ಆಧುನಿಕ ಯುಗದ ಸಂಬಂಧಗಳಲ್ಲಿ ಡಿಜಿಟಲ್ ಜಗತ್ತಿನ ಪಾತ್ರ

Update: 2018-01-08 10:12 GMT

ನಿಮಗೆ ಇಷ್ಟವಿರಲಿ ಅಥವಾ ಇಷ್ಟವಿಲ್ಲದಿರಲಿ, ಡಿಜಿಟಲೀಕರಣವನ್ನು ಮಾತ್ರ ನೀವು ಕಡೆಗಣಿಸುವಂತಿಲ್ಲ. ಡಿಜಿಟಲೀಕರಣ ನಿಮ್ಮ ಜಗತ್ತಿನೊಳಗೆ ಮಾರ್ಗ ಕಂಡುಕೊಂಡಾಗ ಅದನ್ನು ನಿಮ್ಮ ವೈಯಕ್ತಿಕ ಬದುಕಿನಿಂದ ದೂರ ತಳ್ಳಲೂ ನಿಮ್ಮಿಂದ ಸಾಧ್ಯವಾಗದು. ನೀವು ಹಾಗೆ ಮಾಡಿದರೆ ಅದು ನಿಮ್ಮ ಪ್ರೀತಿಪಾತ್ರರೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರಬಹುದು.

ಹೆಚ್ಚೆಚ್ಚು ಜನರು ಡಿಜಿಟಲೀಕರಣದತ್ತ ಆಕರ್ಷಿತರಾಗುತ್ತಿದ್ದು, ಹೆಚ್ಚಿನ ಸಂದರ್ಭಗಳಲ್ಲಿ ಜನರು ಮೊಬೈಲ್, ಟ್ಯಾಬ್ಲೆಟ್‌ಗಳಿಂದ ಹಿಡಿದು ಸ್ಮಾರ್ಟ್ ವಾಚ್, ಲ್ಯಾಪ್‌ಟಾಪ್‌ವರೆಗೆ ಒಂದಕ್ಕಿಂತ ಹೆಚ್ಚಿನ ಡಿಜಿಟಲ್ ಸಾಧನಗಳನ್ನು ಹೊಂದಿರುವುದನ್ನು ನಾವು ನೋಡುತ್ತಿರುತ್ತೇವೆ. ಸೇವಾ ಪೂರೈಕೆದಾರರು ಪ್ರತಿಯೊಬ್ಬ ಬಳಕೆದಾರನಿಗೆ ನಿರ್ದಿಷ್ಟ ಪ್ರಮಾಣದ ಕ್ಲೌಡ್ ಸ್ಪೇಸ್‌ನ್ನು ಒದಗಿಸಿದ್ದು, ಅಲ್ಲಿ ಆತ/ಆಕೆ ನಿಗದಿತ ಪ್ರಮಾಣದ ಡಾಟಾವನ್ನು ಸಂಗ್ರಹಿಸಿಡಬಹುದಾಗಿದೆ. ಈ ಡಾಟಾ ಸ್ವರೂಪದಲ್ಲಿ ವೈಯಕ್ತಿಕವಾಗಿರು ತ್ತದೆ. ಸಾಮಾಜಿಕ ಮಾಧ್ಯಮಗಳ ಉದಯ ಮತ್ತು ಅವುಗಳ ತ್ವರಿತ ಬೆಳವಣಿಗೆ ಡಿಜಿಟಲೀಕರಣದ ಇನ್ನೊಂದು ಮುಖ್ಯ ಮಗ್ಗಲಾಗಿದೆ.

