ಗೆಣಸು ಎಂದು ಮೂಗು ಮುರಿಯಬೇಡಿ: ಅದರ ಅದ್ಭುತ ಆರೋಗ್ಯ ಲಾಭಗಳನ್ನು ತಿಳಿದುಕೊಳ್ಳಿ

Update: 2018-01-08 13:59 GMT

ಬಡಪಾಯಿ ಸಿಹಿಗೆಣಸನ್ನು ತಿನ್ನುವುದಿರಲಿ, ಅದನ್ನು ಕಂಡರೇ ಮೂಗು ಮುರಿಯುವವರು ಹೆಚ್ಚು. ಅದು ರುಚಿಯಲ್ಲಿ ಸಿಹಿಯಾಗಿರುವುದರಿಂದ ಹೆಚ್ಚಿನವರು ಇಷ್ಟ ಪಡುವುದಿಲ್ಲ. ಆದರೆ ಅದು ನೀಡುವ ಆರೋಗ್ಯಲಾಭಗಳು ಅದ್ಭುತವಾಗಿವೆ. ಅಗ್ಗದ ಬೆಲೆಯಲ್ಲಿ ತುಂಬ ಸುಲಭವಾಗಿ ಸಿಗುವ ಗೆಣಸಿನಲ್ಲಿ ನಮ್ಮ ಶರೀರಕ್ಕೆ ಅಗತ್ಯವಾದ ಹಲವಾರು ಪೋಷಕಾಂಶಗಳು ಸಮೃದ್ಧವಾಗಿದ್ದು, ಬಟಾಟೆಗಿಂತ ಹೆಚ್ಚು ಆರೋಗ್ಯಕರ ವಾಗಿದೆ.

ಬಿಟಾ-ಕೆರೋಟಿನ್, ವಿಟಾಮಿನ್ ಇ,ಸಿ ಮತ್ತು ಬಿ-6, ಪೊಟ್ಯಾಷಿಯಂ ಮತ್ತು ಕಬ್ಬಿಣವನ್ನು ಪುಷ್ಕಳವಾಗಿ ಹೊಂದಿರುವ ಗೆಣಸು ಬಟಾಟೆಗೆ ಹೋಲಿಸಿದರೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್‌ನ್ನು ಹೊಂದಿದೆ. ಹೀಗಾಗಿ ಅದು ಮಧುಮೇಹಿಗಳ ಸ್ನೇಹಿತನಾಗಿದೆ. ನಾವು ಸೇವಿಸುವ ಆಹಾರದಲ್ಲಿನ ಕಾರ್ಬೊಹೈಡ್ರೇಟ್‌ಗಳು ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಬೀರುವ ಪ್ರಮಾಣವನ್ನು ತಿಳಿಯಲು ಗ್ಲೈಸೆಮಿಕ್ ಇಂಡೆಕ್ಸ್ ಮಾನದಂಡವಾಗಿದೆ.

ಗೆಣಸು ನಮ್ಮ ಶರೀರದ ಆಂತರಿಕ ಅಂಗಾಂಗಗಳಿಗೆ ಆಗುವ ಆಕ್ಸಿಡೇಟಿವ್ ಹಾನಿಯನ್ನು ಕಡಿಮೆ ಮಾಡುವ ಸ್ಪೋರಾಮಿನ್ ಪ್ರೋಟಿನ್‌ಗಳನ್ನು ಉತ್ಪಾದಿಸುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದೆ. ಗೆಣಸಿನ ಈ ಆರೋಗ್ಯಲಾಭಗಳು ಗೊತ್ತಾದರೆ ನೀವು ಖಂಡಿತ ನಿಮ್ಮ ಆಹಾರದಲ್ಲಿ ಅದನ್ನೂ ಸೇರಿಸಿಕೊಳ್ಳುತ್ತೀರಿ.

