ಪಾಲಿಕೆ ಬೈಕ್ ಆ್ಯಂಬುಲೆನ್ಸ್‌ನಲ್ಲಿ ಯುವತಿಯರಿಗೆ ಹೆಚ್ಚಿನ ಆದ್ಯತೆ
ಬೆಂಗಳೂರು, ಜ. 10: ತುರ್ತು ಚಿಕಿತ್ಸೆ ಅಗತ್ಯವಿರುವವರಿಗೆ ತ್ವರಿತವಾಗಿ ವೈದ್ಯಕೀಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಬಿಬಿಎಂಪಿ ಶೀಘ್ರದಲ್ಲಿಯೇ ಆರಂಭಿಸುತ್ತಿರುವ ಬೈಕ್ ಆಂಬುಲೆನ್ಸ್ ಸೇವೆಯಲ್ಲಿ ಯುವತಿಯರಿಗೆ ಹೆಚ್ಚಿನ ಆದ್ಯತೆ ಮತ್ತು ಅವಕಾಶ ನೀಡಲು ನಿರ್ಧರಿಸಿದೆ.
ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಎಲ್ಲ ಕಡೆಗಳಿಗೂ ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರ ಸಾಧ್ಯವಿಲ್ಲ. ಇಂತಹ ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆ ಲಭ್ಯವಾಗದೆ ಮಾರ್ಗ ಮಧ್ಯದಲ್ಲೇ ಸಾಕಷ್ಟು ಮಂದಿ ಮೃತರಾಗುತ್ತಿರುವ ಘಟನೆಗಳು ಈಗಲೂ ನಿಂತಿಲ್ಲ. ಇದನ್ನು ಮನಗಂಡು ಬಿಬಿಎಂಪಿ ಬೈಕ್ ಆ್ಯಂಬುಲೆನ್ಸ್ ಸೇವೆಯನ್ನು ಚಾಲ್ತಿಗೆ ತರಲು, ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ಎರಡು ವಾರ್ಡ್‌ಗಳಿಗೆ ಒಂದರಂತೆ ಶೀಘ್ರದಲ್ಲಿಯೇ ಸೇವೆ ಆರಂಭಿಸಲು ನಿರ್ಧರಿಸಿದ್ದು, ಈ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕರೆ ಈ ವರ್ಷಾಂತ್ಯದೊಳಗೆ ಬೈಕ್ ಆ್ಯಂಬುಲೆನ್ಸ್‌ಗಳು ಸೇವೆಗೆ ರಸ್ತೆಗಿಳಿಯಲಿವೆ.
ಈ ಬೈಕ್ ಆ್ಯಂಬುಲೆನ್ಸ್‌ಗಳಲ್ಲಿ ಯುವತಿಯರು ಕಾರ್ಯನಿರ್ವಹಿಸಲಿದ್ದಾರೆ. ಬೈಕ್ ಮೊಬೈಲ್ ಆ್ಯಂಬುಲೆನ್ಸ್ ಸೇವೆಗಾಗಿ 100 ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಿದೆ. ನರ್ಸಿಂಗ್ ಕೋರ್ಸ್ ಮುಗಿಸಿ, ಶುಶ್ರೂಷೆಯಲ್ಲಿ ಪರಿಣತಿ ಹೊಂದಿರುವ, ದ್ವಿಚಕ್ರ ವಾಹನವನ್ನು ಚಲಾಯಿಸುವ ಸಾಮರ್ಥ್ಯ ಹೊಂದಿರುವ ಪುರುಷರು, ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.
ತ್ವರಿತ ಸೇವೆ: ಅಪಘಾತದಲ್ಲಿ ಗಾಯಗೊಂಡವರಿಗೆ, ರೋಗಿಗಳಿಗೆ ಸಕಾಲದಲ್ಲಿ ಉಚಿತ ತುರ್ತು ಸೇವೆ ಒದಗಿಸಲು ಬೈಕ್ ಆ್ಯಂಬುಲೆನ್ಸ್ ಸೇವೆ ನೆರವಾಗಲಿದೆ. ಆರೋಗ್ಯ ಇಲಾಖೆ ಈಗಾಗಲೇ ನಗರದಲ್ಲಿ 19 ಬೈಕ್ ಆ್ಯಂಬುಲೆನ್ಸ್ ಹೊಂದಿದ್ದು, ತುರ್ತು ಚಿಕಿತ್ಸಾ ಸೌಲಭ್ಯ ಒದಗಿಸುತ್ತಿದೆ. ಆದರೆ, ಈ ಆ್ಯಂಬುಲೆನ್ಸ್‌ಗಳು ನಗರದೆಲ್ಲೆಡೆ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಿಬಿಎಂಪಿಯ ಆರೋಗ್ಯ ಸ್ಥಾಯಿ ಸಮಿತಿ ಜನಸಾಮಾನ್ಯರು ಮತ್ತು ಅಪಘಾತಕ್ಕೊಳಗಾಗಿ ಅಸಹಾಯಕರಾಗುವವರಿಗೆ ಪ್ರಥಮ ಚಿಕಿತ್ಸೆ ಸೇವೆ ಒದಗಿಸಲು ಬೈಕ್ ಆ್ಯಂಬುಲೆನ್ಸ್ ಯೋಜನೆ ಜಾರಿಗೆ ತರುತ್ತಿದೆ.
