ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸ್ಥಗಿತವಿಲ್ಲ: ತನ್ವೀರ್ ಸೇಠ್
Update: 2018-01-09 22:06 IST
ಬೆಂಗಳೂರು, ಜ.9: ಶಿಕ್ಷಕರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಜ.20ರವರೆಗೆ ಅವಕಾಶ ಕಲ್ಪಿಸಲಾಗಿದೆ. ದಾಖಲೆಗಳ ಪರಿಶೀಲನೆಗೆ ಒಂದು ತಿಂಗಳ ಕಾಲಾವಧಿಯ ಅವಶ್ಯಕತೆ ಇರುತ್ತದೆ. ಅದಾದ ನಂತರ ಕೌನ್ಸಲಿಂಗ್ ಪ್ರಕ್ರಿಯೆ ನಡೆಯಲಿದೆ ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದರು.
ಶಿಕ್ಷಣ ಇಲಾಖೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ ಎಂದು ಕೆಲ ದಿನಪತ್ರಿಕೆಗಳು ಪ್ರಕಟ ಮಾಡಿವೆ. ಯಾವುದೇ ಕಾರಣಕ್ಕೂ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಳ್ಳುವುದಿಲ್ಲ. ಈ ಬಗ್ಗೆ ಶಿಕ್ಷಕರು ಗೊಂದಲಕ್ಕೀಡಾಗುವುದು ಬೇಡವೆಂದು ಸಚಿವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವರ್ಗಾವಣೆ ಪ್ರಕ್ರಿಯೆ ಮುಗಿದ ನಂತರ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಾಗೂ ಶಿಕ್ಷಕ ಸಮುದಾಯದ ಮತ್ತು ಶಿಕ್ಷಕರ ಕುಟುಂಬದ ಹಿತದೃಷ್ಟಿಯಿಂದ ವರ್ಗಾ ವಣೆಗೊಳ್ಳುವ ಶಿಕ್ಷಕರನ್ನು ವರ್ಗಾವಣೆಗೊಂಡ ಸ್ಥಳಕ್ಕೆ ಜೂ.1, 2018ರಿಂದ ಜಾರಿಗೆ ಬರುವಂತೆ ಸ್ಥಳ ನಿಯುಕ್ತಿಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.