ರನ್‌ವೇ 1: ಪಂಜಾಬಿನ ಈ ಹೋಟೆಲ್ ನೋಡಿದರೆ ನೀವು ಅಚ್ಚರಿಯಲ್ಲಿ ಮುಳುಗುತ್ತೀರಿ

Update: 2018-01-11 11:14 GMT

ವಿಮಾನವೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಆಹಾರವನ್ನು ಒದಗಿಸಬಹುದೇ? ಇದು ವಿಲಕ್ಷಣ ಅನ್ನಿಸುವುದಿಲ್ಲವೇ? ನಿಜ,ಕೇಳಿದರೆ ಹಾಗೆನ್ನಿಸಬಹುದು. ಆದರೆ ಇಂತಹ ವಿಮಾನವೊಂದನ್ನು ಪ್ರತ್ಯಕ್ಷವಾಗಿ ಕಂಡಾಗ ನೀವು ಅಚ್ಚರಿಯಲ್ಲಿ ಮುಳಗುತ್ತೀರಿ.

ವಿಮಾನದೊಳಗೆ ತಿಂಡಿ-ಊಟ ಸೇವಿಸಲು ನೀವು ವಿಮಾನಯಾನದ ಟಿಕೆಟ್ ಪಡೆಯಲೇಬೇಕು ಎಂದೇನಿಲ್ಲ. ನೀವು ಮಾಡಬೇಕಾದ್ದು ಇಷ್ಟೇ, ಪಂಜಾಬಿನ ಲೂಧಿಯಾನಾದಿಂದ ಸುಮಾರು 50 ಕಿ.ಮೀ.ದೂರ ಅಂಬಾಲಾ-ಕುರುಕ್ಷೇತ್ರ ನಡುವಿನ ರಾಷ್ಟ್ರೀಯ ಹೆದ್ದಾರಿ-1ರಲ್ಲಿ ಸಾಗಿ ಅಲ್ಲಿ ನಿಂತಿರುವ ಏರ್‌ಬಸ್-ಎ320 ವಿಮಾನವನ್ನು ಹತ್ತಿದರೆ ಸಾಕು. ರನ್‌ವೇ 1 ಈ ವಿಮಾನದಲ್ಲಿ ಆರಂಭಗೊಂಡಿರುವ ರೆಸ್ಟೋರಂಟ್‌ನ ಹೆಸರಾಗಿದೆ.

ಈ ವಿಮಾನದಲ್ಲಿ ಊಟ ಮಾಡಲು ನೀವು ನೆಲದಲ್ಲಿರುವ ರಿಸೆಪ್ಶನ್ ಕೌಂಟರ್‌ನಲ್ಲಿ ವಿಮಾನ ನಿಲ್ದಾಣದಲ್ಲಿಯಂತೆ ಬೋರ್ಡಿಂಗ್ ಪಾಸ್ ಪಡೆದುಕೊಳ್ಳಬೇಕಾಗುತ್ತದೆ. ನಂತರ 15 ವರ್ಷಗಳಷ್ಟು ಹಳೆಯದಾದ ವಿಮಾನವನ್ನು ಪ್ರವೇಶಿಸಬಹುದಾಗಿದೆ.

ಈ ವಿಮಾನ ರೆಸ್ಟೋರಂಟ್‌ನಲ್ಲಿ 50 ಸಿಬ್ಬಂದಿಗಳಿದ್ದು, ಇವರ ದಿರಿಸು ವಿಮಾನಗಳಲ್ಲಿಯ ಮತ್ತು ನೆಲದ ಮೇಲಿನ ಸಿಬ್ಬಂದಿಗಳ ಸಮವಸ್ತ್ರವನ್ನೇ ಹೋಲುತ್ತದೆ. ಈ ಎಲ್ಲ ಸಿಬ್ಬಂದಿಗಳ ವಸತಿ ಮತ್ತು ಊಟದ ಖರ್ಚನ್ನು ರೆಸ್ಟೋರಂಟ್‌ನ ಮಾಲಿಕರೇ ಭರಿಸುತ್ತಾರೆ.

ರನ್‌ವೇ 1ರಲ್ಲಿ ವರ್ಚ್ಯುವಲ್ 3ಡಿ ಫ್ಯೈಟ್ ಸ್ಟಿಮ್ಯುಲೇಷನ್ ಗೇಮಿಂಗ್ ವ್ಯವಸ್ಥೆಯಿದ್ದು, ಇದರಿಂದಾಗಿ ಇದು ಇತರ ರೆಸ್ಟೋರಂಟ್‌ಗಳಿಗಿಂತ ಭಿನ್ನವಾಗಿದೆ. ಹೀಗಾಗಿ ಮಕ್ಕಳು ಈ ವಿಮಾನದೊಳಗೆ 3ಡಿ ಆಟಗಳ ಮೋಜನ್ನು ಅನುಭವಿಸುತ್ತಾರೆ.

ಹೆದ್ದಾರಿ ಪಕ್ಕದಲ್ಲಿರುವ ಶಹಬಾದ್‌ನ ಉದ್ಯಮಿ ಕುಟುಂಬಕ್ಕೆ ಸೇರಿದ ಒಂದೂವರೆ ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ಈ ಬೃಹತ್ ವಿಮಾನವನ್ನು ನಿಲ್ಲಿಸಲಾಗಿದೆ.

ಏರ್ ಇಂಡಿಯಾ ತನ್ನ ಸೇವೆಯಿಂದ ನಿವೃತ್ತಿಗೊಳಿಸಿದ್ದ ಈ ವಿಮಾನ ರೆಸ್ಟೋರಂಟ್ ಆಗಿ ಕಳೆದ ವರ್ಷದ ನವೆಂಬರ್‌ನಿಂದ ಜನರಿಗೆ ಸೇವೆಯನ್ನು ಒದಗಿಸುತ್ತಿದೆ. ಗುಜರಿ ಸ್ಥಿತಿಯಲ್ಲಿದ್ದ ವಿಮಾನವನ್ನು ಖರೀದಿಸಿ ಅದನ್ನು ರೆಸ್ಟೋರಂಟ್ ಆಗಿ ಮಾಡಲು ಮಾಲಕರಿಗೆ ಬರೋಬ್ಬರಿ ಒಂದೂವರೆ ವರ್ಷ ಬೇಕಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News