ಇತಿಹಾಸದ ಆಸಕ್ತರಿಗೆ ಉಪಯುಕ್ತ ಗ್ರಂಥ

Update: 2018-01-06 18:54 GMT

ರೆಡ್ಡಿ ರಾಜ್ಯಗಳ ಚರಿತ್ರೆ

ಇಂಗ್ಲಿಷ್ ಮೂಲ - ಮಲ್ಲಂಪಲ್ಲಿ ಸೋಮಶೇಖರ ಶರ್ಮ

ಕನ್ನಡಕ್ಕೆ - ಜೋಳದರಾಶಿ ಚಂದ್ರಶೇಖರ ರೆಡ್ಡಿ

ಇತಿಹಾಸದ ಓದು ಹಾಗೂ ಶೋಧನೆಗಳಲ್ಲಿ ಆಸಕ್ತಿ ಇರುವವರಿಗೆ ‘ರೆಡ್ಡಿಗಳ ರಾಜ್ಯ ಚರಿತ್ರೆ’ ನಿಜಕ್ಕೂ ಕುತೂಹಲದಿಂದ ಬರಮಾಡಿಕೊಳ್ಳಬಲ್ಲ ಒಂದು ಗ್ರಂಥವಾಗಿದೆ. ತೆಲುಗಿನ ಹೆಸರಾಂತ ಇತಿಹಾಸಾಚಾರ್ಯ ಮಲ್ಲಂಪಲ್ಲಿ ಸೋಮಶೇಖರ ಶರ್ಮರವರ ‘The History of Reddy Kingdoms’ ಎಂಬ ಸಂಶೋಧನಾ ಕೃತಿಯ ಕನ್ನಡಾನುವಾದ ಇದು. ಕರ್ನಾಟಕ ರೆಡ್ಡಿ ಜನಸಂಘದವರು ಈ ಕೃತಿಯನ್ನು ಪ್ರಕಟಿಸಿದ್ದಾರೆ. ‘ರೆಡ್ಡಿ’ ಎಂಬ ಪದಮೂಲ ಕುರಿತಂತೆ ಚರ್ಚಿಸುವ ಲೇಖಕರು ಕ್ರಿ.ಶ. 6-7 ಶತಮಾನಗಳ ತೆಲುಗು ಶಾಸನಗಳಲ್ಲಿ ರಟ್ಟಕೂಡಿ ಅರ್ಥಾತ್ ರಟ್ಟಡಿ ಎಂಬ ಪದ ಬಳಸಲಾಗಿದ್ದು ಮುಂದೆ ಅದು ರೆಡ್ಡಿಯಾಯಿತು ಎನ್ನುತ್ತಾರೆ. ಇದರ ಸಂಸ್ಕೃತ ಸಮಾನ ಪದ ರೂಪವೇ ರಾಷ್ಟ್ರಕೂಟವೆನ್ನಲು ಹಲವು ನಿದರ್ಶನಗಳನ್ನು ನೀಡಿ ಚರ್ಚಿಸಲಾಗಿದೆ. ರಾಷ್ಟ್ರಕೂಟ ಅಥವಾ ರಟ್ಟಗುಡಿ ಎಂದರೆ ಗ್ರಾಮಾಧಿಕಾರಿ /ಗ್ರಾಮಕೂಟಗಳೆಂದು ಅರ್ಥ.

ಕ್ರಿ.ಶ. 6 ರಿಂದ 17ನೇ ಶತಮಾನದ ತನಕ ಆಂಧ್ರ-ತೆಲಂಗಾಣ, ಹೈದರಾಬಾದ್ ಕರ್ನಾಟಕದ ಕೆಲ ಪ್ರಾಂತಗಳಲ್ಲಿ ಆಳ್ವಿಕೆ ನಡೆಸಿದ ರೆಡ್ಡಿ ರಾಜರುಗಳು ದಕ್ಷಿಣ ಭಾರತದ ಇತಿಹಾಸದಲ್ಲಿ ತಮ್ಮದೂ ಒಂದು ಛಾಪನ್ನು ಮೂಡಿಸಿದ್ದಾರೆನ್ನಬಹುದು.

ಶೈವ-ವೈಷ್ಣವರ ನಡುವಿನ ಸಂಘರ್ಷದ ಕಾಲದಲ್ಲಿ ತುಸು ಜಾಣತನ ತೋರಿದ ರೆಡ್ಡಿರಾಜರು ಶ್ರೀಶೈಲದ ಶೈವಕ್ಷೇತ್ರದ ಮಲ್ಲಿಕಾರ್ಜುನನಿಗೂ ಹಾಗೂ ಆಹೋಬಲದಲ್ಲಿ ವೈಷ್ಣವರ ನರಸಿಂಹದೇವರಿಗೂ ಸಾಕಷ್ಟು ದತ್ತಿ-ನೆರವು ನೀಡಿದ್ದರು. ನಂತರದ ಪೀಳಿಗೆಯ ರಾಜರು ವೈಷ್ಣವದ ಕಡೆ ಹೆಚ್ಚಿನ ಒಲವು ತೋರಿದ್ದರು. ಅವರ ವಂಶವೃಕ್ಷದಲ್ಲಿನ ರಾಜರುಗಳ ಹೆಸರುಗಳಲ್ಲಿಯೂ ಇದರ ಕುರುಹುಗಳಿವೆ. ವಿಜಯನಗರದ ಅರಸರುಗಳ ಹೆಸರುಗಳಲ್ಲಿಯೂ ಇದೇ ರೀತಿಯ ಸ್ಥಿತ್ಯಂತರಗಳನ್ನು ನಾವು ನೋಡಬಹುದು.