ಇಂದಿನ ಜಗತ್ತಿನಲ್ಲಿ ಜನರೊಂದಿಗೆ ಆತ್ಮೀಯ ಸಂಬಂಧವನ್ನು ಸೃಷ್ಟಿಸಿಕೊಳ್ಳುವುದು ಅತ್ಯಂತ ಸುಲಭವಾಗಿದೆ. ಆದರೆ ಈ ಸಂಬಂಧವನ್ನು ಪೋಷಿಸುವುದು ಸುಲಭವಲ್ಲ. ಸಾಮಾಜಿಕ ಮಾಧ್ಯಮಗಳು ನಾವು ಜನರೊಂದಿಗೆ ಹೇಗೆ ಸಂಬಂಧವನ್ನು ಹೊಂದಿರುತ್ತೇವೆ ಎನ್ನುವುದರ ಬುನಾದಿಯನ್ನೇ ಬದಲಿಸುತ್ತಿರುವುದರಿಂದ ಇವೆಲ್ಲವೂ ಆಧುನಿಕ ಯುಗದಲ್ಲಿ ಸಂಬಂಧಗಳ ಮೇಲೆ ಪರಿಣಾಮಗಳನ್ನು ಬೀರುತ್ತಿರುವುದನ್ನು ತಪ್ಪಿಸಲು ಸಾಧ್ಯವಿಲ್ಲ.

ಹೆಚ್ಚಿನ ಜನರೊಂದಿಗೆ ಸುಲಭ ಸಂಪರ್ಕ

ಹೆಚ್ಚೆಚ್ಚು ಜನರು ಡಿಜಿಟಲ್ ಸಾಕ್ಷರರಾಗುತ್ತಿರುವುದರಿಂದ ಡಿಜಿಟಲ್ ಲೋಕದಲ್ಲಿ ಯಾರನ್ನೇ ಆದರೂ ಸುಲಭವಾಗಿ ಪತ್ತೆ ಹಚ್ಚಬಹುದು. ಇದು ನಾವು ಸಂಪರ್ಕಿಸಬಹು ದಾದ ಜನರ ಸಂಖ್ಯೆಗೆ ಸಂಬಂಧಿಸಿದಂತೆ ನಮಗೆ ಹೆಚ್ಚಿನ ಸಂಖ್ಯೆಯ ಪರ್ಯಾಯಗಳನ್ನು ಒದಗಿಸುತ್ತದೆ. ಇಂತಹ ಸನ್ನಿವೇಶದಲ್ಲಿ ವ್ಯಕ್ತಿಯೋರ್ವ ಇತರ ಹಲವಾರು ಜನರತ್ತ ಆಕರ್ಷಿತರಾಗುವ ಅಥವಾ ವಿವಾಹೇತರ ಸಂಬಂಧಗಳಿಗೆ ಬಲಿಯಾಗುವ ಸಾಧ್ಯತೆಗಳು ಸಹ ಹೆಚ್ಚಾಗಿವೆ. ಇದು ಆತನ ಅಥವಾ ಆಕೆಯ ಸಂಬಂಧಗಳನ್ನು ಹಾಳು ಮಾಡ ಬಹುದು.

ಉತ್ತಮ ಸಂಪರ್ಕ ಸೌಲಭ್ಯ ದೂರದ ಸಂಬಂಧಗಳನ್ನು ಪೋಷಿಸುತ್ತದೆ

ಎರಡು ದಶಕಗಳ ಹಿಂದಿನವರೆಗೂ ದಂಪತಿಗಳು ಅನಿವಾರ್ಯ ಕಾರಣಗಳಿಂದಾಗಿ ಪರಸ್ಪರರಿಂದ ದೂರವಿರುವದು ತುಂಬ ಕಠಿಣವಾಗುತ್ತಿತ್ತು. ಇದಕ್ಕಾಗಿ ಆಗಿನ ಅದಕ್ಷ ಅಂಚೆ ವ್ಯವಸ್ಥೆಯನ್ನು ದೂರಲಾಗುತ್ತಿತ್ತು. ಇಂದು ಎಸ್‌ಎಂಎಸ್, ಧ್ವನಿಕರೆ ಮತ್ತು ವೀಡಿಯೊ ಕರೆಗಳಿಗಾಗಿ ಹೆಚ್ಚೆಚ್ಚು ಪರ್ಯಾಯ ಅವಕಾಶಗಳು ತೆರೆದುಕೊಂಡಿದ್ದು ಉದ್ಯೋಗ ನಿಮಿತ್ತ ಪರಸ್ಪರರಿಂದ ದೂರವಿರುವ ದಂಪತಿಗಳಿಗೆ ನಿಜಕ್ಕೂ ತಾವು ದೂರವಿದ್ದೇವೆ ಎಂದು ಅನಿಸುವುದೇ ಇಲ್ಲ. ಇದು ನಮ್ಮ ಸಂಬಂಧಗಳಲ್ಲಿ ಡಿಜಿಟಲೀಕರ ಣದ ಪ್ರಮುಖ ಲಾಭಗಳಲ್ಲೊಂದಾಗಿದೆ.

