುವಂಥದ್ದು.

ಹಸಿವನ್ನಿಂಗಿಸುವ ಮೂಲಭೂತ ಜೈವಿಕ ಅಗತ್ಯದ ಕಾರಣಕ್ಕಾಗಿ ಮಾತ್ರ ಇಂದು ನಾವು ಉಣ್ಣುತ್ತಿಲ್ಲ. ದೇಹ- ಮನಸ್ಸು- ಆತ್ಮದ ವಿಕಾಸಕ್ಕೆ ಬೇಕಾದುದೂ ಆಗಿದೆ ಆಹಾರ. ಅನ್ನವಿಲ್ಲದೆ ಜೀವನ ಅಸಾಧ್ಯ. ಅನ್ನವಿದ್ದರೆ ಪ್ರಾಣ: ಪ್ರಾಣವಿದ್ದರೆ ಪರಾಕ್ರಮ. ಮನುಷ್ಯನ ಬೆಳವಣಿಗೆಗೆ, ಕ್ರಿಯಾಶೀಲ ಮತ್ತು ಆರೋಗ್ಯಕರ ಬದುಕಿಗೆ ಸಾಕಷ್ಟು ಪೋಷಕಾಂಶ ಯುಕ್ತ ಆಹಾರ ಪದಾರ್ಥಗಳನ್ನು ಆಯ್ಕೆ ಮಾಡಿಕೊಳ್ಳುವುದು ಇಂದಿನ ಆಗತ್ಯವಾಗಿದೆ.

 ನಮ್ಮ ಜನರ ಆಹಾರಾಭ್ಯಾಸಗಳು ಆಯಾಯ ಪ್ರದೇಶಗಳಲ್ಲಿ ಸಿಗುವ,ಬೆಳೆಯುವ ಎಲ್ಲ ಬಗೆಯ ಆಹಾರ ಪದಾರ್ಥಗಳು ಮತ್ತು ಅಡುಗೆ ವಿಧಾನಗಳೊಂದಿಗೆ ತಳಕು ಹಾಕಿಕೊಂಡಿವೆ.

ಈಗಲೂ ಬಹುತೇಕ ಗ್ರಾಮೀಣ ಜನರು ನಿರರ್ಥಕ ಧಾರ್ಮಿಕತೆಯ ಹೇರಿಕೆಯಿಲ್ಲದೆ, ಆಹಾರದಲ್ಲಿ ಮೈಲಿಗೆಯಿಲ್ಲದೆ, ಜಾತ್ರೆ-ಹುಣ್ಣಿಮೆ- ಹಬ್ಬಗಳಲ್ಲಿ ದೇವರ ಹೆಸರಲ್ಲಿ ಅಡುಗೆ ಮಾಡಿ ಎಡೆ ಇಟ್ಟು ತಿನ್ನುವ ಮೂಲಕ ನಾವು ತಿನ್ನುವ ‘ಆಹಾರವೇ ದೇವರು’ ಎಂದು ಕುಟುಂಬದ ವರು, ಸ್ನೇಹಿತರು, ಬಂಧು-ಬಳಗದವರೊಂದಿಗೆ ಕೂಡಿ, ಖುಷಿಯಾಗಿ ಉಂಡು ಕೃತಾರ್ಥರಾಗಿ ಸಂತೃಪ್ತಿ ಹೊಂದಿ ಸಂಭ್ರಮಿಸುವುದೂ ಆಹಾರ ಸಂಸ್ಕೃತಿಯ ಭಾಗವಾಗಿದೆ. ಇದು ಆಯಾ ಸಮುದಾಯಗಳ ಅಸ್ಮಿತೆಯ ಕುರುಹೂ ಹೌದು. ಎಲ್ಲ ಜೀವಿಗಳ ಅಸ್ತಿತ್ವಕ್ಕೆ ಅಗತ್ಯವಾದ ತ್ರಿಸ್ತಂಭಗಳಾದ ‘ಆಹಾರ, ನಿದ್ರೆ, ಮೈಥುನ’ಗಳಲ್ಲಿ ಆಹಾರಕ್ಕೆ ಮೊದಲನೆಯ ಸ್ಥಾನ.

ಅನ್ನ ದೇವರ ಮುಂದೆ ಇನ್ನು ದೇವರು ಉಂಟೇ?

ಅನ್ನವಿರುವನಕ ಪ್ರಾಣವೀ ಜಗದೊಳಗೆ

ಅನ್ನವೇ ದೈವ ಸರ್ವಜ್ಞ/

-ಎಂಬ ಸತ್ಯದ ಮಾತನ್ನು ನಾವೆಲ್ಲ ಗಮನಿಸಬೇಕು. ಹಾಗೆಯೇ ಕ್ರಿ.ಪೂ 400ರಷ್ಟು ಹಿಂದೆಯೇ ವೈದ್ಯಲೋಕದ ಪಿತಾಮಹ ಎನಿಸಿಕೊಂಡ ಹಿಪೋಕ್ರೆಟಿಸ್ ಹೇಳಿರುವ ಮಾತು:

‘ಆಹಾರವೇ ನಿಮ್ಮ ಆರೋಗ್ಯವನ್ನು ಕಾಪಾಡುವ, ಆನಂದ ನೀಡುವ ಮದ್ದಾಗಲಿ’ ಎಂಬುದು. ಅಲ್ಲದೆ ‘ಎಲ್ಲಾರೂ ಮಾಡುವುದು ಹೊಟ್ಟೆ ಗಾಗಿ: ಗೇಣು ಬಟ್ಟೆಗಾಗಿ’ ಎಂಬ ಕವಿವರ್ಯರ ಮಾತನ್ನೂ ಸಹ ನಾವು ಗಮನಿಸಬೇಕು. ಬಡವ ಬಲ್ಲಿದನಿಗೂ ಮುದ್ದೆ- ರೊಟ್ಟಿಯೇ ಮುಖ್ಯ. ಜಾತಿ, ಕುಲ, ಗೋತ್ರ, ಧರ್ಮ, ದೇಶ, ಕಾಲಗಳ ಹೆಸರಲ್ಲಿ ಅನ್ನದ ರಾಜಕೀಯ ಸಲ್ಲದು ಎಂಬುದನ್ನು ಪುಷ್ಟೀಕರಿಸುತ್ತದೆ.

