×
Ad

ಜಮೀನು ಮಂಜೂರಾತಿ ರದ್ದತಿಗೆ ಹೈಕೋರ್ಟ್ ತಡೆ

Update: 2018-01-11 22:11 IST

ಬೆಂಗಳೂರು, ಜ.11: ಪುರಾತತ್ವ ಶಾಸನ ಶಾಸ್ತ್ರಗಳ ಅಧ್ಯಯನ, ತಾಳೆಗರಿ ಹಸ್ತಪ್ರತಿ ಸಂರಕ್ಷಣೆಯ ಅಧ್ಯಯನ ಕೇಂದ್ರ ಸ್ಥಾಪನೆಗೆ ನಗರದ ಯಲಹಂಕ ತಾಲ್ಲೂಕಿನ ಆವಲಹಳ್ಳಿ ಗ್ರಾಮದಲ್ಲಿ 10 ಎಕರೆ ಜಮೀನನ್ನು ದಿ ಮಿಥಿಕ್ ಸೊಸೈಟಿಗೆ ಮಂಜೂರಾತಿ ಮಾಡಿದ್ದ ಆದೇಶವನ್ನು ರದ್ದುಪಡಿಸಿದ್ದ ರಾಜ್ಯ ಕಂದಾಯ ಇಲಾಖೆಯ ಆದೇಶಕ್ಕೆ ಹೈಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ.

ಕಂದಾಯ ಇಲಾಖೆ ಆದೇಶ ಪ್ರಶ್ನಿಸಿ ದಿ ಮಿಥಿಕ್ ಸೊಸೈಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಎನ್. ಸತ್ಯನಾರಾಯಣ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿತು.

ಹತ್ತು ಎಕರೆ ಜಮೀನು ಮಂಜೂರು ಮಾಡುವಂತೆ ದಿ ಮಿಥಿಕ್ ಸೊಸೈಟಿ ಅವರು 2009ರಲ್ಲಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿತ್ತು. ಅದರಂತೆ ಯಲಹಂಕ ತಾಲೂಕಿನ ಆವಲಹಳ್ಳಿ ಗ್ರಾಮದಲ್ಲಿ 10 ಎಕರೆಯನ್ನು ಜಿಲ್ಲಾಡಳಿತ 2012ರ ಜನವರಿ 17ರಂದು ಸೊಸೈಟಿಗೆ ಮಂಜೂರು ಮಾಡಿತ್ತು. ಎರಡು ವರ್ಷಗಳೊಳಗೆ ಅಧ್ಯಯನ ಕೇಂದ್ರ ಆರಂಭಿಸಬೇಕು. ಒಂದು ವೇಳೆ ಅನ್ಯ ಉದ್ದೇಶಕ್ಕೆ ಬಳಸಿದರೆ ಯಾವುದೇ ಸೂಚನೆ ನೀಡದೆ ಕಂದಾಯ ಇಲಾಖೆ ವಶಕ್ಕೆ ಪಡೆಯಲಾಗುತ್ತದೆ ಎಂದು ಮಂಜೂರಾತಿ ಆದೇಶದಲ್ಲಿ ಷರತ್ತು ವಿಧಿಸಲಾಗಿತ್ತು. ಈ ಜಾಗಕ್ಕೆ ಮೋಜಣಿ ಮಾಡಿಸಿ, ಗಡಿ ಗುರುತಿಸಿ ಸೊಸೈಟಿಗೆ ಹಸ್ತಾಂತರಿಸುವಂತೆ ತಹಶೀಲ್ದಾರ್ ಅವರಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದರು. ಆದರೆ, ಸೊಸೈಟಿಯವರು ಈ ಜಾಗದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಹೀಗಾಗಿ ಮಂಜೂರಾತಿ ರದ್ದುಪಡಿಸಬೇಕು ಎಂದು ಯಲಹಂಕ ತಹಶೀಲ್ದಾರ್ ಅವರು 2016ರ ಮಾ.3ರಂದು ಪ್ರಸ್ತಾವ ಸಲ್ಲಿಸಿದ್ದರು.

ಇದರಿಂದ ಸಂಸ್ಥೆಯ ಹೆಸರಿಗೆ 2012ರ ಡಿಸೆಂಬರ್ 4ರಂದು ಖಾತೆ ಅಂಗೀಕರಿಸಲಾಗಿತ್ತು. ಈ ಜಾಗ ಸಂಸ್ಥೆಯ ಅನುಭೋಗದಲ್ಲಿ ಇಲ್ಲ. ಷರತ್ತನ್ನು ಪೂರೈಸುವಲ್ಲಿ ಸೊಸೈಟಿ ವಿಫಲವಾಗಿದೆ ಎಂದು ತಿಳಿಸಿದ್ದ ಜಿಲ್ಲಾಧಿಕಾರಿ ಅವರು, ಕಂದಾಯ ಇಲಾಖೆಯ ಭೂ ಮಂಜೂರಾತಿ ವಿಭಾಗಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಇದರಿಂದ 2017ರ ಜೂನ್ 20ರಂದು ಕಂದಾಯ ಇಲಾಖೆಯು ಜಮೀನು ಮಂಜೂರಾತಿಯನ್ನು ರದ್ದುಪಡಿಸಲಾಗಿತ್ತು.ಈ ಕ್ರಮವನ್ನು ಪ್ರಶ್ನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News