ಯುವಜನರ ಆತ್ಮಹತ್ಯೆಗೆ ಕಾರಣ ಯಾರು?
ಇಂದು ಭಾರತವು ಯುವ ದೇಶವೆಂದು ಹೆಮ್ಮೆಪಡುತ್ತದೆ. ಜಗತ್ತಿನಲ್ಲೇ ಅತಿ ಹೆಚ್ಚು ಯುವ ಜನಸಂಖ್ಯೆ ನಮ್ಮದು. ಆದರೆ ಈ ಯುವ ಶಕ್ತಿಯೇ ಇಂದು ತೀವ್ರ ಮಾನಸಿಕ ಸಂಕಟದಲ್ಲಿ ಮುಳುಗುತ್ತಿರುವುದು ದೊಡ್ಡ ಆತಂಕದ ಸಂಗತಿಯೂ ಹೌದು. ರಾಷ್ಟ್ರೀಯ ಅಪರಾಧ ದಾಖಲೆ ಕಚೇರಿ (ಎನ್‌ಸಿಆರ್‌ಬಿ)ಯ 2023ರ ವರದಿ ಪ್ರಕಾರ, ದೇಶದಲ್ಲಿ ಒಟ್ಟು 1,71,418 ಆತ್ಮಹತ್ಯೆಗಳ ಪ್ರಕರಣಗಳನ್ನು ದಾಖಲು ಮಾಡಿದೆ. ಇದರಲ್ಲಿ ಶೇ. 8.1 ಪ್ರಕರಣಗಳು, ಅಂದರೆ 13,892 ಆತ್ಮಹತ್ಯೆಗಳು ವಿದ್ಯಾರ್ಥಿಗಳದ್ದು. ಕಳೆದ ಒಂದು ದಶಕದಲ್ಲಿ ವಿದ್ಯಾರ್ಥಿ ಆತ್ಮಹತ್ಯೆಗಳು ಶೇ.65ರಷ್ಟು ಹೆಚ್ಚಾಗಿವೆ. 2013ರಲ್ಲಿ 8,423ರಿಂದ 2023ರಲ್ಲಿ 13,892ಕ್ಕೆ ಏರಿಕೆಯಾಗಿದೆ. ಇದು ರಾಷ್ಟ್ರೀಯ ಆತ್ಮಹತ್ಯೆ ದರದ ಶೇ.27.2 ಬೆಳವಣಿಗೆಗಿಂತಲೂ ಹೆಚ್ಚು. ಪ್ರತಿದಿನ ಸರಾಸರಿ 38 ವಿದ್ಯಾರ್ಥಿಗಳು ಆತ್ಮಹತ್ಯೆಯ ಜಾಲಕ್ಕೆ ಸಿಲುಕಿ ತಮ್ಮ ಉಸಿರು ನಿಲ್ಲಿಸುತ್ತಿದ್ದಾರೆ. ಇದು ಕೇವಲ ಸಂಖ್ಯೆಯಲ್ಲ, ಯುವಜನರ ಭವಿಷ್ಯಕ್ಕೆ ಮರಣ ಶಾಸನದಂತೆ ಭಾಸವಾಗುತ್ತಿದೆ.