ಆಹಾರ ಪದಾರ್ಥಗಳ ಉತ್ಪಾದನೆಯಲ್ಲಿ ನಮ್ಮ ದೇಶ ಸ್ವಾವಲಂಬನೆ ಸಾಧಿಸಿದೆ. ಎಂದು ನೀವೆಷ್ಟೇ ಬೊಂಬಡ ಬಜಾಯಿಸಿಕೊಂಡರೂ ಕೆಲವು ಅಂಕಿ ಅಂಶಗಳು ಬೇರೆಯದೇ ಆದ ಕಹಿ ಸತ್ಯದತ್ತ ಬೆಟ್ಟು ಮಾಡಿ ತೋರಿಸುತ್ತಿವೆ. ಉದಾ:

 1.ನಮ್ಮ ದೇಶದ ಮಕ್ಕಳಲ್ಲಿ ಶೇ.53ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ ತೀವ್ರತರದ ಅಪೌಷ್ಟಿಕತೆಗೀಡಾಗಿರುವ ಮಕ್ಕಳು ಶೇ.22

  2.ಪೌಷ್ಟಿಕ ಆಹಾರದ ಕೊರತೆಯಿಂದಲೇ 10 ಲಕ್ಷದಷ್ಟು ಮಕ್ಕಳು ಪ್ರತೀ ವರ್ಷ ಸಾವಿಗೀಡಾಗುತ್ತಿದ್ದಾರೆ.

  3.ನಮ್ಮ ಜನತೆಯಲ್ಲಿ ಅರ್ಧಭಾಗ ಒಂದು ತರಕಾರಿಯನ್ನೂ ತಿನ್ನೋದಿಲ್ಲ.

  4.ದಿನದಲ್ಲಿ ಒಂದು ಹಣ್ಣು ತಿನ್ನುವವರ ಸಂಖ್ಯೆ ಶೇ11. ಇದು ಅರ್ಧ ಕ್ಕಿಂತ ಹೆಚ್ಚು ಮಂದಿ ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ತೋರುತ್ತದಲ್ಲವೇ..? ಅಪೌಷ್ಟಿಕತೆಯಿಂದ ಬಳಲುವವರು ಸುಲಭವಾಗಿ ಅನಾರೋಗ್ಯಕ್ಕೀ ಡಾಗುವುದು, ಕೂಲಿ ನಾಲಿ ಮಾಡಿ ಕೂಡಿಟ್ಟು ಕೊಂಡಿದ್ದ ಹಣವನ್ನು ಚಿಕಿತ್ಸೆ ಗಾಗಿ ಖರ್ಚುಮಾಡುವುದು ಮತ್ತು ಇದು ಇವರನ್ನು ಇನ್ನೂ ಬಡವರ ನ್ನಾಗಿಸುವಂಥ ವಿಷವೃತ್ತಕ್ಕೆ ತಳ್ಳುತ್ತದೆ.

ಮೇಲಿನ ಅಂಕಿಅಂಶಗಳನ್ನು ಗಮನಿಸುವುದರಿಂದ ಅರ್ಧದಷ್ಟು ಜನರನ್ನು ಆಹಾರ ಅಭದ್ರತೆ ಕಾಡುತ್ತಿರುವುದು ಸತ್ಯ ಎಂದಾಯಿತು. ಆಹಾರ ಅಭದ್ರತೆಯ ಮೂಲದಲ್ಲಿ ಬಡತನವಿದೆ: ಅಸಮಾನತೆಯಿದೆ: ಚಾರಿತ್ರಿಕ ತಾರತಮ್ಯವಿದೆ. ಇದು ಮಾನವ ಹಕ್ಕಿನ ಉಲ್ಲಂಘನೆ. ಹೀಗಾಗಿ ಆಹಾರ ಭದ್ರತೆ ಅಭಿವೃದ್ಧಿಯ ಸಂಗತಿಯಾಗಬೇಕು ದುಃಸ್ಥಿತಿಯಲ್ಲಿರುವ ವರಿಗೆ ನೆರವು ದೊರೆಯುವಂತೆ ಮಾಡುವುದೇ ಸಾಮಾಜಿಕ ನ್ಯಾಯ. ಸಮಾಜದಲ್ಲಿ ನಮಗೆ ಏನೆಲ್ಲ ಬೇಕು, ದೊರೆಯಬೇಕು ಎಂದು ಇಷ್ಟಪಡುತ್ತೇವೋ ಅವೆಲ್ಲವೂ ಉಳಿದವರಿಗೂ ದೊರೆಯಬೇಕೆಂಬುದು ಸಾಮಾಜಿಕ ನ್ಯಾಯ. ಕಾನೂನುಗಳೂ ಆಹಾರದ ಭದ್ರತೆ, ಸಾರ್ವಭೌ ಮತ್ವವನ್ನು ಎತ್ತಿ ಹಿಡಿಯಬೇಕು ಮತ್ತು ಆಹಾರದ ಹಕ್ಕನ್ನು ರಕ್ಷಿಸಬೇಕು. ಸಮಾಜದ ಎಲ್ಲರೂ ಇದನ್ನು ಗೌರವಿಸಿ, ಸಹಕರಿಸಿ, ಸಹಬಾಳ್ವೆ ಮಾಡಬೇಕು. ಈಗ ಒಮ್ಮೆಲೆ ಸಸ್ಯಹಾರ-ಮಾಂಸಾಹಾರ ಕುರಿತ ಪರ- ವಿರೋಧದ ಸಾರ್ವಕಾಲಿಕ ಚರ್ಚೆ-ವಾಗ್ವಾದಗಳು ಕಾವೇರಿದಂತಿದೆ. ಆದ್ದರಿಂದ ಕೆಲವು ಸತ್ಯಾಂಶಗಳನ್ನು ಗಮನಿಸೋಣ:

