ಖಾಸಗಿ ಕೈಗೆ ‘ಮೋರ್ ಕ್ರಾಪ್’ ರೈತರ ಕಣ್ಣಲ್ಲಿ ‘ಮೋರ್ ಡ್ರಾಪ್’

Update: 2018-01-08 18:35 GMT

ಬಹುರಾಷ್ಟ್ರೀಯ ಕಾರ್ಪೊರೇಟ್ ಗಳ ಸೂತ್ರದ ಬೊಂಬೆಗಳಾಗಿರುವ ವರ್ಲ್ಡ್ ಬ್ಯಾಂಕ್, ಏಶ್ಯನ್ ಡೆವಲೆಪ್‌ಮೆಂಟ್ ಬ್ಯಾಂಕಿನಂತಹ ಮುಂಗೈಗೆ ಬೆಲ್ಲ ಅಂಟಿಸುವ ಏಜನ್ಸಿಗಳಿಗೆ ಬೆಳೆಯುತ್ತಿರುವ ದೇಶಗಳ ನೆಲ, ನೀರು ಕಣ್ಣಿಗೆ ಬಿದ್ದು ಈಗ ಒಂದು ದಶಕ ಕಳೆದಿದೆ. ಬಹಳ ಯೋಜಿತವಾಗಿ ಅವರಾಡುತ್ತಿರುವ ಆಟಕ್ಕೆ, ಭಾರತದಲ್ಲಿ ಆ ಪಕ್ಷ- ಈ ಪಕ್ಷ ಎಂಬ ತರತಮ ಇಲ್ಲದೆ ಎಲ್ಲರೂ ಬಿದ್ದಿದ್ದಾರೆ.

ಕಾಂಗ್ರೆಸ್ ಸ್ವಲ್ಪ ಹಿಂಜರಿಕೆಯೊಂದಿಗೆ ಇಡುತ್ತಿದ್ದ ಹೆಜ್ಜೆಗಳನ್ನು ಹಾಲಿ ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಬಹಳ ಧೈರ್ಯದಿಂದ, ಬ್ಯಾಂಡು, ಭಜಂತ್ರಿ, ಸ್ಲೋಗನ್‌ಗಳ ಸಹಿತವಾಗಿ ರಾಜಮರ್ಯಾದೆಯಿಂದ ಇಡುತ್ತಿದೆ. ಕೇಳಿದರೆ ‘ಮೋರ್ ಕ್ರಾಪ್ ಪರ್ ಡ್ರಾಪ್’ ‘ಹರ್ ಕೇತ್ ಕೊ ಪಾನಿ’ ಎಂದೊರಲುವ ತಮ್ಮ ಪಕ್ಷದ ಪ್ರಣಾಳಿಕೆಯತ್ತ ಬೊಟ್ಟು ಮಾಡುತ್ತಿದೆ.

ಅವರೆಲ್ಲರ ಮೂಲ ಮಂತ್ರ ಖಾಸಗೀಕರಣ!
ಕೇಂದ್ರ ಸರಕಾರದ ಅಧೀನದಲ್ಲಿದ್ದ ‘ಯೋಜನಾ ಆಯೋಗ’ ಎಂಬ ಸಮಗ್ರ ಪರಿಕಲ್ಪನೆಯನ್ನು ಕಿತ್ತು ನೀತಿ ಆಯೋಗ ಎಂಬ ಪಕ್ಷ ರಾಜಕೀಯದ ಎಕ್ಸ್‌ಟೆನ್ಷನ್ ಕೌಂಟರ್ ತೆರೆದು ಕುಳಿತಿರುವ ಹಾಲಿ ಆಡಳಿತ ಪಕ್ಷಕ್ಕೆ ಕಾನೂನುಗಳಿರುವುದು ಜನರಿಗಾಗಿ ಎಂಬುದು ಅರಿವಿಲ್ಲ. ಜನರಿರುವುದು ಕಾನೂನು ಪಾಲನೆಗಾಗಿ ಎಂದು ನಂಬಿದವರು ಅವರು.

