ಮತೀಯ ದ್ವೇಷದ ಎಲ್ಲಾ ಕೊಲೆ ಪ್ರಕರಣಗಳ ಮರು ತನಿಖೆಗೆ ಮುನೀರ್ ಕಾಟಿಪಳ್ಳ ಒತ್ತಾಯ

Update: 2018-01-08 13:50 GMT

ದೀಪಕ್ ಕೊಲೆ ಸೇರಿದಂತೆ ಜಿಲ್ಲೆಯಲ್ಲಿ ನಡೆದ ಮತೀಯ ದ್ವೇಷದ ಎಲ್ಲಾ ಕೊಲೆ ಪ್ರಕರಣಗಳ ಮರು ತನಿಖೆಗೆ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.

ದೀಪಕ್ ರಾವ್, ಅಬ್ದುಲ್ ಬಶೀರ್ ಕೊಲೆ ಪ್ರಕರಣ ಜಿಲ್ಲೆಯ ಜನತೆಯಲ್ಲಿ ಭೀತಿಯ ಅಲೆಯನ್ನು ಎಬ್ಬಿಸಿದೆ. ದೀಪಕ್ ಕೊಲೆಗೆ ಸಂಬಂಧಿಸಿ ಹಲವು ಊಹಾ ಪೊಹಗಳು ಹಬ್ಬುತ್ತಿದ್ದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ದೀಪಕ್ ಕೊಲೆಯ ಹಿಂದೆ ಬಿಜೆಪಿ ಕಾರ್ಪೊರೇಟರ್ ಪಾತ್ರದ ಕುರಿತು ಆರೋಪಿಸಿರುವುದು ಪ್ರಕರಣಕ್ಕೆ ಗಂಭೀರ ತಿರುವು ನೀಡಿದೆ. ಈ ಹಿಂದೆಯೂ ಮತೀಯ ದ್ವೇಷದ ಕೊಲೆಗಳನ್ನು ಸರಿಯಾಗಿ ತನಿಖೆ ಮಾಡದೆ ಇರುವ ಕುರಿತು ಸಾರ್ವಜನಿಕರಲ್ಲಿ ಗಂಭೀರ ಅನುಮಾನಗಳಿದ್ದು, ಇದರಿಂದ ಸೂತ್ರಧಾರರು ತಪ್ಪಿಸಿಕೊಂಡು ಸರಣಿ ಕೊಲೆಗಳು ನಡೆಯುವಂತಾಗಿದೆ. ಈ ಹಿನ್ನೆಲೆಯಲ್ಲಿ ದೀಪಕ್, ಬಶೀರ್ ಕೊಲೆ ಪ್ರಕರಣ ಸೇರಿದಂತೆ 2000 ಇಸವಿಯ ನಂತರ ನಡೆದ ಎಲ್ಲಾ ಕೋಮು ದ್ವೇಷ, ಪ್ರತೀಕಾರದ ಕೊಲೆ ಪ್ರಕರಣಗಳನ್ನು ಮರು ತನಿಖೆಗೆ ಒಳಪಡಿಸಬೇಕು. ಅದಕ್ಕಾಗಿ 'ವಿಶೇಷ ತನಿಖಾ ತಂಡ'ವನ್ನು ರಚಿಸಬೇಕು ಎಂದು ಮುನೀರ್ ಕಾಟಿಪಳ್ಳ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಕೋಮು ಸಂಬಂಧಿ ದ್ವೇಷ, ಪ್ರತೀಕಾರಕ್ಕೆ ಕಳೆದ ಒಂದೂವರೆ ದಶಕದಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಮಂದಿ ಕೊಲೆಯಾಗಿದ್ದಾರೆ. ಹತ್ತಕ್ಕೂ ಹೆಚ್ಚು ಕೊಲೆಯತ್ನ ಪ್ರಕರಣಗಳು ಪತ್ತೆಯಾಗದೆ ಉಳಿದಿವೆ.  ಈ ಕೊಲೆ, ಪ್ರತಿಕೊಲೆಗಳಿಂದ ಜಿಲ್ಲೆಯ ಸಾಮಾಜಿಕ ಸ್ಥಿತಿ ಗಂಭೀರವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಜಿಲ್ಲೆ ಸದಾ ಉದ್ವಿಗ್ನವಾಗಿಯೇ ಇರುತ್ತದೆ. ಇಂತಹ ಸರಣಿ ಕೊಲೆಗಳನ್ನು ತಡೆಗಟ್ಟವ ಪ್ರಯತ್ನಗಳು ವಿಫಲವಾಗುತ್ತಿದೆ. ಈ ರೀತಿಯ ಕೊಲೆಗಳು ನಡೆಯಲು ಕೊಲೆಯ ಹಿಂದಿರುವ ಸೂತ್ರಧಾರರನ್ನು ಗುರುತಿಸಲು, ಕೊಲೆಯ ಆರೋಪ ಹೊರಿಸಲು ಸಾಧ್ಯವಾಗದೆ ಇರುವುದು ನಿರ್ಭಯವಾಗಿ ಸರಣಿ ಮತೀಯ ದ್ವೇಷದ ಕೊಲೆಗಳಿಗೆ ಕಾರಣವಾಗಿದೆ. ಅದಲ್ಲದೆ ಈವರಗೆ ಕೋಮುದ್ವೇಷ ಹಿನ್ನೆಲೆಯ ಕೊಲೆಗಳಲ್ಲಿ ಯಾವ ಪ್ರಕರಣದಲ್ಲೂ ಆರೋಪಿತರಿಗೆ ಶಿಕ್ಷೆಯಾಗದಿರುವುದು ಪೊಲೀಸರ ತನಿಖಾ ವೈಫಲ್ಯವನ್ನು ಎತ್ತಿತೋರಿಸುತ್ತದೆ.