ರೆಡ್ಡಿ ರಾಜ್ಯಗಳ ಚರಿತ್ರೆಯ ಈ ಪುಸ್ತಕವು ಹಲವು ಆಸಕ್ತಿಕರ ವಿಷಯಗಳ ವಿವರ ನೀಡುತ್ತದೆ. ರಾಯಸ ಎಂಬುದು ರಾಜರು ಕಳುಹಿಸುವ ಸಂದೇಶ ಅಥವಾ ಪತ್ರ ಎಂದಾಗಿದ್ದು ಅದು ತೆಲುಗಿನ ‘ಪ್ರಾಯಸಂ’ನ ಅಪಭ್ರಂಶ ಎನ್ನಲಾಗಿದೆ. ಅಂದರೆ ಬರೆಯುವುದು ಎಂದು. ರಾಜ ನೀಡುವ ಆದೇಶಗಳಿಗೆ ಸ್ಥಳದಲ್ಲೇ ಲಿಪಿಯ ರೂಪ ನೀಡುತ್ತಿದ್ದವರಿಗೆ ರಾಯಸಂ ಎನ್ನಲಾಗುತ್ತಿದ್ದು ಅದೊಂದು ಹುದ್ದೆ ಎಂದು ವಿವರಿಸಲಾಗಿದೆ. ನಮ್ಮಲ್ಲಿಯ ಪಟೇಲ ಪದಕ್ಕೆ ಸಂವಾದಿಯಾಗಿ ತೆಲುಗಿನಲ್ಲಿ ಪಟ್ಟಾಲವೆಂಬ ಪದ ಹಾಗೂ ಅಧಿಕಾರ ಸ್ಥಾನವಿದ್ದ ಬಗ್ಗೆ. ರೇವಂತ್, ರಾವುತ್ ಎಂಬ ಕುದುರೆ ಸವಾರರ ಕುರಿತು ತೆಲುಗಿನ ಖ್ಯಾತ ಕವಿ ವೇಮನನ ತ್ರಿಪದಿಗಳ ಕನ್ನಡಾನುವಾದಗಳ ಕುರಿತು, ಇಲ್ಲಿ ಚರ್ಚಿಸಲಾಗಿದೆ. ಈಗ್ಗೆ 2 ಶತಮಾನಗಳ ಹಿಂದೆಯೇ ಕಾಲ್ಡ್ ವೆಲ್ ಎಂಬಾತ ವೇಮನನನ್ನು ಇಂಗ್ಲಿಷಿಗೆ ಭಾಷಾಂತರಿಸಿದ. ಅದು ನಂತರ ಫ್ರೆಂಚ್, ಪೋರ್ಚುಗೀಸ್, ತಮಿಳು-ಹಿಂದಿ ಭಾಷೆಗಳಿಗೂ ಪಯಣಿಸಿದ ಕುತೂಹಲಕಾರಿ ವಿವರಗಳು ಇಲ್ಲಿವೆ.

ಸುಮಾರು ನಾನೂರು ಪುಟಗಳ ಹಲವು ಶಾಸನ, ಪೋಟೊಗಳಿರುವ ಈ ಕೃತಿಯ ಓದು ಇನ್ನಷ್ಟು ಪ್ರಶ್ನೆಗಳಿಗೂ, ಶೋಧನೆಗೂ ದಾರಿ ಮಾಡಿಕೊಡುವಂತಿವೆ. ಮೂಲ ಲೇಖಕರಾದ ಸೋಮಶೇಖರ ಶರ್ಮರ ವೈದಿಕಧರ್ಮ ಪರವಾದ ಕೆಲವು ಪೂರ್ವಾಗ್ರಹಗಳು ಕೃತಿಯ ಉದ್ದಕ್ಕೂ ಪ್ರತಿಫಲನಗೊಂಡಿವೆಯಾದರೂ ವಿವೇಚನಾ ಶಕ್ತಿಯಿರುವ ಓದುಗರು ಅದರಿಂದ ಪಾರಾಗುವುದು ಅಸಾಧ್ಯವೇನಲ್ಲ.

Writer - ಪಾರ್ವತೀಶ ಬಿಳಿದಾಳೆ

contributor

Editor - ಪಾರ್ವತೀಶ ಬಿಳಿದಾಳೆ

contributor

Similar News