ಸ್ಥಳಕ್ಕೆ ತೆರಳಿ ಚಿಕಿತ್ಸೆ: ಆ್ಯಂಬುಲೆನ್ಸ್ ಸೇವೆ ಒದಗಿಸಲು ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ನಿಯಂತ್ರಣಾ ಕೊಠಡಿ ಸ್ಥಾಪಿಸಲಾಗುತ್ತಿದೆ. ಜನರು ನಿಯಂತ್ರಣ ಕೊಠಡಿಗೆ ಕರೆ ಮಾಡಿ ಅಪಘಾತದ ಮಾಹಿತಿ ನೀಡಿದಾಕ್ಷಣ, ಸ್ಥಳೀಯ ಆ್ಯಂಬುಲೆನ್ಸ್ ಸಿಬ್ಬಂದಿಗೆ ಸಂದೇಶ ರವಾನೆಯಾಗುತ್ತದೆ. ಅವರು ಸ್ಥಳಕ್ಕೆ ತೆರಳಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಿದ್ದಾರೆ. ವಾರ್ಡ್ ವ್ಯಾಪ್ತಿಯ ನಿಗದಿತ ಸ್ಥಳಗಳಲ್ಲಿ ಬೈಕ್ ಆ್ಯಂಬುಲೆನ್ಸ್‌ಗಳನ್ನು ನಿಲುಗಡೆ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ.
ಜಿಪಿಎಸ್ ಅಳವಡಿಕೆ: ಪ್ರತಿಯೊಂದು ಬೈಕ್ ಆ್ಯಂಬುಲೆನ್ಸ್‌ಗೆ ಜಿಪಿಎಸ್ ಸೌಲಭ್ಯ ಅಳವಡಿಸಲಾಗುತ್ತದೆ. ಅಪಘಾತಕ್ಕೆ ಸಕಾಲದಲ್ಲಿ ಪ್ರಥಮ ಚಿಕಿತ್ಸೆ ನೀಡುವ ಉದ್ದೇಶದಿಂದ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.
ಬೈಕ್ ಆ್ಯಂಬುಲೆನ್ಸ್ ಏನೇನಿದೆ?
ಬೈಕ್ ಆ್ಯಂಬುಲೆನ್ಸ್ ಕಿಟ್‌ನಲ್ಲಿ ಗ್ಲುಕೊಮೀಟರ್, ಆಕ್ಸಿಜನ್ ಸಿಲಿಂಡರ್, ಹೃದಯ ಬಡಿತ, ರಕ್ತದೊತ್ತಡ ಪರೀಕ್ಷಿಸುವ ಉಪಕರಣಗಳು, ಇನ್‌ಕ್ಯುಬೇಟರ್ ಕಿಟ್, ಬ್ಯಾಂಡೇಜ್ ಸೇರಿದಂತೆ ಇನ್ನಿತರೆ ಜೀವರಕ್ಷಕ ಔಷಧಗಳು, ಉಪಕರಣಗಳಿರುತ್ತವೆ.
2017-18ನೇ ಸಾಲಿನ ಬಜೆಟ್‌ನಲ್ಲಿ ಶವ ಸಾಗಣೆ ವಾಹನ ಖರೀದಿ, ಆರೋಗ್ಯ ಮತ್ತು ನೈರ್ಮಲ್ಯೀಕರಣಕ್ಕೆ ಮೀಸಲಿಟ್ಟಿರುವ ಬಳಕೆಯಾಗದ 3 ಕೋಟಿ ರೂ.ಅನುದಾನದಲ್ಲಿ, 1 ಕೋಟಿ ರೂ. ಹಣ ಮರುಬಳಕೆ ಮಾಡಿ ಬೈಕ್ ಆ್ಯಂಬುಲೆನ್ಸ್ ಸೇವೆಗೆ ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ.
-ಮುಜಾಹಿದ್ ಪಾಷಾ, ಅಧ್ಯಕ್ಷ, ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