ಇಂದಿನ ಯುವ ಪೀಳಿಗೆಯ ಮೇಲೆ ಬೀಳುತ್ತಿರುವ ಒತ್ತಡವು ಅಪಾರ. ಶಿಕ್ಷಣ ಸಂಸ್ಥೆಗಳು ಜ್ಞಾನದ ದೀಕ್ಷೆ ನೀಡಬೇಕಾದ ಕೇಂದ್ರಗಳಾಗುವ ಬದಲು ಯುವಜನರನ್ನು ಪಣಕ್ಕಿಟ್ಟು ಸ್ಪರ್ಧೆ ನಡೆಸುವ ಬಯಲು ಭೂಮಿಯಾಗಿದೆ. ಹತ್ತನೇ ತರಗತಿ, ದ್ವಿತೀಯ ಪಿಯುಸಿ, ನೀಟ್, ಜೆಇಇ, ಸಿಇಟಿ ಇವೆಲ್ಲ ಯುವ ಮನಸ್ಸುಗಳಿಗೆ ಒಂದು ಯುದ್ಧದಂತೆ ಭಾಸವಾಗ ತೊಡಗಿದೆ. ಒಂದು ಅಂಕ ಕಡಿಮೆ ಬಂದರೆ ಮನೆಯಲ್ಲಿ ಗದರಿಕೆ, ಗೆಳೆಯರ ಮಧ್ಯೆ ಅವಮಾನ, ಶಿಕ್ಷಕರ ಕಣ್ಣಲ್ಲಿ ‘ದಡ್ಡಿ’ ಅಥವಾ ‘ದಡ್ಡ’ ಎಂಬ ಮುದ್ರೆ ಒತ್ತುವುದು ಇವೆಲ್ಲ ಯುವ ಜನರ, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಎನ್‌ಸಿಆರ್‌ಬಿ ದತ್ತಾಂಶಗಳ ಪ್ರಕಾರ, 2023ರಲ್ಲಿ 2,500ಕ್ಕೂ ಹೆಚ್ಚು ವಿದ್ಯಾರ್ಥಿ ಆತ್ಮಹತ್ಯೆಗಳು ಪರೀಕ್ಷಾ ವಿಫಲತೆಯಿಂದ ಸಂಬಂಧಿಸಿವೆ. ಶೈಕ್ಷಣಿಕ ವಿಫಲತೆಯ ಭಯ, ಭವಿಷ್ಯದ ಅನಿಶ್ಚಿತತೆ, ಇವು ಅವರ ಮನಸ್ಸನ್ನು ಒಡೆಯುತ್ತಿದೆ. ಅನೇಕ ಶಾಲಾ-ಕಾಲೇಜುಗಳಲ್ಲಿ ಮನೋವೈದ್ಯರ ಸಹಾಯ, ಕೌನ್ಸೆಲಿಂಗ್ ಕೊಠಡಿಗಳು ಇಲ್ಲ. ಒಂದು ವೇಳೆ ಇದ್ದರೂ ಅದು ಕಾಗದದ ಮೇಲೆ ಮಾತ್ರ. ವಿದ್ಯಾರ್ಥಿಯೊಬ್ಬರು ಒತ್ತಡದಲ್ಲಿ ಇದ್ದರೆ ಅವನನ್ನು ‘ಮಾನಸಿಕ ರೋಗಿ’ ಎಂದು ಗುರುತು ಹಾಕಿ ಹೊರಗಿಡಲಾಗುತ್ತಿದೆ. ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶದಂತಹ ರಾಜ್ಯಗಳು ಈ ಸಮಸ್ಯೆಯಲ್ಲಿ ಮುಂದಿವೆ, ಒಟ್ಟು ಮೂರನೇ ಒಂದು ಭಾಗ ಪ್ರಕರಣಗಳನ್ನು ಹೊಂದಿವೆ.
