‘ಪಾಂಪೆ ರೋಗ’ಕ್ಕೆ ತುತ್ತಾಗಿರುವ ಯುವಕನಿಗೆ ಚಿಕಿತ್ಸೆ ನೀಡಲು ಇಂದಿರಾಗಾಂಧಿ ಆಸ್ಪತ್ರೆಗೆ ಹೈಕೋರ್ಟ್ ನಿರ್ದೇಶನ

Update: 2018-01-07 18:14 GMT

ಬೆಂಗಳೂರು, ಜ.7: ವಂಶವಾಹಿಗಳಲ್ಲಿನ ದೋಷ ಮತ್ತು ಅಲ್ಫಾ ಆ್ಯಸಿಡ್ ಗ್ಲುಕೊಸೈರಿಸ್ ಪ್ರೊಟೀನ್ ಕೊರತೆ ಹಿನ್ನೆಲೆಯಲ್ಲಿ ಪಾಂಪೆ ರೋಗಕ್ಕೆ ತುತ್ತಾಗಿರುವ ಯುವಕನಿಗೆ ಚಿಕಿತ್ಸೆ ನೀಡಲು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಸತ್ಯನಾರಾಯಣರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ನ್ಯಾಯಪೀಠ ಈ ನಿರ್ದೇಶನ ನೀಡಿತು. ಅರ್ಜಿದಾರರ ಪರ ವಾದಿಸಿದ ವಕೀಲ ಸುದರ್ಶನ್ ಅವರು, ಪಾಂಪೆ ರೋಗಕ್ಕೆ ತುತ್ತಾಗಿರುವ ರಾಘವೇಂದ್ರ(24)ಗೆ ಚಿಕಿತ್ಸೆ ನೀಡಬೇಕೆಂದು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗೆ ಹೋದಾಗ ಈ ಸಂಸ್ಥೆ ನಾವು 18 ವರ್ಷ ಮೇಲ್ಮಟ್ಟವರಿಗೆ ಚಿಕಿತ್ಸೆ ನೀಡುವುದಿಲ್ಲ ಎಂದು ಹೇಳಿದರು. ಹೀಗಾಗಿ, ಆರೋಗ್ಯ ಸಚಿವ ರಮೇಶ್‌ಕುಮಾರ್ ಅವರ ಬಳಿ ಹೋದಾಗ ಸಚಿವರು ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯಲು ಸೂಚನೆ ನೀಡಿದರು.

ಆದರೆ, ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯರು ಈ ಯುವಕನಿಗೆ ಚಿಕಿತ್ಸೆ ನೀಡುತ್ತೇವೆಯೆಂದು ಒಪ್ಪಿಕೊಂಡರಾದರೂ ಚಿಕಿತ್ಸೆಗೆ ಹಣವನ್ನು ಬಿಡುಗಡೆ ಮಾಡಲು ಸರಕಾರಗಳು ವಿಳಂಭ ಧೋರಣೆ ಅನುಸರಿಸಿದ್ದರಿಂದ ಯುವಕನ ತಂದೆ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಅಲ್ಲದೆ, ಈ ಯುವಕನಿಗೆ 2012ರಲ್ಲಿ ಪಾಂಪೆ ರೋಗ ಇರುವುದು ಕಂಡು ಬಂದಿದ್ದು, ಈ ಚಿಕಿತ್ಸೆಗೆ ಪ್ರತಿ ವರ್ಷ ಮೂರುವರೆ ಕೋಟಿ ರೂ.ಖರ್ಚಾಗುತ್ತದೆ. ಈ ರೋಗಕ್ಕೆ ಚಿಕಿತ್ಸೆ ನೀಡದಿದ್ದರೆ ಉಸಿರಾಟ ಸಮಸ್ಯೆ, ಹೃದಯ ಹಿಗ್ಗುವಿಕೆ, ಸ್ನಾಯು ಗಟ್ಟಿವಿಕೆ ಹೆಚ್ಚಾಗಿ ಸಮಸ್ಯೆ ಮತ್ತಷ್ಟು ಉಲ್ಭಣಿಸುತ್ತದೆ ಎಂದು ಪೀಠಕ್ಕೆ ತಿಳಿಸಿದರು.

ಅರ್ಜಿದಾರರ ಪರ ವಾದ ಆಲಿಸಿದ ನ್ಯಾಯಪೀಠವು ಇಂದಿರಾಗಾಂಧಿ ಇನ್ಸಟ್ಯೂಟ್ ಆಫ್ ಚೈಲ್ಡ್ ಹೆಲ್ತ್‌ನವರು ಯುವಕ ರಾಘವೇಂದ್ರನಿಗೆ ಪಾಂಪೆ ರೋಗ ಗುಣಪಡಿಸಲು ಚಿಕಿತ್ಸೆ ನೀಡಬೇೆಂದು ನಿರ್ದೇಶನ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News