×
Ad

ಬಿಬಿಎಂಪಿ ಆಯುಕ್ತರಿಗೆ ಹೈಕೋರ್ಟ್ ತುರ್ತು ನೋಟಿಸ್

Update: 2018-01-10 22:45 IST

ಬೆಂಗಳೂರು, ಜ.10: ಬಿಬಿಎಂಪಿಯವರು ನಕ್ಷೆ ಮಂಜೂರಾತಿ ನೀಡದಿದ್ದರೂ ಅವಲಹಳ್ಳಿಯ ರಾಜಕಾಲುವೆ ಮೇಲೆ ಕಾನೂನು ಬಾಹಿರವಾಗಿ ನಾಲ್ಕು ಮಹಡಿಯ ಕಟ್ಟಡವನ್ನು ಕಟ್ಟುತ್ತಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಅರಕೆರೆ ವಿಭಾಗದ ಆಯುಕ್ತ ಡಿ.ರಾಮಚಂದ್ರಗೆ ಹೈಕೋರ್ಟ್ ತುರ್ತು ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜ.29ಕ್ಕೆ ಮುಂದೂಡಿದೆ.

ಕೆ.ಸುನೀಲ್‌ಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸಿದ ಹಂಗಾಮಿ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು.

ಅರ್ಜಿದಾರರ ಪರ ವಾದಿಸಿದ ವಕೀಲ ಕೆ.ಅರ್ಜುನ್ ವರ್ಮಾ ಅವರು, ಬೆಂಗಳೂರಿನ ಅರಕೆರೆ ರಾಜಕಾಲುವೆ ಮೇಲೆ ರಾಮಚಂದ್ರ ಎನ್ನುವವರು ನಾಲ್ಕು ಮಹಡಿಯ ಕಟ್ಟಡವನ್ನು ಕಟ್ಟುತ್ತಿದ್ದರೂ ಬಿಬಿಎಂಪಿ ಅವರು ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಅಲ್ಲದೆ, ಈ ಕಟ್ಟಡವನ್ನು ಕಟ್ಟಲು ಬಿಬಿಎಂಪಿ ಅವರು ನಕ್ಷೆಯನ್ನೂ ನೀಡಿಲ್ಲ. ಹೀಗಾಗಿ, ಈ ಕಟ್ಟಡ ನಿರ್ಮಾಣಕ್ಕೆ ತಡೆ ನೀಡಬೇಕೆಂದು ಪೀಠಕ್ಕೆ ತಿಳಿಸಿದರು.

ಅರ್ಜಿದಾರರ ಪರ ವಾದ ಆಲಿಸಿದ ನ್ಯಾಯಪೀಠವು ಬೆಂಗಳೂರಿನಲ್ಲಿ ಕಾನೂನು ಹದಗೆಟ್ಟು ಹೋಗಿದ್ದು, ಇದೊಂದು ಜಂಗಲ್ ರಾಜ್ಯವಾಗಿದೆ ಎಂದು ಮೌಖಿಕ ಅಭಿಪ್ರಾಯಪಟ್ಟು, ಮುಂದಿನ ವಿಚಾರಣೆ ವೇಳೆ ಕಾನೂನು ಬಾಹಿರವಾಗಿ ಕಟ್ಟಡವನ್ನು ಕಟ್ಟುತ್ತಿದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂಬುದರ ಬಗ್ಗೆ ವರದಿ ನೀಡಬೇಕು. ಕಟ್ಟಡ ನಿರ್ಮಾಣವಾಗುತ್ತೀರುವ ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಸರಕಾರಿ ಪರ ವಕೀಲರಿಗೆ ಸೂಚಿಸಿ ಅರ್ಜಿ ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News