ದಿಲ್ಲಿ ದರ್ಬಾರ್

Update: 2018-01-06 18:47 GMT

ಇದು ರಾಹುಲ್ ಕಾಲ
ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತು ಮತ್ತು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆಯಾಗುತ್ತಿದ್ದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಸ್ವಲ್ಪಮಟ್ಟಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಹುಲ್‌ಗಾಂಧಿಯವರು ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶದ ಪರಾಮರ್ಶೆಗಾಗಿ ತಕ್ಷಣ ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಭಾರತದ ಅತ್ಯಂತ ಪ್ರಾಚೀನ ಪಕ್ಷದಲ್ಲಿ ಬದಲಾವಣೆಯ ಗಾಳಿ ಬೀಸಿರುವುದನ್ನು ತೋರಿಸಿಕೊಟ್ಟಿದೆ.

ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಯಾವುದು ಕಾರಣವಾಯಿತು ಎನ್ನುವುದನ್ನು ತಿಳಿದುಕೊಳ್ಳಲು ರಾಹುಲ್‌ಗಾಂಧಿ ಹಿಂದೆಂದೂ ಹೀಗೆ ರಾಜ್ಯಗಳಿಗೆ ಭೇಟಿ ನೀಡಿದ ನಿದರ್ಶನ ಇಲ್ಲ. ಇಂಥ ಕಾರಣಗಳ ವಿಶ್ಲೇಷಣೆಗೆ ಸಮಿತಿಯೊಂದನ್ನು ರಚಿಸಿ, ಅದು ಒಂದು ತಿಂಗಳಲ್ಲಿ ವರದಿ ನೀಡಬೇಕಾಗುತ್ತದೆ. ಹೀಗೆ ಅವನತಿಯ ಕಾರಣಗಳನ್ನು ತಿಳಿದುಕೊಳ್ಳಲು ರಾಹುಲ್ ಉತ್ಸುಕರಾಗಿರುವುದು ಸ್ಪಷ್ಟ. ಚುನಾವಣೆ ಮುಗಿದ ಬಳಿಕ ಎಲ್ಲೂ ಹಿಂದೆ ರಾಹುಲ್ ರಾಜ್ಯಗಳಿಗೆ ಭೇಟಿ ನೀಡುತ್ತಿರಲಿಲ್ಲ. ಪರಿಣಾಮ? ಉತ್ತರ ಪ್ರದೇಶ, ಅಸ್ಸಾಂ, ಮಹಾರಾಷ್ಟ್ರ, ಹರ್ಯಾಣ ಮತ್ತಿತರ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿಗೆ ಏನು ಕಾರಣ ಎನ್ನುವುದು ಇಂದಿಗೂ ಅವರಿಗೆ ತಿಳಿದಿಲ್ಲ. ಆದರೆ ಈ ಬಾರಿ ರಾಹುಲ್ ಭಿನ್ನವಾಗಿ ಕ್ರಮ ಕೈಗೊಂಡಿದ್ದಾರೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶಕ್ಕೆ ಸ್ವತಃ ಭೇಟಿ ನೀಡಿ ವಾಸ್ತವ ಮಾಹಿತಿಯನ್ನು ನೇರವಾಗಿ ಪಡೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದು ಪಕ್ಷದ ಸಾಂಸ್ಥಿಕ ಸ್ವರೂಪವನ್ನು ಪುನಾರಚಿಸುವಲ್ಲಿ ಮತ್ತು ಪಕ್ಷದ ಪುನಶ್ಚೇತನದ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಲಿದೆ ಎನ್ನುವುದು ಪಕ್ಷದ ತಳಹಂತದ ನಾಯಕರ ಅಭಿಪ್ರಾಯ. ಆದರೆ ಮತ್ತೆ ಕೆಲವರ ಅಭಿಪ್ರಾಯವೇ ಬೇರೆ. ಹಿಂದಿನ ಅನುಭವಗಳಿಂದ ರಾಹುಲ್ ಪಾಠ ಕಲಿತಿದ್ದಾರೆ ಎನ್ನುವುದು ಬೆಂಬಲಿಗರ ವಿಶ್ಲೇಷಣೆ.