ಬೆಂಜನಪದವು ರಾಜೇಶ್ ಪೂಜಾರಿ, ಪೊಳಲಿ ಅನಂತು ಕೊಲೆ ಪ್ರಕರಣದಲ್ಲಿ ಒತ್ತಡವನ್ನು ಭರಿಸಲಾಗದೆ ಅಮಾಯಕರನ್ನು ಬಂಧಿಸಿ ಆರೋಪ ಪಟ್ಟಿ ಹೊರಿಸಿರುವುದು ನಡೆದಿದೆ. ಈ ರೀತಿಯ ಕೊಲೆಗಳನ್ನು ನಿಷ್ಪಕ್ಷವಾಗಿ, ರಾಜಕೀಯ ಪ್ರಭಾವಕ್ಕೆ ಒಳಗಾಗದೆ ತನಿಖೆ ಮಾಡಲು, ಕೊಲೆಗಳ ಹಿಂದಿರುವ, ಕೊಲೆಯ ನಂತರ ಸಹಾಯ ಒದಗಿಸಿದವರನ್ನು ಬಂಧಿಸಲು ಸಾಧ್ಯವಾಗಿದ್ದರೆ ಕರಾವಳಿಯ ಸ್ಥಿತಿ ಇಷ್ಟು ಹದಗೆಡುತ್ತಿರಲಿಲ್ಲ. ನಡು ಬೀದಿಯಲ್ಲಿ ಅಮಾಯಕರು ಸಾಯುತ್ತಿರಲಿಲ್ಲ.

ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪ್ರತಿಯೊಬ್ಬರು ಇಂತಹ ಕೊಲೆಗಳನ್ನು ಮಟ್ಟ ಹಾಕುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಕೊಲೆಗಳ ಹಿಂದಿರುವ ಪ್ರಭಾವಿಗಳ ಬಂಧನವಾಗದೆ ಈ ಸರಣಿ ನಿಲ್ಲುವುದು ಅಸಾಧ್ಯ. ಕರಾವಳಿಯಲ್ಲಿ ಕೋಮು ಘರ್ಷಣೆಯ ವಿರುದ್ಧ ಮುಖ್ಯಮಂತ್ರಿಯ ಹೇಳಿಕೆ ಪ್ರಾಮಾಣಿಕವಾದದ್ದೇ ಆದರೆ 2000 ಇಸವಿಯಿಂದ ಈಚೆಗೆ ನಡೆದ ಮತೀಯ ದ್ವೇಷ ಹಿನ್ನೆಲೆಯ ಎಲ್ಲಾ ಕೊಲೆಗಳನ್ನು ಮರು ತನಿಖೆಗೆ ಒಳಪಡಿಸಲಿ, ಅದಕ್ಕಾಗಿ ದಕ್ಷ ಅಧಿಕಾರಿಗಳನ್ನೊಳಗೊಂಡ 'ವಿಶೇಷ ತನಿಖಾ ತಂಡ' ರಚಿಸಲಿ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

- ಮುನೀರ್ ಕಾಟಿಪಳ್ಳ, ಡಿವೈಎಫ್ಐ ಕರ್ನಾಟಕ ರಾಜ್ಯಾಧ್ಯಕ್ಷ

Writer - ಮುನೀರ್ ಕಾಟಿಪಳ್ಳ

contributor

Editor - ಮುನೀರ್ ಕಾಟಿಪಳ್ಳ

contributor

Similar News