►ಗೆಣಸು ಉತ್ತಮ ಉರಿಯೂತ ನಿವಾರಕ

ಗೆಣಸು ತನ್ನ ಪ್ರಬಲ ಉರಿಯೂತ ನಿವಾರಕ ಗುಣಕ್ಕಾಗಿ ಹೆಸರಾಗಿರುವ ಆ್ಯಂಥೊಸೈನಿನ್ ಅನ್ನು ಒಳಗೊಂಡಿದೆ. ಇದು ಅಂಗಾಂಗಗಳ ಉರಿಯೂತವನ್ನು ತಗ್ಗಿಸಿ ಅವುಗಳಿಗೆ ಹಾನಿಯಾಗುವುದನ್ನು ತಡೆಯುತ್ತದೆ. ಗೆಣಸಿನಲ್ಲಿರುವ ಫೈಬ್ರಿನೋಜೆನ್ ರಕ್ತ ಹೆಪ್ಪುಗಟ್ಟಲು ನೆರವಾಗುತ್ತದೆ.

►ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್

ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಗೆಣಸು ರಕ್ತದಲ್ಲಿಯ ಸಕ್ಕರೆಯ ಮಟ್ಟದಲ್ಲಿ ತೀವ್ರ ಏರಿಕೆಯನ್ನುಂಟು ಮಾಡುವುದಿಲ್ಲವಾದ್ದರಿಂದ ಅದು ಮಧುಮೇಹಿಗಳಿಗೆ ವರದಾನವಾಗಿದೆ. ಬಟಾಟೆಯಿಂದ ದೂರವುಳಿಯುವಂತೆ ಮಧುಮೇಹಿಗಳಿಗೆ ವೈದ್ಯರು ಸೂಚಿಸುತ್ತಾರೆ. ಹೀಗಾಗಿ ಗೆಣಸು ಬಟಾಟೆಗೆ ಆರೋಗ್ಯಕರ ಪರ್ಯಾಯವಾಗಿದೆ.

►ವಯಸ್ಸಾಗುವಿಕೆಯ ಪರಿಣಾಮಗಳ ವಿರುದ್ಧ ರಕ್ಷಣೆ

 ಗೆಣಸಿನಲ್ಲಿ ಕ್ಯಾರೊಟೆನಾಯ್ಡಾ ಮತ್ತು ಬಿಟಾ-ಕ್ಯಾರೊಟಿನ್ ಅಧಿಕ ಪ್ರಮಾಣದಲ್ಲಿದ್ದು, ಅವು ಶರೀರದಲ್ಲಿ ವಿಟಾಮಿನ್ ಎ ತಯಾರಿಕೆಗೆ ನೆರವಾಗುವ ಮೂಲಕ ಕಣ್ಣುಗಳ ದೃಷ್ಟಿಯನ್ನು ಮತ್ತು ಶರೀರದ ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತವೆ. ಪ್ರಬಲ ಉತ್ಕರ್ಷಣ ನಿರೋಧಕಗಳಾಗಿಯೂ ಕೆಲಸ ಮಾಡುವ ಅವು ನಮ್ಮ ಶರೀರದಲ್ಲಿ ಫ್ರೀ ರ್ಯಾಡಿಕಲ್‌ಗಳ ಪರಿಣಾಮವನ್ನು ಕಡಿಮೆ ಮಾಡುತ್ತವೆ ಮತ್ತು ವಯಸ್ಸಾಗುತ್ತಿರುವುದರ ಲಕ್ಷಣಗಳನ್ನು ತಗ್ಗಿಸುತ್ತವೆ.

►ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಗೆಣಸಿನಲ್ಲಿ ಅಧಿಕ ಪ್ರಮಾಣದಲ್ಲಿರುವ ಪೊಟ್ಯಾಷಿಯಂ ಹೃದಯ ಬಡಿತವನ್ನು ಕ್ರಮಬದ್ಧಗೊಳಿಸಲು ನೆರವಾಗುತ್ತದೆ. ನಮ್ಮ ಶರೀರದಲ್ಲಿನ ಸ್ನಾಯುಗಳು ಮತ್ತು ನರಗಳ ಕಾರ್ಯ ನಿರ್ವಹಣೆಯನ್ನು ಉತ್ತಮಗೊಳಿಸುವ ಜೊತೆಗೆ ಗಾಯದಿಂದ ಹಾನಿಗೊಳಗಾದ ಸ್ನಾಯುಗಳು ಬೇಗನೇ ಚೇತರಿಸಿಕೊಳ್ಳುವಂತೆ ಮಾಡುತ್ತದೆ. ಗೆಣಸಿನಲ್ಲಿರುವ ಮ್ಯಾಗ್ನೀಷಿಯಂ ಆರೋಗ್ಯಕರ ರಕ್ತನಾಳಗಳು ಮತ್ತು ಹೃದಯದ ಸ್ನಾಯುಗಳಿಗೆ ಅಗತ್ಯವಾಗಿದೆ.