ಮತ್ತೊಂದು ಮಾಸ್ಟರ್ ಸ್ಟ್ರೋಕ್?
ಗುಜರಾತ್ ಫಲಿತಾಂಶದ ಬಳಿಕ, ಲೋಕಸಭೆ ಚುನಾವಣೆಯ ಜತೆಜತೆಗೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ ಮತ್ತು ಮಿಜೋರಾಂ ವಿಧಾನಸಭೆಗಳಿಗೂ ಚುನಾವಣೆ ನಡೆಸುವ ಅವಕಾಶಗಳು ಉಜ್ವಲವಾಗುತ್ತಿವೆ. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಡದಲ್ಲಿ ಕಾಂಗ್ರೆಸ್ ತೀವ್ರ ಪೈಪೋಟಿ ನೀಡಲಿದೆ ಎಂದು ಮೋದಿ ಹಾಗೂ ಅಮಿತ್ ಶಾ ಸ್ಪಷ್ಟವಾಗಿ ಕಂಡುಕೊಂಡಂತಿದೆ ಎಂದು ದಿಲ್ಲಿ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಈ ರಾಜ್ಯಗಳಲ್ಲಿ ಬಿಜೆಪಿ ಸಪ್ಪೆಪ್ರದರ್ಶನ ನೀಡಿದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಭವಿಷ್ಯಕ್ಕೆ ಅದು ಮಾರಕವಾಗಬಹುದು ಎಂಬ ಲೆಕ್ಕಾಚಾರ ರಾಜಕೀಯ ಪಂಡಿತರಲ್ಲಿದೆ. ಆದರೆ ಲೋಕಸಭಾ ಚುನಾವಣೆಯನ್ನು ಹಿಂದೂಡಿದರೆ, ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಮೋದಿ ಮ್ಯಾಜಿಕ್ ಪಕ್ಷವನ್ನು ಉಳಿಸಬಹುದು ಎನ್ನುವುದು ಇವರ ಅನಿಸಿಕೆ. ಶಿವರಾಜ್‌ಸಿಂಗ್ ಚೌಹಾಣ್, ವಸುಂಧರಾರಾಜೇ ಮತ್ತು ರಮಣ್‌ಸಿಂಗ್ ಅವರ ಒಲವು ಕೂಡಾ ಒಟ್ಟಿಗೇ ಚುನಾವಣೆ ನಡೆಸುವ ಬಗ್ಗೆ ಇದೆ ಎನ್ನುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಇದು ಮತ್ತೊಂದು ಮಾಸ್ಟರ್‌ಸ್ಟ್ರೋಕ್ ಆಗಲಿದೆ ಎಂಬ ಅನಿಸಿಕೆ ಸರಕಾರದ ಬೆಂಬಲಿಗರದ್ದು. ಆದರೆ ಇದು ಸಾಧ್ಯವಾದೀತೇ?


