×
Ad

ಕಲ್ಯಾಣ ಸಮಿತಿಗಳು ಮಕ್ಕಳ ದನಿಯಾಗಿ ಕಾರ್ಯ ನಿರ್ವಹಿಸಲಿ: ಡಾ.ಕೃಪಾ ಆಳ್ವ

Update: 2018-01-10 19:53 IST

ಬೆಂಗಳೂರು, ಜ.10: ಮಕ್ಕಳ ಹಕ್ಕುಗಳ ರಕ್ಷಣೆಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗಳು ಮಕ್ಕಳ ದನಿಯಾಗಿ ಕಾರ್ಯ ನಿರ್ವಹಿಸಬೇಕೆಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷೆ ಡಾ.ಕೃಪಾ ಆಳ್ವ ಹೇಳಿದರು.

ಬುಧವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ವತಿಯಿಂದ ನಗರದ ಮಿಷನ್ ರಸ್ತೆಯ ಎಸ್‌ಎನ್‌ಎಂ ಸಭಾಂಗಣದಲ್ಲಿ ‘ಮಕ್ಕಳ ಪಾಲನೆ, ಪೋಷಣೆ ಮತ್ತು ಮಕ್ಕಳ ಹಕ್ಕು’ ಕುರಿತ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ಎರಡು ದಿನದ ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಹಕ್ಕುಗಳಿಗೆ ಧಕ್ಕೆ ಬಂದಂತಹ ಸಂದರ್ಭದಲ್ಲಿ ಯಾವುದೇ ಮುಲಾಜಿಗೂ ಒಳಗಾಗದೆ ಮಕ್ಕಳಿಗೆ ನ್ಯಾಯ ಕೊಡಿಸುವ ಮೂಲಕ ಮಕ್ಕಳ ದನಿಯಾಗಬೇಕು. ಬಾಲ ನ್ಯಾಯ ಕಾಯಿದೆ 2015ರ ಅಡಿಯಲ್ಲಿ ಕೆಲಸ ಮಾಡುವ ಸಮಿತಿಗಳು ಮಕ್ಕಳ ಹಕ್ಕುಗಳ ರಕ್ಷಣೆ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ಸಮಿತಿಯ ಅಧ್ಯಕ್ಷರು, ಸದಸ್ಯರು ಎಷ್ಟು ವರ್ಷಗಳ ಕಾಲ ಅಧಿಕಾರದಲ್ಲಿರುತ್ತೇವೆ ಎಂಬುದು ಮುಖ್ಯವಲ್ಲ. ತಮ್ಮ ಅಧಿಕಾರಾವಧಿಯಲ್ಲಿ ಮಕ್ಕಳಿಗೆ ನ್ಯಾಯ ಕೊಡಿಸಲು ಮುಂದಾಗಬೇಕು. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬಾಲ ನ್ಯಾಯ ಕಾಯಿದೆ ಮೇಲ್ವಿಚಾರಣೆ ಮಾಡುವ ಕೆಲಸ ಮಾಡುತ್ತದೆ. ಈ ಕಾರಣದಿಂದಾಗಿ ಆಯೋಗ ಮತ್ತು ಸಮಿತಿಗಳು ಸೌಹಾರ್ದಯುತವಾಗಿ ವರ್ತಿಸಿ, ಮಕ್ಕಳಿಗೆ ತೊಂದರೆಗಳಾದ ಸಂದರ್ಭಗಳಲ್ಲಿ ತಕ್ಷಣ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.

ಕರ್ನಾಟಕದ ಯಾವುದೇ ಜಿಲ್ಲಾ ವ್ಯಾಪ್ತಿಯಲ್ಲಾದರೂ ಮಕ್ಕಳ ಹಕ್ಕುಗಳಿಗೆ ಧಕ್ಕೆಯಾಗಿರುವುದು ಕಂಡು ಬಂದರೆ ಮಗುವಿನ ರಕ್ಷಣೆಗೆ ಆಯೋಗ ಸದಾ ಸಿದ್ಧವಿರುತ್ತದೆ ಎಂದು ಕೃಪಾ ಆಳ್ವ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಆಯೋಗದ ಸದಸ್ಯರಾದ ವೈ.ಮರಿಸ್ವಾಮಿ, ಡಾ. ಅಪರ್ಣಾ ಕೊಳ್ಳಾ, ಚಂದ್ರಶೇಖರ, ರೂಪಾ ನಾಯಕ್ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News