ಕೃಷಿ ಭೂಮಿಯನ್ನು ಕಾರ್ಪೊರೇಟ್ ಫಾರ್ಮಿಂಗಿಗೆ ಒದಗಿಸಿ ಕೊಡಲು ‘ಮಾಡೆಲ್ ಅಗ್ರಿಕಲ್ಚರಲ್ ಲ್ಯಾಂಡ್ ಲೀಸಿಂಗ್ ಆ್ಯಕ್ಟ್-2016’ ಸಿದ್ಧವಾಗಿದೆ, ಕೃಷಿ ಮಾರುಕಟ್ಟೆಯ ಮೇಲೆ ಕಾರ್ಪೊರೇಟ್ ಆಧಿಪತ್ಯಕ್ಕಾಗಿ ‘ಮಾಡೆಲ್ ಅಗ್ರಿಕಲ್ಚರಲ್ ಪ್ರೊಡ್ಯೂಸ್ ಆ್ಯಂಡ್ ಲೈವ್‌ಸ್ಟಾಕ್ ಮಾರ್ಕೆಟಿಂಗ್ ಕಮಿಟಿ (APLMC) ಆ್ಯಕ್ಟ್ 2017’ ಹೆಸರಲ್ಲಿ ಎಪಿಎಂಸಿ ಕಾಯ್ದೆಯನ್ನು ಸಮಗ್ರವಾಗಿ ಬದಲಾಯಿಸಲು ಕರಡು ಸಿದ್ಧವಾಗಿದೆ.

ಇದೇ ಹಾದಿಯಲ್ಲಿ ಮುಂದುವರಿದು, ಈಗ ಖಾಸಗಿ ಪಾಲ್ಗೊಳ್ಳುವಿಕೆಯೊಂದಿಗೆ ಹನಿ ನೀರಾವರಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ‘ಪಬ್ಲಿಕ್ ಪ್ರೈವೇಟ್ ಪಾರ್ಟನರ್‌ಶಿಪ್ ಇನ್ ಇಂಟಿಗ್ರೇಟೆಡ್ ಮೈಕ್ರೋ ಆ್ಯಂಡ್ ಇರಿಗೇಷನ್ ಇನ್ ಇಂಡಿಯಾ’ ಎಂಬ ಕರಡು ನೀತಿಯನ್ನು ನೀತಿ ಆಯೋಗ ಸಿದ್ಧಪಡಿಸಿದೆ. 2022ರ ವೇಳೆಗೆ ದೇಶದ ಕೃಷಿ ಆದಾಯವನ್ನು ದುಪ್ಪಟ್ಟು ಮಾಡುವ ಪ್ರಯತ್ನದ ಭಾಗಗಳಂತೆ ಇವು.

ಈ ಮೂರೂ ಕಾನೂನು ಬದಲಾವಣೆಗಳನ್ನು ಸಮಗ್ರವಾಗಿ ನೋಡಿದಾಗ, ಇದು ನಮ್ಮ ನೆಲ, ಜಲ ಮತ್ತು ಕೃಷಿ ಮೂರನ್ನೂ ಖಾಸಗಿ ಕೈಗೆ ಕೊಡುವ ಹುನ್ನಾರ ಎಂಬುದು ಸ್ಪಷ್ಟವಾಗುತ್ತದೆ. ಅನ್ನ ಬೆಳೆಯುವುದು ಉಣ್ಣುವುದಕ್ಕೇ ಹೊರತು ಲಾಭಕ್ಕಲ್ಲ ಎಂದು ಗೊತ್ತಿಲ್ಲದವರ ಜೊತೆ ಏಗಬೇಕಿದೆ ನಾವು.

ಏನಿದು ಮೈಕ್ರೋ ಇರಿಗೇಷನ್ ರಾಜಕೀಯ?
ಭಾರತದಲ್ಲಿ 16 ಕೋಟಿ ಹೆಕ್ಟೇರ್ ಕೃಷಿಯೋಗ್ಯ ಭೂಮಿ ಇದೆ. ಆದರೆ ಅದರಲ್ಲಿ ಬರೀ ಶೇ. 41 ಭಾಗ ಅಂದರೆ ಅಂದಾಜು 6.5 ಕೋಟಿ ಹೆಕ್ಟೇರ್ ಭೂಮಿಯಲ್ಲಿ ಮಾತ್ರ ಕೃಷಿ ಚಟುವಟಿಕೆಗಳು ನಡೆಯುತ್ತಿವೆ. ಕೃಷಿ ಭೂಮಿಯಲ್ಲಿ ಹನಿ ನೀರಾವರಿಯಂತಹ ನೀರಿನ ಸಮರ್ಪಕ ಬಳಕೆ ಆಗುತ್ತಿರುವುದು ಬರೀ 86ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಮಾತ್ರ. ಇದರಲ್ಲಿ ಮುಂಚೂಣಿಯಲ್ಲಿರುವುದು ರಾಜಸ್ಥಾನ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಮತ್ತು ಹರ್ಯಾಣ ರಾಜ್ಯಗಳು.