2013-2014ರಲ್ಲಿ ನಮ್ಮ ದೇಶದದಲ್ಲಿ ಮಾಂಸದ ಉತ್ಪಾದನೆ (ಶೇಕಡಾವಾರು ಕೋಳಿ 45, ಎಮ್ಮೆ 19, ಆಡು 16, ಹಂದಿ 8, ಕುರಿ 7, ಹಸು 5 ಸೇರಿ) 100 ಲಕ್ಷ ಟನ್‌ನಷ್ಟಿತ್ತು. ಈ ಅಂಕಿ ಅಂಶವು ಮಾಂಸಾ ಹಾರವು ನಮ್ಮ ಬದುಕಿನ ಭಾಗವಾಗಿರುವ ಸಂಗತಿಯನ್ನು ತಿಳಿಸುತ್ತದೆ. ಯಾವಾಗ ವ್ಯಕ್ತಿ, ಸಮುದಾಯ, ವರ್ಗ, ದೇಶ ತನ್ನನ್ನು ತಾನೇ ಶ್ರೇಷ್ಠ ಎಂದು ಭಾವಿಸಿ ಬೀಗುತ್ತದೋ ಅದೇ ಅದರ ದುರಂತಕ್ಕೂ ಕಾರಣವಾಗುತ್ತದೆ.

ಸಮಾಜದಲ್ಲಿ ಜಾತಿ, ಧರ್ಮ, ಸ್ಥಾನ, ಅಂತಸ್ತು, ಲಿಂಗ ವರ್ಣ, ಪ್ರದೇಶ ಮುಂತಾದವುಗಳು ಸಾಮಾಜಿಕ ಸಂದ ರ್ಭಗಳಲ್ಲಿ ಮುಖ್ಯವಾಗಬಾರದು. ನಮ್ಮಲ್ಲಿ ಅರ್ಧ ದಷ್ಟು ಮಂದಿ ಬಡವರು ಅಪೌಷ್ಟಿಕತೆಯಿಂದ ಬಳಲುತ್ತಿರುವಾಗ ಅನ್ನಭಾಗ್ಯ ದಂಥ ಆಹಾರ ಭದ್ರತೆಯ ಕಾರ್ಯಕ್ರಮ ಸಾಮಾಜಿಕ ನ್ಯಾಯದ ಸಂಗತಿ ಮತ್ತು ಸಮಾನತೆ ಸಾಮಾಜಿಕ ನ್ಯಾಯದ ಅಡಿಪಾಯ. ಆಹಾರ ಭದ್ರತೆಯು ಹಕ್ಕಿನ ಸಂಗತಿಯೇ ವಿನಾ ಹಂಗಿನ ಸಂಗತಿಯಲ್ಲ.

ನಮ್ಮ ರಾಜ್ಯದ ಒಟ್ಟು ಬಜೆಟ್‌ನಲ್ಲಿ ‘ಅನ್ನಭಾಗ್ಯ’ದ ವೆಚ್ಚದ ಪ್ರಮಾಣ ಕೇವಲ ಶೇ.3ರಷ್ಟು. ಅಪೌಷ್ಟಿಕತೆಯಿಂದ ಬಳಲುವ ಬಡ ಶಾಲಾ ಮಕ್ಕಳಿಗೆ ನೀಡುವ ಹಾಲು, ಮೊಟ್ಟೆ ಕಾರ್ಯಕ್ರಮವನ್ನು ಯಾರಾದರೂ ವಿರೋಧಿಸುತ್ತಾರೆಂದರೆ ಇದು ಬಡವರ ಬಗೆಗಿನ ತಿರಸ್ಕಾರ ಮನೋ ಭಾವದ ಆಯಾಮವೆಂದೇ ಹೇಳಬೇಕಾಗುತ್ತದೆ. ಇದು ಜನರನ್ನು ಸೋಮಾರಿಗಳನ್ನಾಗಿಸುತ್ತದೆಂದು ಹೇಳುವ ಮಹಾನುಭಾವರು ಉತ್ತರಿಸ ಬೇಕಾದ ಪ್ರಶ್ನೆಯೊಂದಿದೆ; ದುಡಿಮೆ ಗಾರರು ಸೋಮಾರಿಗಳಾಗಿ ದ್ದಾರೆಂದರೆ ಈ ರಾಜ್ಯದಲ್ಲಿ ವಾರ್ಷಿಕ 240 ಲಕ್ಷ ಟನ್ ಆಹಾರವನ್ನು ಉತ್ಪಾದನೆ ಮಾಡಿದ್ದು ಯಾರು?!.ಆಹಾರ ರಾಜಕೀಯದಲ್ಲಿ ಕೆಲವೇ ಕೆಲವು ಮತಭೇದಗಳ ಕೋಮು ವಾದಿ ಜನರ ಕೈವಾಡವಿದೆ. ಉಳ್ಳವರ ಪರವಾಗಿ ಸಾವಿರಾರು ಕೋಟಿಗಳ ಪವರ್ ಸಬ್ಸಿಡಿ, ತೆರಿಗೆ ಸಬ್ಸಿಡಿ ಕೊಟ್ಟಾಗ ಚಕಾರವೆತ್ತದ ಈ ಮಂದಿ ಆಹಾರ ಸಬ್ಸಿಡಿಗೆ ಹಣವನ್ನು ಮೀಸಲಿರಿಸಿದಾಗ ಹುಯಿ ಲೆಬ್ಬಿಸುವುದೇಕೆ ಎನ್ನುವುದನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ.