ನಿರುದ್ಯೋಗ ಕೂಡ ಯುವಜನರನ್ನು ಕಾಡುತ್ತಿದೆ. ಲಕ್ಷಾಂತರ ಯುವಜನರು ಉತ್ತಮ ಶಿಕ್ಷಣ ಪಡೆದರೂ ಕೆಲಸ ಸಿಗದೆ ತತ್ತರಿಸುತ್ತಿದ್ದಾರೆ. 18ರಿಂದ 29 ವರ್ಷದ ಗುಂಪಿನಲ್ಲಿ ಒಟ್ಟು ಶೇ.17.1 ಆತ್ಮಹತ್ಯೆ ಪ್ರಕರಣಗಳು ಕಂಡು ಬಂದಿವೆ. ಇದರಲ್ಲಿ ಶೇ.8.3 ಆತ್ಮಹತ್ಯೆಗಳು ನಿರುದ್ಯೋಗ ಸಮಸ್ಯೆಯಿಂದ ನಡೆದಿದೆ ಎನ್ನಲಾಗುತ್ತಿದೆ. ವಾಸ್ತವದಲ್ಲಿ ಒಂದು ಸಣ್ಣ ಕೆಲಸಕ್ಕೆ ಸಾವಿರಾರು ಅರ್ಜಿಗಳು ಬರುತ್ತವೆ. ಇದು ಯುವಜನರ ಆತ್ಮವಿಶ್ವಾಸವನ್ನು ಎಷ್ಟರ ಮಟ್ಟಿಗೆ ಕುಗ್ಗಿಸಿದೆ ಮತ್ತು ಬದುಕಿನ ಅಭದ್ರತೆ ಎಷ್ಟರ ಮಟ್ಟಿಗೆ ಯುವಜನರನ್ನು ಕಾಡುತ್ತಿದೆ ಎಂಬುದನ್ನು ಸ್ಪಷ್ಟ ಪಡಿಸುತ್ತಿದೆ.
ಇನ್ನು ಉದ್ಯೋಗ ಸಿಗದಿರುವುದು ಅಥವಾ ಸಣ್ಣ ಉದ್ಯೋಗಗಳನ್ನು ಪಡೆದುಕೊಂಡರೆ ಕುಟುಂಬದಲ್ಲಿ ಅವಮಾನಕ್ಕೆ ಒಳಗಾಗುವಂತೆ ಮಾಡುವುದಲ್ಲದೆ, ಹಣಕಾಸಿನ ಕೊರತೆ, ಕುಟುಂಬದ ಜಗಳಗಳು, ಪ್ರೇಮ ವೈಫಲ್ಯ, ಭವಿಷ್ಯದ ಭಯ ಇವೆಲ್ಲ ಸೇರಿ ಯುವ ಮನಸ್ಸನ್ನು ಕತ್ತಲೆಯ ಗುಹೆಗೆ ತಳ್ಳುತ್ತಿದೆ. ಎನ್‌ಸಿಆರ್‌ಬಿ ವರದಿಯ ಪ್ರಕಾರ, ಕುಟುಂಬ ಸಮಸ್ಯೆಗಳು ಕೂಡ ಶೇ. 31.9 ಆತ್ಮಹತ್ಯೆಗಳಿಗೆ ಕಾರಣವಾಗಿವೆ.
ಕೆಲವೊಂದು ವರದಿಗಳ ಪ್ರಕಾರ ಕಳೆದ ಒಂದು ದಶಕದಲ್ಲಿ ಮಹಿಳಾ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಶೇ.61ರಷ್ಟು ಹಾಗೂ ಪುರುಷ ವಿದ್ಯಾರ್ಥಿಗಳ ಆತ್ಮಹತ್ಯಾ ಪ್ರಕರಣ ಶೇ.50ರಷ್ಟು ಹೆಚ್ಚಾಗಿದೆ. ಮಹಿಳೆಯರ ಮೇಲಿನ ಒತ್ತಡ, ಮಹಿಳೆಯರ ಮೇಲಿನ ದೌರ್ಜನ್ಯದ ಕಾರಣದಿಂದ ಮಹಿಳಾ ಆತ್ಮಹತ್ಯಾ ಪ್ರಕರಣ ಹೆಚ್ಚಾಗಿದೆ ಎನ್ನಲಾಗುತ್ತಿದೆಯಾದರೂ, ಯುವತಿಯರಿಗೆ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ವಿಧಿಸಲಾಗಿರುವ ಹೀನ ಕಟ್ಟುಪಾಡುಗಳು ಮತ್ತು ಯುವತಿಯರ ಸ್ವಾತಂತ್ರ್ಯ ದಮನವು ಕೂಡ ಅವರ ಆತ್ಮಹತ್ಯೆ ಪ್ರಕರಣ ಹೆಚ್ಚಾಗುವಂತೆ ಮಾಡಿದೆ ಎನ್ನಲಾಗಿದೆ.
