ಎಂ.ಕಾಂ ವಿದ್ಯಾರ್ಥಿಗಳ ಫಲಿತಾಂಶ 4 ವಾರದಲ್ಲಿ ಪ್ರಕಟಿಸಿ: ಬೆಂವಿವಿಗೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು, ಜ.8: ಕೋಲಾರದ ಶ್ರೀಗೋಕುಲ್ ಕಲಾ, ವಿಜ್ಞಾನ ಮತ್ತು ಮ್ಯಾನೇಜ್‌ಮೆಂಟ್ ಅಧ್ಯಯನ ಕಾಲೇಜಿನ 32 ಎಂ.ಕಾಂ ವಿದ್ಯಾರ್ಥಿಗಳ 3ನೆ ಸೆಮಿಸ್ಟರ್ ಫಲಿತಾಂಶವನ್ನು 4 ವಾರಗಳಲ್ಲಿ ಪ್ರಕಟಿಸುವಂತೆ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಹೈಕೋರ್ಟ್ ಸೋಮವಾರ ನಿರ್ದೇಶಿಸಿದೆ.
ಎಂ.ಕಾಂ 3ನೆ ಸೆಮಿಸ್ಟರ್‌ನ ಸ್ವತಂತ್ರ ಆಯ್ಕೆ ವಿಷಯದ(ಓಪನ್ ಸೆಲೆಕ್ಟಿವ್ ಸಬ್ಜೆಕ್ಟ್) ಫಲಿತಾಂಶ ತಡೆ ಹಿಡಿದಿದ್ದ ಬೆಂಗಳೂರು ವಿವಿ ಕ್ರಮ ಪ್ರಶ್ನಿಸಿ ಎಂ.ಲೀಲಾಶ್ರೀ ಸೇರಿದಂತೆ 32 ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಮಾನ್ಯ ಮಾಡಿದ ನ್ಯಾ. ಬಿ.ವಿ. ನಾಗರತ್ನ ಅವರಿದ್ದ ಪೀಠ, ಈ ಆದೇಶ ನೀಡಿತು.
ವಿದ್ಯಾರ್ಥಿಗಳು ತಮ್ಮ 3ನೇ ಸೆಮಿಸ್ಟರ್‌ನಲ್ಲಿ ಆಯ್ಕೆ ವಿಷಯವಾಗಿ ಫೈನಾನ್ಸ್ ಮತ್ತು ಬ್ಯಾಂಕಿಂಗ್ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪರೀಕ್ಷೆ ಬರೆದು 13 ತಿಂಗಳು ಕಳೆದರೂ ಈವರೆಗೂ ಅವರ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ನಡೆಸದೇ ಫಲಿತಾಂಶ ತಡೆಹಿಡಿದಿರುವ ವಿವಿಯ ಕ್ರಮ ಸರಿಯಲ್ಲ. ಕೂಡಲೇ ಅರ್ಜಿದಾರ ವಿದ್ಯಾರ್ಥಿಗಳ ಉತ್ತರ ಪ್ರತಿಕೆಗಳ ಮೌಲ್ಯಮಾಪನ ನಡೆಸಿ 4 ವಾರಗಳಲ್ಲಿ ಫಲಿತಾಂಶ ಪ್ರಕಟಿಸಬೇಕು ಎಂದು ಬೆಂಗಳೂರು ವಿವಿಗೆ ನ್ಯಾಯಪೀಠ ಆದೇಶಿಸಿದೆ.
ವಿಶ್ವವಿದ್ಯಾಲಯ ತನ್ನ ತಪ್ಪುಗಳನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿಗಳನ್ನು ಬಲಿಪಶು ಮಾಡಲು ಹೊರಟಿದೆ. ವಿಷಯಗಳ ಆಯ್ಕೆ ಕುರಿತು ವಿದ್ಯಾರ್ಥಿಗಳಿಗೆ ಮತ್ತು ಕಾಲೇಜಿಗೆ ಸೂಕ್ತ ಮಾಹಿತಿ ಒದಗಿಸದ ಕಾರಣ ಈ ಸಮಸ್ಯೆ ಎದುರಾಗಿದೆ. ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿದ್ದ ಫೈನಾನ್ಸ್ ಮತ್ತು ಬ್ಯಾಂಕಿಂಗ್ ವಿಷಯವನ್ನು ಮೊದಲೇ ರದ್ದುಗೊಳಿಸಿದ್ದರೆ, ಅವರು ಬೇರೊಂದು ವಿಷಯ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ ಅವರ ಆಯ್ಕೆಯನ್ನು ಪರಿಗಣಿಸಿ, ಪರೀಕ್ಷೆ ಬರೆಯಲು ಅವಕಾಶ ನೀಡಿ, ಪ್ರಶ್ನೆ ಪತ್ರಿಕೆಗಳನ್ನು ಪೂರೈಕೆ ಮಾಡಿ ಆ ನಂತರ ಅವರ ಉತ್ತರ ಪತ್ರಿಕೆಗಳ ವೌಲ್ಯಮಾಪನ ನಡೆಸದೇ ಇರುವುದು ಸರಿಯಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.