ಈಗ ಆಹಾರ ವಿಜ್ಞಾನ ಮುಂದಿಡುವ ಸತ್ಯಾಂಶಗಳನ್ನು ಗಮನಿ ಸೋಣ. ಸಸ್ಯಾಹಾರ ಆರೋಗ್ಯಕರವಾದದ್ದು, ಪರಿಸರ ಸ್ನೇಹಿ, ಕಡಿಮೆ ಖರ್ಚಿನದ್ದೆಂದು ಈಗ ಪರಿಗಣಿಸಲಾಗುತ್ತಿರುವುದು ಸತ್ಯವೇ. ಕ್ರಿಯಾಶೀಲ ದೇಹಕ್ಕೆ ಬೇಕಾಗುವಷ್ಟು ಅಗತ್ಯ ಪೋಷಕಾಂಶಗಳು ದವಸ- ಧಾನ್ಯಗಳು, ಬೇಳೆಕಾಳುಗಳು, ಹಸಿರೆಲೆ ತರಕಾರಿಗಳು, ಹಣ್ಣು ಹಂಪಲುಗಳು, ಎಣ್ಣೆಕಾಳು ಬೀಜಗಳಿಂದ ಕೂಡಿದ ಸುಮ್ಮಿಶ್ರಿತ ... ಸಸ್ಯಾಹಾರದಿಂದ ಸಿಗುತ್ತವೆಂಬುದೂ ನಿಜ. ಆದರೆ ಪ್ರಾಣಿಮೂಲದ ಉತ್ತಮ ಗುಣಮಟ್ಟದ ಸಸಾರಜನಕಗಳ ಆಗರವಾದ ಮೊಟ್ಟೆ, ಹಾಲು, ಮೀನು, ಮಾಂಸ ತಿನ್ನದಿರುವವರಲ್ಲಿ ಕೆಲವು ಪೋಷಕಾಂಶ ಗಳ ಕೊರತೆ ಕಂಡುಬರುವುದೂ ನಿಜವೇ. ಹೀಗಾಗಿ ಮನುಷ್ಯ ಮಿಶ್ರಾಹಾರಿ ಎಂಬುದು ನಿರ್ವಿವಾದಿತ ಸತ್ಯ. ಮತ್ತು ಇದು ಒಳ್ಳೆಯದೇ. ಮನುಷ್ಯ ಪ್ರಾಣಿಗೆ ವೈವಿಧ್ಯಮಯವಾದ ಆಹಾರ ಪದಾರ್ಥಗಳನ್ನು ಅರಗಿಸಿಕೊಳ್ಳುವ ಸಾಮರ್ಥ್ಯವಿದೆ. ಆತ ಏನನ್ನು ತಿನ್ನಬೇಕು? ಏನನ್ನು ತಿನ್ನಬಾರದು? ಎಂಬುದನ್ನು ಆಹಾರ ವಿಜ್ಞಾನಿಗಳು ಆಹಾರಯೋಜಕರಿಂದಲೇ ತಿಳಿಯಬೇಕಿಲ್ಲ. ಇನ್ನು ಆಹಾರ ವಿಜ್ಞಾನ, ಆಹಾರ ಕೈಗಾರಿಕೆ, ಕೃಷಿ, ಸಂಪ್ರದಾಯ, ಆಚರಣೆಗಳಲ್ಲಿರುವ ಸತ್ಯ-ಮಿಥ್ಯೆಗಳನ್ನು ಗಮನಿಸೋಣ.

ಗರ್ಭಾವಸ್ಥೆ ಮತ್ತು ಹುಟ್ಟಿದಾರಭ್ಯದಿಂದ ವಯೋವೃದ್ಧರಾಗು ವವರೆಗೂ ನಮ್ಮ ಸಮಾಜದಲ್ಲಿ ಪ್ರಚಲಿತವಿರುವ ಸರಿ-ತಪ್ಪು ಆಚರಣೆಗಳನ್ನು ನೋಡೋಣ. ಆಹಾರಕ್ಕೂ ಆರೋಗ್ಯಕ್ಕೂ ಅವಿನಾಭಾವ ಸಂಬಂಧ: ನಿಕಟವಾದ ನಂಟು. ಈಗಂತೂ ಆರೋಗ್ಯವಂತರಿಗಿಂತ ಅನಾರೋಗ್ಯದಿಂದ ಬಳಲುತ್ತಿರುವವರ ಸಂಖ್ಯೆಯೇ ಹೆಚ್ಚಾದಂತೆ ಕಾಣುತ್ತಿದೆ.

ಇತ್ತೀಚಿನ ದಶಕಗಳಲ್ಲಿ ಒಮ್ಮೆಲೆ ಭುಗಿಲೆದ್ದು ಕಾಡುತ್ತಿರುವ ಬೊಜ್ಜು, ಅತಿರಕ್ತದೊತ್ತಡ. ಡಯಾಬಿಟಿಸ್, ಹೃದಯರೋಗಗಳು ಮತ್ತು ಕ್ಯಾನ್ಸರ್ ಮುಂತಾದ ಕಾಯಿಲೆಗಳ ಪ್ರಮುಖ ಕಾರಣಗಳನ್ನು ಗಮನಿಸಿದರೆ ಅದು ಸದ್ಯದ ಆಹಾರ ಪದ್ಧತಿಯತ್ತಲೇ ಬೆರಳು ತೋರುತ್ತಿದೆ.