ಇತರರ ಸಾಧನಗಳನ್ನು ಪರಿಶೀಲಿಸುವ ಬಯಕೆ

ಇಂದು ಯಾರೇ ಆದರೂ ಬೇರೆಯವರ ಮೊಬೈಲ್ ಸಾಧನದಿಂದ(ಕೆಲವು ಪ್ರಕರಣಗಳಲ್ಲಿ ಕ್ಲೌಡ್ ಸ್ಟೋರೇಜ್‌ನಿಂದ)ಆತ ಅಥವಾ ಆಕೆಯ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ತಿಳಿದುಕೊಳ್ಳಬಹುದಾಗಿದೆ. ಹೀಗಾಗಿ ವ್ಯಕ್ತಿಯು ತನ್ನ ಸಂಗಾತಿಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು ಆತನ ಅಥವಾ ಆಕೆಯ ಮೊಬೈಲ್ ಪರಿಶೀಲಿಸಲು ಬಯಸುವುದು ಸಹಜವೇ ಆಗಿದೆ. ಇದಕ್ಕೆ ಸಂಗಾತಿ ಇದಕ್ಕೆ ಅವಕಾಶ ನೀಡಿದರೆ ಆತ ಅಥವಾ ಆಕೆ ಬಹಿರಂಗಗೊಳಿಸಲು ಬಯಸದಿದ್ದ ಮಾಹಿತಿಗಳು ಹೊರಬೀಳಬಹುದು. ಅವಕಾಶ ನೀಡದಿದ್ದರೆ ಅದು ಅಪನಂಬಿಕೆಯ ಬೀಜವನ್ನು ಬಿತ್ತಬಹುದು ಮತ್ತು ಇದು ದೀರ್ಘಾವಧಿಯಲ್ಲಿ ಪರಸ್ಪರರ ನಡುವಿನ ಸಂಬಂಧಕ್ಕೆ ಮಾರಕವಾಗಬಹುದು. ಹೀಗಾಗಿ ಸಂಗಾತಿಯ ಮೊಬೈಲ್ ಫೋನ್‌ನ್ನು ಪರಿಶೀಲಿಸುವ ಬಯಕೆಯು ಸಂಬಂಧಗಳನ್ನು ಹಾಳುಮಾಡುವ ಕಂಟಕಗಳಲ್ಲೊಂದಾಗಬಹುದು.

ಡಿಜಿಟಲ್ ಆತ್ಮೀಯತೆ

ಡಿಜಿಟಲ್ ಆತ್ಮೀಯತೆಯು ಇನ್ನೊಬ್ಬ ವ್ಯಕ್ತಿಯನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳಲು ನೆರವಾಗುವುದರಿಂದ ಅದಕ್ಕೆ ಉತ್ತೇಜನವಿದೆಯಾದರೂ, ಈ ಡಿಜಿಟಲ್ ಆತ್ಮೀಯತೆಯನ್ನೇ ಜನರು ನಿಜವಾದ ಆತ್ಮೀಯತೆ ಎಂದು ಭಾವಿಸಿ ಗೊಂದಲವನ್ನು ಸೃಷ್ಟಿಸುವುದೂ ಇದೆ. ಸಾಮಾಜಿಕ ಮಾಧ್ಯಮಗಳಲ್ಲಿ ಡಿಜಿಟಲ್ ಆತ್ಮೀಯತೆಯ ಭರದಲ್ಲಿ ನಾವು ನಮ್ಮ ನಿಜವಾದ ಜೀವನದಲ್ಲಿಯ ಸಂಗಾತಿ, ಸ್ನೇಹಿತರು ಮತ್ತು ಇತರರಿಂದ ಪ್ರತ್ಯೇಕವಾಗುತ್ತಿರುತ್ತೇವೆ. ಯಾವುದೇ ಬೆಲೆಯನ್ನು ತೆತ್ತಾದರೂ ಇಂತಹ ಸ್ಥಿತಿಯನ್ನು ನಿವಾರಿಸಿಕೊಳ್ಳುವುದು ಅಗತ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News