ಚಿಂತೆ ಬಿಡಿ....ಮೊಬೈಲ್ ಮೂಲಕ ಆಧಾರ್ ಕಾರ್ಡನ್ನು ಎಲ್ಲಿ ಬೇಕಾದರೂ ಬಳಸಿ

Update: 2018-01-10 13:11 GMT

 ಜನರು ತಮ್ಮ ಆಧಾರ್ ಕಾರ್ಡ್‌ಗಳನ್ನು ಡಿಜಿಟಲ್ ರೂಪದಲ್ಲಿ ತಮ್ಮೊಂದಿಗೆ ಒಯ್ಯಲು ಸಾಧ್ಯವಾಗುವ ಮೊಬೈಲ್ ಅಪ್ಲಿಕೇಷನ್‌ವೊಂದನ್ನು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ)ವು ಬಿಡುಗಡೆಗೊಳಿಸಿದೆ. ಎಂಆಧಾರ್ ಹೆಸರಿನ ಈ ಆ್ಯಪ್‌ನ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಧಾರ್ ವಿವರಗಳನ್ನು ಹೊಂದಿರಬಹುದಾಗಿದೆ. ಡಿಜಿಟಲ್ ರೂಪದಲ್ಲಿರುವ ಈ ಮಾಹಿತಿ ನೀವು ಯುಐಡಿಎಐಗೆ ನೀಡಿರುವ ನಿಮ್ಮ ಹೆಸರು, ಜನ್ಮದಿನಾಂಕ, ಲಿಂಗ, ವಿಳಾಸ ಮತ್ತು ಫೋಟೊವನ್ನು ಒಳಗೊಂಡಿರುತ್ತದೆ. ಎಂಆಧಾರ್‌ನ್ನು ಈಗ ವಿಮಾನ ನಿಲ್ದಾಣಗಳನ್ನು ಪ್ರವೇಶಿಸಲು ಮತ್ತು ರೈಲುಗಳಲ್ಲಿ ಪ್ರಯಾಣಕ್ಕೆ ಗುರುತಿನ ಪುರಾವೆಯಾಗಿ ಬಳಸಬಹು ದಾಗಿದೆ.

ಭಾರತೀಯ ರೈಲುಗಳಲ್ಲಿ ಯಾವುದೇ ಮೀಸಲು ದರ್ಜೆಯಲ್ಲಿ ಪ್ರಯಾಣಿಸಲು ಗುರುತಿನ ಪುರಾವೆಯಾಗಿ ಎಂಆಧಾರ್‌ನ್ನು ಸ್ವೀಕರಿಸಲಾಗುತ್ತಿದೆ. ಆಧಾರ್ ಅನ್ನು ತೋರಿಸಲು ವ್ಯಕ್ತಿಯು ಈ ಆ್ಯಪ್‌ನ್ನು ತೆರೆದು ಪಾಸ್‌ವರ್ಡ್‌ನ್ನು ದಾಖಲಿಸಿದರೆ ಆಧಾರ್ ಕಾರ್ಡ್ ವೀಕ್ಷಣೆಗೆ ಲಭ್ಯವಾಗುತ್ತದೆ.

ಎಂಆಧಾರ್ ಡೌನ್‌ಲೋಡ್ ಮಾಡುವುದು ಹೇಗೆ?

ಎಂಆಧಾರ್ ಪ್ರಸ್ತುತ ಗೂಗಲ್‌ನ ಆ್ಯಂಡ್ರಾಯ್ಡ್ ಪ್ಲಾಟ್‌ಫಾರ್ಮ್ ಗಳಿಗಾಗಿ ಲಭ್ಯವಿದೆ. ಆ್ಯಂಡ್ರಾಯ್ಡ್ ಫೋನ್ ಹೊಂದಿರುವವರು ಅದನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಒಂದು ವೇಳೆ ನಿಮ್ಮ ಮೊಬೈಲ್ ನಂಬರ್ ಆಧಾರ್‌ನೊಂದಿಗೆ ನೋಂದಣಿಯಾಗಿರದಿದ್ದರೆ ಸಮೀಪದ ಆಧಾರ್ ನೋಂದಣಿ ಕೇಂದ್ರ ಅಥವಾ ಮೊಬೈಲ್ ಅಪ್‌ಡೇಟ್ ಎಂಡ್ ಪಾಯಿಟ್‌ಗೆ ತೆರಳಿ ಅದನ್ನು ಮಾಡಬಹುದು.

ಎಂಆಧಾರ್‌ನ ಐದು ವಿಶಿಷ್ಟ ಲಕ್ಷಣಗಳಿಲ್ಲಿವೆ......

►ಪ್ರೊಫೈಲ್ ಡೌನ್‌ಲೋಡ್

ಎಂಆಧಾರ್ ಆ್ಯಪ್ ಬಳಸುವ ಮೂಲಕ ಬಳಕೆದಾರರು ಮೂಲ ಆಧಾರ್ ಕಾರ್ಡ್ ಭೌತಿಕವಾಗಿ ಜೊತೆಯಲ್ಲಿಲ್ಲದಿದ್ದರೂ ಯಾವುದೇ ಸಮಯದಲ್ಲಿಯೂ ತಮ್ಮ ಆಧಾರ್ ವಿವರಗಳನ್ನು ತಲುಪಬಹುದಾಗಿದೆ.