ನಮ್ಮ ಬಹುತೇಕ ಆಹಾರ ಪದಾರ್ಥಗಳು ಉತ್ಪಾದನೆ ಯಾಗುತ್ತಿರುವುದು ಸಿದ್ಧ ರಾಸಾಯನಿಕ ಗೊಬ್ಬರಗಳು ಮತ್ತು ಅಪಾಯಕಾರಿ ಕೀಟನಾಶಕಗಳನ್ನು ಬಳಸಿ ಬೆಳೆದ ಹೊಲ ಗದ್ದೆ ತೋಟಗಳಿಂದ. ಭೂಮಿಯ ಮೇಲೆ ಬಿದ್ದ ನೀರು ಸಂಗ್ರಹವಾಗುವ ಕೆರೆ ಕಟ್ಟೆ ಕಾಲುವೆ, ನದಿಗಳು ಸೇರಿದಂತೆ ಕೈಗಾರಿಕೆಗಳ ತ್ಯಾಜ್ಯದಿಂದ ಸಮುದ್ರವೂ ಕಲುಷಿತವಾಗುತ್ತಿದೆ. ಹಿಂದಿನ ರೀತಿಯ ಮನೆ ಊಟಗಳೆಲ್ಲಾ ಮಾಯವಾಗಿವೆ. ಆರ್ಥಿಕವಾಗಿ ಚೇತರಿಸಿಕೊಂಡ ಜನರಲ್ಲಿ ಆಹಾರದ ಕೊಳ್ಳುಬಾಕತನ ಹೆಚ್ಚುತ್ತಿದೆ. ಈಗ ಮಾನವನ ಆಹಾರದಲ್ಲಿ ಆಘಾತಕಾರಿ ಬದಲಾವಣೆಗಳಾಗಿವೆ. ಎಲ್ಲಿ ನೋಡಿದರಲ್ಲಿ ಯಾವಾಗಲೆಂದರೆ ಆವಾಗ ಆಹಾರ, ತಿನಿಸು ಮತ್ತು ಡಬ್ಬಿ, ಪ್ಯಾಕೆಟ್, ಸ್ಯಾಶೆಗಳಲ್ಲಿ ಸಿದ್ಧ ಆಹಾರ ಪದಾರ್ಥಗಳು ಸಿಗುತ್ತಿವೆ. ಪಾರಂಪರಿಕವಾದ ಸಂಪ್ರದಾಯದ ಆಹಾರ ಪದ್ಧತಿ ಮೂಲೆಗುಂಪಾಗಿಬಿಟ್ಟಿದೆ. ಇದಕ್ಕೆ ವಿರುದ್ಧವಾಗಿ ಸಂಪ್ರದಾಯದಲ್ಲಿಲ್ಲದ ತಿನಿಸುಗಳೇ ಮಾನವನ ನಿತ್ಯದ ಆಹಾರವಾಗಿವೆ. ಆಹಾರಕ್ಕೆ ಸಂಬಂಧಿಸಿದಂತೆ ಸುಳ್ಳುಸುಳ್ಳೇ ‘ಉತ್ಕೃಷ್ಟ’ವೆಂದು ಹೇಳಿಕೊಂಡು ಮಂಕುಬೂದಿ ಎರಚುವ ಆಕ್ರಮಣಶೀಲ ಜಾಹೀರಾತುಗಳು ಜನರನ್ನು ಸಮ್ಮೋಹನಗೊಳಿಸಿವೆ.

ಆಹಾರಕ್ಕೆ ಸಂಬಂಧಿಸಿದಂತೆ ನಮ್ಮ ಜನರಲ್ಲಿ ಅಸಂಖ್ಯ ತಪ್ಪು ನಂಬಿಕೆಗಳು, ಕಂದಾಚಾರಗಳು, ಮೂಢ ನಂಬಿಕೆಗಳು, ಮಿಥ್ಯೆಗಳು ಆರೋಗ್ಯಕ್ಕೆ ಅಪಾಯ ತರುವ ಅರ್ಥಹೀನ ಸಂಪ್ರದಾಯಗಳು ಆಚರಣೆಯಲ್ಲಿವೆ. ಗರ್ಭಾವಸ್ಥೆಯಿಂದ ಹಿಡಿದು ವೃದ್ಧಾಪ್ಯದವರೆಗೆ ಪ್ರಚಲಿತವಿರುವ ಕೆಲವು ಅವೈಜ್ಞಾನಿಕ ಆಘಾತಕಾರಿ ಆಚರಣೆಗಳನ್ನು ಈಗ ಗಮನಿಸೋಣ.:

     1)ಬಸುರಿಯರಿಗೆ ಪರಂಗಿ ಹಣ್ಣು/ ಪಪಾಯ, ಕರಿ ಎಳ್ಳು ಮುಂತಾದುವನ್ನು ತಿಂದರೆ ಗರ್ಭಪಾತವಾಗುತ್ತದೆಂಬ ತಪ್ಪು ನಂಬಿಕೆಯಿಂದ ತಡೆಹಿಡಿಯುತ್ತಾರೆ. ಬದನೆಕಾಯಿ, ದಂಟಿನ ಸೊಪ್ಪು ಮುಂತಾದುವನ್ನು ಅಲರ್ಜಿ ಆಗುತ್ತದೆಂದು ಕೊಡುವುದಿಲ್ಲ.