ಭಾರತ ಸರಕಾರ ಮೈಕ್ರೋ ಇರಿಗೇಷನ್‌ಗೆ ಎಂದು ತೆಗೆದಿರಿಸಿರುವುದು ವರ್ಷಕ್ಕೆ 1000 ಕೋಟಿ ರೂ. ಮತ್ತು ಅದರ ಗುರಿ ವಾರ್ಷಿಕ 5 ಲಕ್ಷ ಹೆಕ್ಟೇರ್. ಇಷ್ಟು ನಿಧಾನಕ್ಕೆ ಮೈಕ್ರೋ ಇರಿಗೇಷನ್‌ಗೆ ಬದಲಾದರೆ, ನೂರು ವರ್ಷ ಕಳೆದರೂ ದೇಶದಲ್ಲಿ ಮೈಕ್ರೋ ಇರಿಗೇಷನ್ ಜಾರಿಗೆ ಬರುವುದಿಲ್ಲ, ಹಾಗಾಗಿ ಖಾಸಗಿ ಸಹಭಾಗಿತ್ವದೊಂದಿಗೆ ಇದನ್ನು ಸಾಧಿಸಬೇಕಾಗಿದೆ. ದೀರ್ಘಕಾಲಿಕ ನಿರ್ವಹಣೆಗಳು ಸಮರ್ಪಕವಾಗಿಲ್ಲದ ಕಾರಣ ಮೈಕ್ರೋ ಇರಿಗೇಷನ್‌ನಲ್ಲಿ ನಂಬಿಕೆ ಕಳೆದುಕೊಂಡಿರುವ ರೈತರು ನೀರಾವರಿ ಪಂಪುಗಳನ್ನು ಬಳಸುತ್ತಿದ್ದಾರೆ, ಇದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ ಎಂಬುದು ನೀತಿ ಆಯೋಗದ ಲಾಜಿಕ್.

ಸ್ಥೂಲವಾಗಿ ಈ ಹುನ್ನಾರವನ್ನು ಹೀಗೆ ವಿವರಿಸಬಹುದು:
ರೈತರು ಹತ್ತು ಸಾವಿರ ಹೆಕ್ಟೇರ್ ತನಕದ ತಮ್ಮ ಭೂಮಿಗಳನ್ನು ಒಂದೆಡೆ ಗುಡ್ಡೆ ಹಾಕಿ (ಪೂಲಿಂಗ್), ಅದನ್ನು ಕಂಪೆನಿ ಕಾಯ್ದೆಯಡಿ ಫಾರ್ಮರ್ ಪ್ರೊಡ್ಯೂಸರ್ ಕಂಪೆನಿ(FPC) ಎಂಬ ಖಾಸಗಿ ಕಂಪೆನಿಯಾಗಿ ರೂಪಿಸುವುದು (ಇದು ಕಂಪೆನಿ ಕಾಯ್ದೆ ಮತ್ತು ಸಹಕಾರಿ ಕಾಯ್ದೆಗಳ ಹೈಬ್ರಿಡ್ ರೂಪವಂತೆ!) ಮತ್ತು ನೀರಾವರಿ ಬಳಕೆ ಮಾಡುವವರು ‘ವಾಟರ್ ಯೂಸರ್ ಅಸೋಸಿಯೇಷನ್’ಗಳನ್ನು ರಚಿಸಿಕೊಳ್ಳುವುದು.
ಸರಕಾರದ ಸಹಾಯದಿಂದ ಪ್ರಾಜೆಕ್ಟ್ ಪ್ರಪೊನೆಂಟ್‌ಗಳೆಂಬ ಖಾಸಗಿಯವರು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಅನುಷ್ಠಾನಕ್ಕೆ ಯೋಗ್ಯವಾದ ವಾತಾವರಣ ನಿರ್ಮಿಸುವುದು ಮತ್ತು ಕನ್ಸೆಷನೇರ್‌ಗಳೆಂಬ ಖಾಸಗಿಯವರು ಇಡಿಯ ಯೋಜನೆಯನ್ನು ಆ ಜಾಗದಲ್ಲಿ ನಿರ್ಮಿಸಿ, ಸ್ಥಾಪಿಸಿ, ನಿರ್ವಹಿಸಿ ನಿಭಾಯಿಸುವುದು
ರೈತರು ಇಲ್ಲಿ ತಮಗೆ ದೊರೆತ ನೀರಿಗೆ ಮತ್ತು ಕರ್ಚಾದ ವಿದ್ಯುತ್ತಿಗೆ ತಮ್ಮ FPC ಕಂಪೆನಿಗಳ ಮೂಲಕ ಖಾಸಗಿ ಕನ್ಸೆಷನೇರ್‌ಗಳಿಗೆ ಹಣ ಪಾವತಿಸಬೇಕಾಗುತ್ತದೆ. ಹದಿನೈದು ವರ್ಷಗಳ ಕಾಲ ಖಾಸಗಿಯವರು ಈ ಸ್ಥಾವರಗಳನ್ನು ನಿಭಾಯಿಸಿ, ಬಳಿಕ ರೈತರ ಕಂಪೆನಿಗಳಿಗೆ ಹಸ್ತಾಂತರಿಸುತ್ತಾರೆ.