►ಬಯೊಮೆಟ್ರಿಕ್ ಲಾಕಿಂಗ್/ಅನ್‌ಲಾಕಿಂಗ್

ಇದು ಬಯೊಮೆಟ್ರಿಕ್ ದತ್ತಾಂಶಗಳನ್ನು ಅಂದರೆ ಬೆರಳಚ್ಚುಗಳು ಮತ್ತು ಅಕ್ಷಿಪಟಲ ಮುದ್ರೆಯನ್ನು ಲಾಕ್ ಮಾಡುವ ಮೂಲಕ ಆಧಾರ್ ದೃಢೀಕರಣವನ್ನು ಸುರಕ್ಷಿತಗೊಳಿ ಸುವ ಉದ್ದೇಶವನ್ನು ಹೊಂದಿದೆ. ಬಯೊಮೆಟ್ರಿಕ್ ಲಾಕಿಂಗ್ ವ್ಯವಸ್ಥೆಯನ್ನು ಕ್ರಿಯಾಶೀಲ ಗೊಳಿಸಿದ ಬಳಿಕ ವ್ಯಕ್ತಿಯು ಅದನ್ನು ಅನ್ ಲಾಕ್ ಮಾಡುವವರೆಗೆ ಬಯೊಮೆಟ್ರಿಕ್ ವಿವರಗಳು ಲಭ್ಯವಾಗುವುದಿಲ್ಲ. ಹೀಗಾಗಿ ಯಾರಾದರೂ ಬೇರೆಯವರ ಆಧಾರ್ ನಂಬರ್‌ನ್ನು ದುರುಪಯೋಗ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

►ಟಿಒಟಿಪಿ

  ಟೈಮ್ ಬೇಸ್ಡ್ ಒನ್ ಟೈಮ್ ಪಾಸ್‌ವರ್ಡ್ ಅಥವಾ ಒನ್ ಟೈಮ್ ಪಿನ್ ಎಸ್‌ಎಂಎಸ್ ಆಧಾರಿತ ಒಂದು ಬಾರಿಯ ಪಾಸ್‌ವರ್ಡ್(ಒಟಿಪಿ)ಯ ಬದಲಾಗಿ ಬಳಸಬಹುದಾದ ಸ್ವಯಂಚಾಲಿತವಾಗಿ ಸೃಷ್ಟಿಯಾದ ತಾತ್ಕಾಲಿಕ ಪಾಸ್‌ವರ್ಡ್ ಆಗಿದೆ. ಇದರಲ್ಲಿ ಯುಐಡಿಎಐ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸುವ ಒಟಿಪಿಯು ನಿಗದಿತ ಅವಧಿಗೆ ಸೀಮಿತವಾಗಿರುತ್ತದೆ. ಸಾಮಾನ್ಯವಾಗಿ ಈ ಒಟಿಪಿ 30 ನಿಮಿಷಗಳ ಕಾಲ ಊರ್ಜಿತದಲ್ಲಿರುತ್ತದೆ.

►ಪ್ರೊಫೈಲ್ ಅಪ್ಡೇಷನ್

ಯುಐಡಿಎಐಗೆ ಹಿಂದೆ ಸಲ್ಲಿಸಿದ್ದ ಮಾಹಿತಿಗಳಲ್ಲಿ ಬದಲಾವಣೆಗಾಗಿ ವ್ಯಕ್ತಿಯು ಮಾಡಿಕೊಂಡ ಮನವಿ ಈಡೇರಿದ ಬಳಿಕ ತನ್ನ ಅಪ್‌ಡೇಟೆಡ್ ಆಧಾರ್ ಪ್ರೊಫೈಲ್‌ನ್ನು ವೀಕ್ಷಿಸಲು ಎಂಆಧಾರ್‌ನಿಂದ ಸಾಧ್ಯವಾಗುತ್ತದೆ.

►ಕ್ಯೂಆರ್ ಕೋಡ್ ಮತ್ತು ಇ-ಕೆವೈಸಿ ದಾಖಲೆಗಳ ಹಂಚಿಕೊಳ್ಳುವಿಕೆ

ಕ್ಯೂಆರ್ ಕೋಡ್ ಮತ್ತು ಪಾಸ್‌ವರ್ಡ್ ಸಂರಕ್ಷಿತ ಇ-ಕೆವೈಸಿ ವಿವರಗಳನ್ನು ಬಳಕೆದಾರ ಪಡೆದುಕೊಂಡು ಅದನ್ನು ಶೇರ್ ಮಾಡಿಕೊಳ್ಳಲು ಈ ಆ್ಯಪ್ ಅವಕಾಶ ಕಲ್ಪಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News