     2)ಬೆಳಗಿನ ಉಪಾಹಾರವನ್ನು ಗರ್ಭಿಣಿಯರು ತಿನ್ನಬಾರದೆಂದೂ ಕಾಫಿ ಕುಡಿಯುವುದರಿಂದ ಹೆಚ್ಚಾಗಿ ನೀರು ಕುಡಿಯುವುದರಿಂದ ಗರ್ಭಿಣಿಯರು ದಪ್ಪಗಾಗುತ್ತಾರೆಂಬ ಹುಸಿ ನಂಬಿಕೆ ಕೆಲವು ಕಡೆ ಉಂಟು.

     3)ಮೊಟ್ಟೆ, ಮೀನು, ಮಾವಿನ ಹಣ್ಣು, ಬೆಲ್ಲ, ಬದನೆ ಇವು ‘ಉಷ್ಣ’ ಉಂಟುಮಾಡುವ ಪದಾರ್ಥಗಳೆಂದು ತಡೆಹಿಡಿಯುವ ಅವೈಜ್ಞಾನಿಕ ಆಚರಣೆಗಳುಂಟು: ಹಾಗೆಯೇ ಮೊಸರು ಸೀಬೆಕಾಯಿ, ಸೀತಾಫಲ, ಕಲ್ಲಂಗಡಿ, ಸೇಬು ಹಣ್ಣು ‘ಶೀತ’ ಉಂಟುಮಾಡುತ್ತವೆಂಬ ತಪ್ಪುಕಲ್ಪನೆ ಉಂಟು.

     4)ಬಟಾಣಿ, ಹುರುಳಿಕಾಳು. ಆಲೂಗಡ್ಡೆ, ಟೊಮ್ಯಾಟೋ, ಸಿಹಿ ಕುಂಬಳ ಇವು ವಾಯು ಉಂಟುಮಾಡುವ ಪದಾರ್ಥಗಳೆಂಬ ತಪ್ಪು ಕಲ್ಪನೆ ಇದೆ.

     5)ರಾಗಿ, ನೇರಳೆ, ಕರಿ ಎಳ್ಳು, ಇಂತಹ ಕಪ್ಪು ಬಣ್ಣ ಇರುವ ಪದಾರ್ಥಗಳನ್ನು ಗರ್ಭಿಣಿ ಸೇವಿಸಿದರೆ ಹುಟ್ಟುವ ಮಗು ಕಪ್ಪಾಗಿ ಹುಟ್ಟುತ್ತದೆಂಬ ತಪ್ಪು ನಂಬಿಕೆ ಚಾಲ್ತಿಯಲ್ಲಿದೆ.

     6)ಬೇಳೆಗಳ ಪೈಕಿ ತೊಗರಿಯೇ ಶ್ರೇಷ್ಠ; ಇತರ ಬೇಳೆ ಕಾಳುಗಳು ತಾಯಿಗೂ ಮಗುವಿಗೂ ಹಾನಿ ಉಂಟು ಮಾಡುತ್ತವೆಂಬ ತಪ್ಪು ಗ್ರಹಿಕೆ ಅನೇಕರಲ್ಲಿದೆ.

     7)ರಕ್ತಹೀನತೆ ತಡೆಯಲು ಕೊಡುವ 100 ಮಾತ್ರೆಗಳನ್ನು ಪೂರ್ತಿಯಾಗಿ ನುಂಗಿದರೆ ಮಗು ದಪ್ಪಗಾಗಿ ಬೆಳೆದು ಹೆರಿಗೆ ಕಷ್ಟವಾಗುತ್ತದೆಂಬ ಅವೈಜ್ಞಾನಿಕ, ಅಪಾಯಕಾರಿ ನಂಬಿಕೆ

     8)ಅಪೌಷ್ಟಿಕತೆ ತಡೆಯಲು, ಸಸಾರಜನಕ ಮೂಲವಾಗಿರುವ ಉತ್ತಮ ಮೊಟ್ಟೆ ತಿಂದರೆ ‘ಹೀಟು’ ಜಾಸ್ತಿ ಎಂಬ ತಳಬುಡವಿಲ್ಲದ ತಪ್ಪು ಆಚರಣೆ; ಮಾಂಸಾಹಾರ ಸೇವಿಸಬಾರದೆಂಬ ಕಂದಾಚಾರಗಳಿವೆ.

     9)ಗರ್ಭಿಣಿಯರಿಗೆ ಅಗತ್ಯವಾಗಿ ಕೊಡಬೇಕಾಗಿರುವ ವೈವಿಧ್ಯಮಯ ಹಣ್ಣು, ತರಕಾರಿ ಮತ್ತು ಸೊಪ್ಪು ಬಳಸಿದರೆ ಭೇದಿಯಾಗುವುದೆಂಬ ಭ್ರಮೆ.

     10)ಟೊಮ್ಯಾಟೋ ಜ್ಯೂಸ್, ಕಬ್ಬಿನ ಹಾಲು, ನಿಂಬೆ ಪಾನಕ ಕುಡಿದರೆ ನೆಗಡಿ-ಕೆಮ್ಮು ಬರುತ್ತದೆಂಬ ಊಹೆ.

     11)ಗರ್ಭಿಣಿಯರು ಹಾಲು ಮತ್ತು ಮೀನು ಒಂದೇ ದಿನ ಸೇವಿಸಿದರೆ ಚರ್ಮ ಬಿಳುಚಿಕೊಳ್ಳುತ್ತದೆಂಬ ಅವೈಜ್ಞಾನಿಕ, ಆಧಾರ ರಹಿತ ಮಾತು...

