×
Ad

ಎಸ್‌ಎಫ್‌ಐ ವಿದ್ಯಾರ್ಥಿಗೆ ಬೆದರಿಕೆ: ಖಂಡನೆ

Update: 2018-01-10 21:10 IST

ಬೆಂಗಳೂರು, ಜ.10: ದಕ್ಷಿಣ ಕನ್ನಡ ಜಿಲ್ಲೆಯ ಎಸ್‌ಎಫ್‌ಐ ಕಾರ್ಯದರ್ಶಿ ಮಾಧುರಿ ಬೋಳಾರ್ ಸಂಘಟನೆಯ ಅಖಿಲ ಭಾರತ ಸಮ್ಮೇಳನಕ್ಕೆ ತೆರಳಿದ್ದ ಸಂದರ್ಭದಲ್ಲಿ ತೆಗೆಸಿಕೊಂಡಿದ್ದ ಅನ್ಯಕೋಮಿನ ವಿದ್ಯಾರ್ಥಿ ಜೊತೆಗಿದ್ದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಬೆದರಿಕೆ ಹಾಕಿರುವುದನ್ನು ಎಸ್‌ಎಫ್‌ಐ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ.

ಪ್ರೌಢ ಶಿಕ್ಷಣ ಪಡೆಯುತ್ತಿರುವ ಸಂದರ್ಭದಲ್ಲಿಯೇ ವಿದ್ಯಾರ್ಥಿ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಮಾಧುರಿ, ಹಲವು ಶೈಕ್ಷಣಿಕ ಸಮಸ್ಯೆಗಳ ವಿರುದ್ಧ, ಶಿಕ್ಷಣದ ವ್ಯಾಪಾರೀಕರಣ, ಅಕ್ರಮಗಳ ವಿರುದ್ಧ ಬೀದಿಗಿಳಿದು ರಾಜಿ ರಹಿತ ಹೋರಾಟ ನಡೆಸುತ್ತಿದ್ದರು. ಅಲ್ಲದೆ, ಮಂಗಳೂರಿನಂತಹ ಕೋಮುವಾದಿಗಳ ನೆಲದಲ್ಲಿ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದ ಮಾಧುರಿ ಮೇಲೆ ಕೋಮುವಾದಿಗಳು ಅಟ್ಟಹಾಸ ಮೆರೆದಿರುವುದು ತೀವ್ರ ಖಂಡನೀಯ ಎಂದು ಸಂಘಟನೆ ದೂರಿದೆ.

ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಯ ಫೋಟೋ ಕದ್ದಿರುವ ಹಿಂದುತ್ವವಾದಿಗಳು ಮುಸ್ಲಿಂ ಸಮುದಾಯದ ಹಂಝ ಹಿಂದೂ ಹುಡುಗಿಯರೊಂದಿಗೆ ಸುತ್ತಾಡುತ್ತಾನೆ. ಅವನು ಕಂಡರೆ ಬಿಡಬೇಡಿ ಎಂಬ ಪ್ರಚೋದಾನಾತ್ಮಕ ಪೋಸ್ಟ್‌ಗಳನ್ನು ಹಾಕಲಾಗಿದೆ. ಅಲ್ಲದೆ, ಮಾಧುರಿಗೆ ವೈಯಕ್ತಿಕವಾಗಿ ಬೆದರಿಕೆ ಹಾಕಿದ್ದು, ಈ ಸಂಬಂಧ ತಾಯಿಯೊಂದಿಗೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.

ಮಂಗಳೂರಿನಲ್ಲಿ ನಡೆಯುತ್ತಿರುವ ಅನೈತಿಕ ಪೊಲೀಸ್ ಗಿರಿ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ವಿದ್ಯಾರ್ಥಿನಿಯರ ಮೇಲೆ ದಾಳಿ ಮಾಡುವ ಅಥವಾ ಅವರ ತೇಜೋವಧೆ ಮಾಡಲು ಮುಂದಾಗಿರುವ  ಕೋಮುವಾದಿಗಳನ್ನು ಮಟ್ಟಹಾಕಲು ರಾಜ್ಯ ಸರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಸ್‌ಎಫ್‌ಐನ ರಾಜ್ಯಾಧ್ಯಕ್ಷ ವಿ.ಅಂಬರೀಶ್ ಹಾಗೂ ಕಾರ್ಯದರ್ಶಿ ಗುರುರಾಜ್ ದೇಸಾಯಿ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News