ಚೊಚ್ಚಲ ಭಾಷಣಕ್ಕೆ ಕಾಯಬೇಕು!
ತ್ರಿವಳಿ ತಲಾಖ್ ರಾಜ್ಯಸಭೆಯಲ್ಲಿ ತನ್ನ ಮೊದಲ ಆದ್ಯತೆ ಎಂದು ಸರಕಾರ ಎಲ್ಲರಿಗೂ ಹೇಳುತ್ತಲೇ ಬಂದಿದೆ. ಆದರೆ ಅದು ಗುರುವಾರ ಮೊದಲು ಚರ್ಚೆಗೆ ಎತ್ತಿಕೊಂಡದ್ದು ಜಿಎಸ್‌ಟಿ ತಿದ್ದುಪಡಿ ಮಸೂದೆ. ಇದು ಬಹಳಷ್ಟು ಮಂದಿಗೆ ಅಚ್ಚರಿ ತಂದಿತು. ಬಿಜೆಪಿಯ ಬಹಳಷ್ಟು ಮಂದಿ ಮುಖಂಡರು, ಬಿಜೆಪಿ ಅಧ್ಯಕ್ಷ ಅಮಿತ್ ಶಾ ತ್ರಿವಳಿ ತಲಾಖ್ ಬಗೆಗಿನ ಚರ್ಚೆಯಲ್ಲಿ ಚೊಚ್ಚಲ ಭಾಷಣ ಮಾಡಲಿದ್ದಾರೆ ಎಂದು ಹೇಳಿಕೊಂಡಿದ್ದರು. ಜಿಎಸ್‌ಟಿ ಮಸೂದೆ ಬಗ್ಗೆ ಮಾತನಾಡಲು ಪಕ್ಷ ಬೇರೆಯವರನ್ನು ನಿಯೋಜಿಸಿತ್ತು. ಆದಾಗ್ಯೂ ರಾಜ್ಯಸಭೆಯ ಉಪ ಸಭಾಪತಿ ಪಿ.ಜೆ.ಕುರಿಯನ್ ಅವರು, ಜಿಎಸ್‌ಟಿ ಮಸೂದೆಯನ್ನು ಚರ್ಚೆಗೆ ಕೈಗೆತ್ತಿಕೊಳ್ಳುವ ಮೊದಲು, ತ್ರಿವಳಿ ತಲಾಖ್ ಮಸೂದೆಯನ್ನು ಅಯ್ದ ಸಮಿತಿಗೆ ಒಪ್ಪಿಸುವ ಕುರಿತ ನಿಲುವಳಿಯ ಪರವಾಗಿ ಮತದಾನ ನಡೆಸಲು ನಿರ್ಧರಿಸಿದರು. ವಿರೋಧ ಪಕ್ಷಗಳು ಒಕ್ಕೊರಲಿನಿಂದ ಸದನದ ಮುಂದೂಡಿಕೆಗೆ ಒತ್ತಾಯಿಸಿದರು. ಇದರಿಂದಾಗಿ ಶಾ ಅವರಿಗೆ ಚೊಚ್ಚಲ ಬಾರಿಗೆ ಸದನದಲ್ಲಿ ಮಾತನಾಡುವ ಅವಕಾಶ ತಪ್ಪಿಹೋಯಿತು. ಬಿಜೆಪಿ ಸದಸ್ಯರು ಎಲ್ಲರೂ ಹಾಜರಾಗಿರುವಾಗ ಮಾತನಾಡುವ ಮೂಲಕ ದೊಡ್ಡ ಮಟ್ಟದ ಪರಿಣಾಮ ಬೀರುವುದು ಅವರ ಉದ್ದೇಶವಾಗಿತ್ತು. ಟಿವಿ ಚಾನಲ್‌ಗಳು ಅವರ ಭಾಷಣವನ್ನು ನೇರಪ್ರಸಾರ ಮಾಡಲು ಕೂಡಾ ಸಿದ್ಧತೆ ನಡೆಸಿಕೊಂಡಿದ್ದವು!