ಹೀಗೆ ಇಲ್ಲ ಸಲ್ಲದ ಸಂದೇಹಗಳು-ಊಹಾಪೋಹಗಳು ನಮ್ಮ ಜನರಲ್ಲಿವೆ. ಇವುಗಳನ್ನು ದೂರವಿರಿಸಿ ಸರಿಯಾದ ಗರ್ಭಿಣಿ ಆರೈಕೆ ಕ್ರಮಗಳನ್ನು ಅನುಸರಿಸಿ ಆರೋಗ್ಯವಂತ ತಾಯಿಯರಾಗಿ ಆರೋಗ್ಯವಂತ ಮಗುವಿಗೆ ಜನ್ಮ ನೀಡುವಂತಾಗಬೇಕು. ‘ನಮ್ಮ ಹಿರಿಯರು ಮಾಡಿಕೊಂಡು ಬಂದಿದ್ದಾರೆ’ ಎಂದು ಅಂಧಾನುಕರಣೆಗಳನ್ನು ಮುಂದುವರಿಸದೆ ಸತ್ಯಾಂಶಗಳಿರುವ, ವೈಜ್ಞಾನಿಕ ತಳಹದಿಯ ಮೇಲೆ ನಿಂತಿರುವ ನಿಲುವುಗಳನ್ನು ಆಚರಿಸಬೇಕು.

ಈಗ ಬಾಣಂತಿತನಕ್ಕೆ ಸಂಬಂಧಿಸಿದಂತೆ ಇರುವ ತಪ್ಪು ಆಚರಣೆಗಳನ್ನು ಗಮನಿಸೋಣ:

     1)ಆಗ ತಾನೇ ಹುಟ್ಟಿದ ಮಗುವಿಗೆ ಅರ್ಧ ಗಂಟೆಯೊಳಗೆ ಮಗುವಿನ ಆರೋಗ್ಯ, ಉಳಿವಿಗೆ ಅಗತ್ಯವಾದ, ಪೌಷ್ಟಿಕಾಂಶಗಳುಳ್ಳ ಮೊದಲ ಎದೆ ಹಾಲು ಕುಡಿಸದೆ, ಅದು ಹಳದಿಯಾಗಿರುತ್ತದೆ: ಹಳತಾಗಿರುತ್ತದೆ ಎಂದು ಅತ್ಯಮೂಲ್ಯವಾದದ್ದನ್ನೇ ಹೊರಚೆಲ್ಲುವುದು.

     2)ಬಾಣಂತಿಯರು ಹೆರಿಗೆಯ ನಂತರದ ಸಮಯದಲ್ಲಿ ನೀರು ಹೆಚ್ಚು ಕುಡಿದರೆ ಎದೆಹಾಲು ನೀರು ನೀರಾಗುತ್ತದೆಂಬ ತಪ್ಪು ಕಲ್ಪನೆ.

     3)ಮನೆಯಲ್ಲಿ ಎಲ್ಲರಿಗೂ ಮಾಡಿರುವ ಆಹಾರ ಪದಾರ್ಥಗಳನ್ನೇ ಬಾಣಂತಿಯರಿಗೂ ಕೊಟ್ಟರೆ ಮಗು ಕಾಯಿಲೆ ಬೀಳುತ್ತದೆಂಬ ತಪ್ಪು ಕಲ್ಪನೆ.

     4)ನವಜಾತ ಶಿಶುಗಳಿಗೆ ತಾಯಿಯ ಎದೆಹಾಲು ಹೊರತುಪಡಿಸಿ ಮೊದಲ ಐದು ತಿಂಗಳು ಮತ್ತೇನೂ ಕೊಡುವ ಅಗತ್ಯವಿಲ್ಲ: ಮಾತ್ರವಲ್ಲ ಏನನ್ನೂ ಕೊಡಬಾರದು ಕೂಡ. ಆದರೆ ಮಗುವಿಗೆ ಸುಲಭವಾಗಿ ಭೇದಿ ಆಗುತ್ತದೆಂದು ತುಪ್ಪ, ಜೇನು, ಸಕ್ಕರೆ ನೀರು, ಹಸುವಿನ ಹಾಲು...

ಇತ್ಯಾದಿ ಕೊಡುವ ತಪ್ಪು ಆಚರಣೆಗಳು ಪ್ರಚಲಿತವಾಗಿವೆ. ಮಗುವಿಗೆ ಅತ್ಯಗತ್ಯವಾದ ‘ಕೊಲಸ್ಟ್ರಂ’ ಎಂಬ ಪೌಷ್ಟಿಕಾಂಶಗಳ ಗಣಿಯಾಗಿರುವ ಹಳದಿ ಬಣ್ಣದ ಮೊದಲ ಮೊಲೆ ಹಾಲು (ಗಿಣ್ಣುಹಾಲು)ಚೆಲ್ಲುವುದು ಅಪರಾಧ. ಹುಟ್ಟಿದ ಮಗುವಿಗೆ ಬೆಲ್ಲ, ಬೆಣ್ಣೆ, ಧೂಪ, ಧೂಳತ ತಿನ್ನಿಸುವುದು ಕಂದಾಚಾರ. ಆಹಾರಕ್ಕೆ ಸಂಬಂಧಿಸಿದ ಮಿಥ್ಯೆಗಳಿಗೆ ಅಂತ್ಯವೇ ಇಲ್ಲವೇನೋ!? ಎಂಬಂಥ ಪರಿಸ್ಥಿತಿ ಮುಂದುವರಿಯುತ್ತಿರುವುದು ನಿಜಕ್ಕೂ ಖೇದಕರವೇ.