ಯುವ ಜನರ ಆತ್ಮಹತ್ಯೆ ಪ್ರಕರಣಗಳಿಗೆ ಪರಿಹಾರವೇ ಇಲ್ಲ ಎಂದಲ್ಲ, ಪರಿಹಾರ ಇದೆ. ಆದರೆ ಆ ಪರಿಹಾರ ಕ್ರಮಗಳನ್ನು ಜಾರಿಗೊಳಿಸುವಲ್ಲಿ ಸರಕಾರಗಳು ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಕೌನ್ಸೆಲಿಂಗ್ ಅನ್ನು ಕಡ್ಡಾಯಗೊಳಿಸಬೇಕು. ಮನೋವೈದ್ಯರನ್ನು ನೇಮಿಸಬೇಕು. ಮನಸ್ಸಿನ ಆರೋಗ್ಯದ ಬಗ್ಗೆ ತೆರೆದ ಚರ್ಚೆ ನಡೆಸಬೇಕು. ಪೋಷಕರು ಮಕ್ಕಳ ಶಿಕ್ಷಣದ ಗುಣಮಟ್ಟದ ಜೊತೆಗೆ ಬದುಕಿನ ಮೌಲ್ಯಗಳಿಗೆ ಮಹತ್ವ ಕೊಡಬೇಕು. ಸರಕಾರ ಉದ್ಯೋಗ ಸೃಷ್ಟಿ, ಕೌಶಲ್ಯ ತರಬೇತಿ, ಮಾನಸಿಕ ಆರೋಗ್ಯ ಕಾರ್ಯಕ್ರಮಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಸಮಾಜದಲ್ಲಿ‘‘ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ತೆಗೆದುಕೊಳ್ಳುವುದು ದೌರ್ಬಲ್ಯವಲ್ಲ’’ ಎಂಬ ಚಿಂತನೆಯನ್ನು ಬೆಳೆಸಬೇಕು. ಈ ಮೂಲಕ ಯುವ ಸಮೂಹದಲ್ಲಿ ಹೆಚ್ಚಾಗುತ್ತಿರುವ ಆತ್ಮಹತ್ಯೆ ಪ್ರಕರಣಗಳು ಕಡಿಮೆ ಮಾಡಲು ಸಾಧ್ಯವಾಗುತ್ತದೆ.
ಯುವಜನರು ಯಾವುದೇ ದೇಶದ ಒಂದು ಅತ್ಯಮೂಲ್ಯವಾದ ಮಾನವ ಸಂಪನ್ಮೂಲರಾಗಿದ್ದಾರೆ. ಅವರ ಸಂರಕ್ಷಣೆ ಮುಂದಿನ ಪೀಳಿಗೆಯ ಸಂರಕ್ಷಣೆಯೇ ಆಗಿದೆ. ಯುವ ಮನಸ್ಸುಗಳು ಸೂಕ್ಷ್ಮತೆಯಿಂದ, ಯೌವನದ ಶಕ್ತಿಯಿಂದ ತುಂಬಿರುತ್ತದೆ. ಇಂತಹ ಮನಸ್ಸುಗಳು ಆತ್ಮಹತ್ಯೆಗೆ ಸಿಲುಕಿ ಕೊಳ್ಳುತ್ತಿರುವ ಪ್ರಕರಣಗಳು ನಿಜಕ್ಕೂ ಆಘಾತಕಾರಿ ಎನಿಸಿಕೊಳ್ಳುತ್ತದೆ. ಹೀಗಾಗಿ ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಗಮನಹರಿಸಬೇಕು, ಆತ್ಮಹತ್ಯೆಯಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಒದಗಿಸಬೇಕಾಗಿದೆ.