×
Ad

ವಿವಿ ವೆಬ್‌ಸೈಟ್‌ನಲ್ಲಿ ಕನ್ನಡ ಕಡ್ಡಾಯಕ್ಕೆ ಆದೇಶ

Update: 2018-01-06 23:02 IST

ಬೆಂಗಳೂರು, ಜ.6: ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳ ಅಂತರ್ಜಾಲ (ವೆಬ್‌ಸೈಟ್)ಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಇರಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆದೇಶಿಸಿದೆ.

ಬಹುತೇಕ ವಿಶ್ವವಿದ್ಯಾಲಯಗಳ ವೆಬ್‌ಸೈಟ್ ಹಾಗೂ ಮಾಹಿತಿಗಳು ಇಂಗ್ಲಿಷ್ ಭಾಷೆಯಲ್ಲಿವೆ. ಹೀಗಾಗಿ, ಎಲ್ಲ ವಿಶ್ವವಿದ್ಯಾಲಯಗಳ ವೆಬ್‌ಸೈಟ್‌ನ ಪ್ರಧಾನ ಪುಟ ಕನ್ನಡದಲ್ಲಿರುವಂತೆ ಮರು ವಿನ್ಯಾಸಗೊಳಿಸಿ, ಕನ್ನಡದಲ್ಲಿ ಮಾಹಿತಿ ಸಿಗುವಂತೆ ಬದಲಿಸಿ, ಆಯ್ಕೆ ಭಾಷೆಯಾಗಿ ಇಂಗ್ಲಿಷ್ ಬಳಸಬಹುದೆಂದು ಪ್ರಾಧಿಕಾರ ಹೇಳಿದೆ.

ರಾಜ್ಯದ ಕಲಬುರಗಿ, ಕುವೆಂಪು ವಿಶ್ವವಿದ್ಯಾಲಯ ಸೇರಿದಂತೆ 15 ವಿವಿಗಳ ವೆಬ್ ಮುಖ ಪುಟದಲ್ಲಿ ಆಂಗ್ಲ ಭಾಷೆಯಲ್ಲಿದ್ದರೂ, ಸಹ ಕನ್ನಡದ ಆಯ್ಕೆಯನ್ನು ನೀಡಿವೆ. ಕನ್ನಡದ ಆಯ್ಕೆ ನಂತರ ಒಳಮಾಹಿತಿಗಳು ಇಂಗ್ಲಿಷ್‌ನಲ್ಲಿ ತೆರೆದುಕೊಳ್ಳುತ್ತವೆ. ಅಲ್ಲದೆ, ಕನ್ನಡ, ಹಂಪಿ ವಿವಿ ಹೊರತುಪಡಿಸಿ, ಇನ್ನುಳಿದ ವಿವಿಗಳು ವಿದ್ಯಾರ್ಥಿ, ಸಾರ್ವಜನಿಕರಿಗೆ ಕನ್ನಡದಲ್ಲಿ ಮಾಹಿತಿಗಳನ್ನು ನೀಡುತ್ತಿಲ್ಲ ಎಂದು ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರಕಾರವು ಆಡಳಿತದ ಎಲ್ಲ ಹಂತದಲ್ಲಿ ಏಕರೂಪ ಜಾಲತಾಣ ನಿರ್ವಹಣೆ, ಶಿಷ್ಟತೆ ಕುರಿತಂತೆ ಈಗಾಗಲೇ ಪ್ರಾಧಿಕಾರವು ಸಲ್ಲಿಸಿರುವ ವರದಿಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಅಲ್ಲದೇ, 1983 ರಲ್ಲಿ ರಾಜ್ಯ ಸರಕಾರವು ಎಲ್ಲ ಹಂತದಲ್ಲೂ ಕಡ್ಡಾಯವಾಗಿ ಕನ್ನಡ ಭಾಷೆಯ್ನು ಅನುಷ್ಠಾನಗೊಳಿಸಲು ಆದೇಶಿಸಿದೆ. ಆದುದರಿಂದ, ಕೂಡಲೇ, ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು, 15 ದಿನಗಳೊಳಗೆ ವೆಬ್‌ಸೈಟ್‌ಗಳಲ್ಲಿ ಇಂಗ್ಲಿಷ್ ಕೈಬಿಡಬೇಕು. ಪ್ರಧಾನ ಪುಟದೊಂದಿಗೆ ಒಳಮಾಹಿತಿಗಳು ಸಹ ಕಡ್ಡಾಯವಾಗಿ ಕನ್ನಡದಲ್ಲಿಯೇ ಇರುವಂತೆ ರೂಪಿಸಬೇಕು. ಆಯ್ಕೆ ಭಾಷೆಯಾಗಿ ಇಂಗ್ಲಿಷ್ ಬಳಸುವುದಕ್ಕೆ ಅಭ್ಯಂತವಿರಲ್ಲ. ಇಲ್ಲದಿದಲ್ಲಿ, ಈ ಸಂಬಂಧ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News