ಕಲ್ಯಾಣ್ ಬ್ಯಾನರ್ಜಿ ಪ್ರತಿಷ್ಠೆಗೆ ಪೆಟ್ಟು
ತೃಣಮೂಲ ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಕಲ್ಯಾಣ್ ಬ್ಯಾನರ್ಜಿ, ಸಂಸತ್ತಿನ ಭದ್ರತಾ ಸಿಬ್ಬಂದಿ ಜತೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದರು. ಈ ಮೂಲಕ ಕಳೆದ ವಾರ ಸಂಸತ್ತಿನಲ್ಲಿ ಎಲ್ಲರ ಗಮನ ಸೆಳೆದಿದ್ದರು. ಭದ್ರತಾ ಸಿಬ್ಬಂದಿ ಇವರ ತೋಳು ಸವರಿದರು. ಇದು ಅವರಿಗೆ ಸಹ್ಯವಾಗಲಿಲ್ಲ ಹಾಗೂ ಭದ್ರತಾ ಸಿಬ್ಬಂದಿ ಪದೇ ಪದೇ ಕ್ಷಮೆಯಾಚಿಸಿದರೂ ಭದ್ರತಾ ಸಿಬ್ಬಂದಿಯನ್ನು ಕ್ಷಮಿಸಲು ಅವರು ಸಿದ್ಧರಿರಲಿಲ್ಲ. ಕೆಲ ಪತ್ರಕರ್ತರು ಅಲ್ಲಿ ಸೇರಿ, ವಾತಾವರಣ ತಿಳಿಗೊಳಿಸಲು ಪ್ರಯತ್ನಿಸಿದರು. ಆದರೆ ಅದಕ್ಕೂ ಅವರು ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಅಂತಿಮವಾಗಿ ಗುಜರಾತಿ ಪತ್ರಕರ್ತೆಯೊಬ್ಬರು ಸಮಸ್ಯೆಯ ಬಗ್ಗೆ ಕೇಳಿದಾಗ, ಕಲ್ಯಾಣ್ ಬ್ಯಾನರ್ಜಿ ಆಕೆಗೆ ಘಟನೆಯ ವಿವರ ನೀಡಿದರು. ಗಾಯದ ಮೇಲೆ ಉಪ್ಪುಸವರಿದಂತೆ ಅವರು, ‘‘ನಿಮ್ಮ ಹೆಸರು ಸುಖೇಂದು ಶೇಖರ್ ರಾಯ್ ಅಲ್ಲವೇ?’’ ಎಂದು ಪ್ರಶ್ನಿಸಿದರು. ಅದು ಮತ್ತೊಬ್ಬ ಟಿಎಂಸಿ ಸಂಸದರ ಹೆಸರು. ಕೋಪಗೊಂಡ ಬ್ಯಾನರ್ಜಿ ಏನೂ ಹೇಳದೇ ಹೊರಟು ಹೋದರು. ಪ್ರಶ್ನಿಸಿದ ಪತ್ರಕರ್ತೆ ಕೂಡಾ ಇರಿಸು ಮುರಿಸಿನೊಂದಿಗೆ ವಾಪಸಾದರು.


ಅಠವಳೆ ಸಮಸ್ಯೆ
ಮಹಾರಾಷ್ಟ್ರದ ಸಂಸದ ಹಾಗೂ ಸಾಮಾಜಿಕ ನ್ಯಾಯ ಖಾತೆಯ ರಾಜ್ಯ ಸಚಿವ ರಾಮದಾಸ್ ಅಠವಳೆ ಕಳೆದವಾರ ತಮ್ಮ ಮನೆಯಲ್ಲಿ ಔತಣಕೂಟ ಏರ್ಪಡಿಸಿದ್ದರು. ಆದರೆ ಭೀಮಾ- ಕೋರೆಗಾಂವ್ ಹಿಂಸಾಚಾರ ಮತ್ತು ಆ ಬಳಿಕ ಉಂಟಾದ ಪ್ರಕ್ಷುಬ್ಧ ಪರಿಸ್ಥಿತಿಯಿಂದಾಗಿ ಅವರು ಅದನ್ನು ರದ್ದುಪಡಿಸಬೇಕಾಯಿತು. ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಮುಖಂಡ, ಸಂವಿಧಾನ ಕ್ಲಪನ್‌ನಲ್ಲಿ ಇತ್ತೀಚೆಗೆ ತಮ್ಮ ಜೀವನಚರಿತ್ರೆ ಬಿಡುಗಡೆ ಸಮಾರಂಭವನ್ನು ನಡೆಸಿದರು. ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಹಲವು ಮಂದಿ ಹಿರಿಯ ಮುಖಂಡರಾದ ನಿತಿನ್ ಗಡ್ಕರಿ, ರಾಮ್‌ವಿಲಾಸ್ ಪಾಸ್ವಾನ್ ಹಾಗೂ ಗುಲಾಂ ನಬಿ ಆಝಾದ್ ಮತ್ತಿತರರು ಭಾಗವಹಿಸಿದ್ದರು. ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ನೇತೃತ್ವವನ್ನು ಆರ್‌ಪಿಐ ಕಾರ್ಯಕರ್ತರೇ ವಹಿಸಿದ್ದರಿಂದ, ಬಿಜೆಪಿ ಮುಖಂಡರು ಇವರಿಗೆ ರಾಜ್ಯದಲ್ಲಿ ತೊಂದರೆ ಮಾಡದಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಅಠವಳೆ ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಬಿಜೆಪಿ ಮುಖಂಡರ ಒತ್ತಡ ಇನ್ನೂ ಹೆಚ್ಚಿದರೆ ಈ ನಾಯಕ ಏನು ಮಾಡುತ್ತಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News