ಎಫ್‌ಐಆರ್ ರದ್ದುಕೋರಿ ಜಿ.ಟಿ.ದೇವೇಗೌಡ ಪುತ್ರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ

Update: 2018-01-11 17:03 GMT

ಬೆಂಗಳೂರು, ಜ.11: ಕರ್ನಾಟಕ ಗೃಹ ಮಂಡಳಿ(ಕೆಎಚ್‌ಬಿ) ಭೂ ಖರೀದಿ ಅವ್ಯವಹಾರ ಪ್ರಕರಣದಲ್ಲಿ ತಮ್ಮ ವಿರುದ್ಧ ಎಸಿಬಿ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು ಮತ್ತು ರಾಜ್ಯ ಸರಕಾರವು ಎಸಿಬಿ ರಚನೆ ಮಾಡಿ ಹೊರಡಿಸಿದ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಶಾಸಕ ಜಿ.ಟಿ. ದೇವೇಗೌಡ ಅವರ ಪುತ್ರ ಹರೀಶ್ ಗೌಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ಏಕಸದಸ್ಯ ಪೀಠ, ಎಸಿಬಿ ರಚನೆ ಪ್ರಶ್ನಿಸಿ ಈಗಾಗಲೇ ಹೈಕೋರ್ಟ್‌ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳು ವಿಭಾಗೀಯ ಪೀಠದ ಮುಂದೆ ವಿಚಾರಣೆ ಹಂತದಲ್ಲಿವೆ. ಹೀಗಾಗಿ, ಈ ಅರ್ಜಿಯನ್ನೂ ವಿಭಾಗೀಯ ಪೀಠವೇ ವಿಚಾರಣೆ ನಡೆಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿತು. ನಂತರ ಅರ್ಜಿಯನ್ನು ವಿಭಾಗೀಯ ಪೀಠಕ್ಕೆ ವರ್ಗಾಯಿಸಿತು.

ವಸತಿ ಉದ್ದೇಶಕ್ಕಾಗಿ ಕೆಎಚ್‌ಬಿಯು ಮೈಸೂರಿನ ವಿವಿಧ ಪ್ರದೇಶದಲ್ಲಿ ರೈತರಿಂದ ಜಮೀನು ಖರೀದಿಸಿತ್ತು. ಖರೀದಿಸಿದ ಪ್ರತಿ ಎಕರೆ ಜಮೀನಿಗೆ 36.50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಕೆಎಚ್‌ಬಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ, 2008 ಹಾಗೂ 2009ರಲ್ಲಿ ಗುಂಗ್ರಾಲ್ ಛತ್ರ, ಕಲ್ಲೂರು ನಾಗನಹಳ್ಳಿ ಹಾಗೂ ಯಲಚನಹಳ್ಳಿ ಗ್ರಾಮ ವ್ಯಾಪ್ತಿಯಲ್ಲ ಕೆಲ ಮಧ್ಯವರ್ತಿಗಳು ಸುಮಾರು 81 ಎಕರೆ ಭೂಮಿಯನ್ನು ಕೇವಲ 8ರಿಂದ 18 ಲಕ್ಷ ರೂ. ಖರೀದಿಸುವ ಸಂಬಂಧ ರೈತರೊಂದಿಗೆ ಖರೀದಿಸಲು ಒಡಂಬಡಿಕೆ ಮಾಡಿಕೊಂಡಿದ್ದರು. ನಂತರ ಅದೇ ಜಮೀನಿಗೆ ಅಧಿಕಾರಿಗಳ ಸಹಕಾರದಿಂದ ಕೆಎಚ್‌ಬಿಯಿಂದ ಪ್ರತಿ ಎಕರೆಗೆ 36.50 ಲಕ್ಷ ರೂ.ಗಳನ್ನು ಮಂಡಳಿಯಿಂದ ಪಡೆದುಕೊಂಡಿದ್ದರು. ಆ ಮೂಲಕ ಬೊಕ್ಕಸಕ್ಕೆ ನಷ್ಟು ಉಂಟು ಮಾಡಲಾಗಿದೆ ಎಂಬ ಅಂಶವು ಲೋಕಾಯುಕ್ತರ ವರದಿಯಲ್ಲಿ ಬಹಿರಂಗವಾಗಿತ್ತು.

ಈ ಸಂಬಂಧ ದೂರನ್ನು ಲೋಕಾಯುಕ್ತದಿಂದ ಎಸಿಬಿಗೆ ವರ್ಗಾಯಿಸಲಾಗಿತ್ತು. ಇದರಿಂದ ಎಸಿಬಿ ಎಫ್‌ಐಆರ್ ದಾಖಲಿಸಿತ್ತು. ಪ್ರಕರಣದಲ್ಲಿ ಹರೀಶ್ ಗೌಡ ಸಹ ಆರೋಪಿಯಾಗಿದ್ದರು. ಇದೀಗ ಅವರು ತಮ್ಮ ವಿರುದ್ಧದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News