ಬಿಡಿಬಿಡಿಯಾಗಿ ನೋಡಬೇಡಿ!
ಈ ಎಲ್ಲ ಯೋಜನೆಗಳನ್ನು ಬಿಡಿಬಿಡಿಯಾಗಿ ನೋಡಿದರೆ, ಹಾಗೆ ಮಾಡಿದರೆ ಏನು ತಪ್ಪುಎಂದು ಕೇಳಬಹುದು ನೀವು. ವಿಷಯ ಅಷ್ಟು ಸರಳವಾಗಿಲ್ಲ. ಯಾವತ್ತಿಗೆ ಕಾರ್ಪೊರೇಟ್ ಫಾರ್ಮಿಂಟ್ ಬರುತ್ತದೆಯೋ, ಆವತ್ತಿಗೆ ರೈತರ ಕೈನಿಂದ ಭೂಮಿ ಕಾರ್ಪೊರೇಟ್ ಕಂಪೆನಿಗಳ ಕೈಗೆ ಹೋಗಿರುತ್ತದೆ. ರೈತರೇನಿದ್ದರೂ ಅದರ ಲಾಭದ ಫಲಾನುವಿಗಳು ಅಥವಾ ಹೆಚ್ಚೆಂದರೆ ಆ ಕಾರ್ಪೊರೇಟ್ ಫಾರ್ಮಿನ ಉದ್ಯೋಗಿಗಳು ಮಾತ್ರ.

ಅಂದರೆ, ಭೂಮಿ ಕಾರ್ಪೊರೇಟ್‌ಗಳದು, ಈಗ ಅದಕ್ಕೆ ನೀರಾವರಿ ಒದಗಿಸುವ ನೀರು ಕಾರ್ಪೊರೇಟ್‌ಗಳದು, ಬೆಳೆದ ಬೆಳೆಗೆ ಮಾರುಕಟ್ಟೆ ಕಾರ್ಪೊರೇಟ್‌ಗಳದು ಇಲ್ಲಿಗೆ ಒಂದು ಸುತ್ತು ಸಂಪೂರ್ಣವಾಗುತ್ತದೆ. ರೈತನ ಕೈನಲ್ಲಿ ಕೊನೆಗೆ ಉಳಿಯುವುದು ಕಾರ್ಪೊರೇಟ್ ಫಾರ್ಮಿನಲ್ಲಿ ಮೈಮುರಿದು ದುಡಿದದ್ದಕ್ಕೆ ಬರುವ ತಿಂಗಳ ಕೂಲಿ ಮತ್ತು ಅದನ್ನು ಖರ್ಚು ಮಾಡಲು ಅನ್ನದ ತಟ್ಟೆ ಮಾತ್ರ!

-ಕೃಪೆ: ಅವಧಿ

Writer - ರಾಜಾರಾಂ ತಲ್ಲೂರು

contributor

Editor - ರಾಜಾರಾಂ ತಲ್ಲೂರು

contributor

Similar News