ರಾಗಿ, ಜೋಳ, ಸಜ್ಜೆ, ನವಣೆ, ಸಾವೆ/ಸಾಮೆ, ಹಾರಕ, ಬರಗು, ಓಡಲು, ಅಕ್ಕಿ, ಗೋಧಿ ಮುಂತಾದ ಧಾನ್ಯಗಳು ನಮಗೆ ಶಕ್ತಿಯನ್ನೊದಗಿಸುವಂಥ ಆಹಾರ ಪದಾರ್ಥಗಳು.

ಕಿರುಧಾನ್ಯಗಳನ್ನು ಬಳಸುವವರು ಬಡವರು ಮಾತ್ರ ಎಂಬ ಅಹಮಿಕೆಯ ತಾಕಲಾಟದಲ್ಲಿ ಹೆಚ್ಚಿನ ಜನರು ಮುಳುಗಿದ್ದಾರೆ. ಸತ್ಯಾಂಶವೆಂದರೆ ಯಾವುದೇ ಅಳತೆಗೋಲನ್ನು ಉಪಯೋಗಿಸಿ ಅಕ್ಕಿ-ಗೋಧಿಯಲ್ಲಿರುವ ಖನಿಜಾಂಶ ಪ್ರಮಾಣವನ್ನು ಕಿರುಧಾನ್ಯಗಳಲ್ಲಿರುವ ಪೋಷಕಾಂಶಗಳೊಂದಿಗೆ ಹೋಲಿಸಿದರೆ ಅಕ್ಕಿ-ಗೋಧಿಗಳು ಕಿರುಧಾನ್ಯಗಳ ಹತ್ತಿರಕ್ಕೂ ಬರುವುದಿಲ್ಲ!

ನಾರಿನಂಶವನ್ನು ನೋಡಿದರೆ ಪ್ರತಿಯೊಂದು ಕಿರುಧಾನ್ಯವೂ ಅಕ್ಕಿ-ಗೋಧಿಗಿಂತ ಹೆಚ್ಚಿನ ನಾರಿನಂಶವನ್ನು ಹೊಂದಿದೆ. ಕ್ಯಾಲ್ಸಿಯಂನ್ನು ಗಮನಿಸಿದರೆ ರಾಗಿಯಲ್ಲಿ 30ಪಟ್ಟು ಹೆಚ್ಚು ಕ್ಯಾಲ್ಸಿಯಂ ಇದ್ದರೆ, ಮಿಕ್ಕ ಯಾವುದೇ ಕಿರುಧಾನ್ಯ ಕನಿಷ್ಠ ಎರಡು ಪಟ್ಟಾದರೂ ಹೆಚ್ಚು ಕ್ಯಾಲ್ಸಿಯಂ ಹೊಂದಿದೆ.

ಕಬ್ಬಿಣಾಂಶವನ್ನು ನೋಡಿದರೆ ಸಾವೆ ಮತ್ತು ನವಣೆಗೆ ಅಕ್ಕಿ-ಗೋಧಿಗಳು ಸರಿಸಾಟಿಯೇ ಅಲ್ಲ.

ಇಂತಹ ಶರ್ಕರ-ಪಿಷ್ಟಾದಿಗಳ ಪ್ರಮಾಣ ನಮ್ಮ ನಿತ್ಯದ ಆಹಾರದಲ್ಲಿ ಶೇ.65ರಷ್ಟು ಇರಬೇಕಾಗುತ್ತದೆ.

ಬೇಳೆ, ಕಾಳು, ಮೊಟ್ಟೆ, ಮೀನು, ಮಾಂಸ ಮುಂತಾದ ಆಹಾರ ಪದಾರ್ಥಗಳು ದೇಹದ ಬೆಳವಣಿಗೆಗೆ, ವಿಕಸನಕ್ಕೆ, ಜೀವಕೋಶಗಳ ರಿಪೇರಿಗೆ ಬೇಕಾಗಿರುವಂಥವು: ಇವುಗಳ ಪ್ರಮಾಣ ನಿತ್ಯದ ಆಹಾರದಲ್ಲಿ ಶೇ.20ರಷ್ಟಾದರೂ ಇರಬೇಕು.

ನಮ್ಮ ತಾಯಂದಿರು; ಅವರು ಮಕ್ಕಳಿದ್ದಾಗ ತಿನ್ನುತ್ತಿದ್ದ ಮತ್ತು ನಾವು ಮಕ್ಕಳಿದ್ದಾಗ ನಮ್ಮ ತಾಯಂದಿರು ನಮಗೆ ತಿನ್ನಿಸುತ್ತಿದ್ದ ಆಹಾರ ಪದ್ಧತಿ ಈಗ ಆಧುನಿಕತೆಯ ನೆಪದಲ್ಲಿ ಬಹುತೇಕ ಮನೆಗಳಿಂದ ಕಾಣೆಯಾಗಿರುವುದು ವಿಪರ್ಯಾಸ; ಅಸಹಜ.

ಸಾಂಪ್ರದಾಯಿಕವಾಗಿ ಆಹಾರ ಪದಾರ್ಥಗಳನ್ನು ಒದಗಿಸಿಕೊಳ್ಳುತ್ತಿದ್ದ, ವೈವಿಧ್ಯಮಯವಾಗಿ ಅಡುಗೆಮಾಡುತ್ತಿದ್ದ, ಉಂಡು ಖುಷಿಪಡುತ್ತಿದ್ದ ಆರೋಗ್ಯ ವಿಧಾನಗಳನ್ನು ಮರಳಿ ತಂದುಕೊಳ್ಳುವ ಅಗತ್ಯವಿದೆ.

Writer - ಡಾ. ಎಂ.ಬಿ.ರಾಮಮೂರ್ತಿ

contributor

Editor - ಡಾ. ಎಂ.ಬಿ.ರಾಮಮೂರ್ತಿ

contributor

Similar News