►ರೋಗ ನಿರೋಧಕ ಶಕ್ತಿಯನ್ನು ಬೆಂಬಲಿಸುತ್ತದೆ

ನಮ್ಮ ಶರೀರಕ್ಕೆ ಅತ್ಯಗತ್ಯ ಖನಿಜವಾಗಿರುವ ಕಬ್ಬಿಣ ಗೆಣಸಿನಲ್ಲಿ ಅಧಿಕ ಪ್ರಮಾಣದಲ್ಲಿದೆ . ಹೀಗಾಗಿ ಅದು ನಮ್ಮ ಶರೀರದ ವಿವಿಧ ಭಾಗಗಳಿಗೆ ಆಮ್ಲಜನಕವನ್ನು ಸಾಗಿಸುವ ಕೋಶಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಮ್ಮ ನಿರೋಧಕ ಶಕ್ತಿಯ ಪ್ರಮುಖ ಭಾಗವಾಗಿರುವ ಬಿಳಿಯ ರಕ್ತಕಣಗಳ ಉತ್ಪಾದನೆಯಲ್ಲಿಯೂ ಅದು ನೆರವಾಗುತ್ತದೆ.

►ಮೂಳೆಗಳನ್ನು ಆರೋಗ್ಯಯುತವಾಗಿಸುತ್ತದೆ

ವಿಟಾಮಿನ್ ಡಿ ಸಮೃದ್ಧವಾಗಿರುವ ಗೆಣಸು ಮೂಳೆಗಳನ್ನು ಸದೃಢಗೊಳಿಸುವಲ್ಲಿ ನೆರವಾಗುತ್ತದೆ. ಆಹಾರದ ಮೂಲಕ ದೊರೆಯುವ ಕ್ಯಾಲ್ಶಿಯಂ ಅನ್ನು ಸಂಸ್ಕರಿಸಲು ನಮ್ಮ ಶರೀರಕ್ಕೆ ವಿಟಾಮಿನ್ ಡಿ ಅಗತ್ಯವಾಗಿದೆ ಮತ್ತು ಅದು ಗೆಣಸಿನಲ್ಲಿದೆ.

►ಚಳಿಗಾಲದಲ್ಲಿ ಉತ್ತಮ ಆಹಾರ

ಗೆಣಸಿನಲ್ಲಿರುವ ವಿಟಾಮಿನ್ ಸಿ ಚಳಿಗಾಲದಲ್ಲಿ ಸಾಮಾನ್ಯವಾಗಿರುವ ಶೀತ ಮತ್ತು ಫ್ಲೂ ವಿರುದ್ಧ ಹೋರಾಡಲು ನಮ್ಮ ಶರೀರಕ್ಕೆ ನೆರವಾಗುತ್ತದೆ. ಗೆಣಸು ಕ್ಯಾನ್ಸರ್‌ಗೆ ಕಾರಣವಾಗುವ ಪ್ಯಾಥೊಜೆನ್‌ಗಳನ್ನೂ ನಮ್ಮ ಶರೀರದಿಂದ ಹೊರಹಾಕುತ್ತದೆ.

►ಚರ್ಮ ಮತ್ತು ತಲೆಗೂದಲಿನ ಆರೋಗ್ಯಕ್ಕೆ ಸಹಕಾರಿ

ಗೆಣಸಿನಲ್ಲಿಯ ಕೆಲವು ಸಂಯುಕ್ತಗಳು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವ ಮೂಲಕ ವಯಸ್ಸಾಗುತ್ತಿರುವ ಲಕ್ಷಣಗಳನ್ನು ದೂರಮಾಡುತ್ತವೆ. ಚರ್ಮದಲ್ಲಿಯ ಕಪ್ಪುಕಲೆಗಳನ್ನೂ ಅವು ನಿವಾರಿಸುತ್ತವೆ. ದಪ್ಪ ತಲೆಗೂದಲಿಗಾಗಿ ಮತ್ತು ತಲೆಗೂದಲಿನ ಬೆಳವಣಿಗೆಗಾಗಿ ಶತಮಾನಗಳಿಂದಲೂ ಗೆಣಸು ಬಳಕೆಯಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News