ರಾಜ್ಯದ 16 ಜಿಲ್ಲೆಗಳು ಬಯಲು ಬಹಿರ್ದೆಸೆ ಮುಕ್ತ: ಎಚ್.ಕೆ.ಪಾಟೀಲ್

Update: 2018-01-11 17:09 GMT

ಬೆಂಗಳೂರು, ಜ.11: ಕರ್ನಾಟಕವನ್ನು ಬಯಲು ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಸರಕಾರವು, ಅ.2ರಂದು 11 ಜಿಲ್ಲೆಗಳನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಳನ್ನಾಗಿ ಘೋಷಿಸಿದೆ. ಪ್ರಸ್ತುತ ನಮ್ಮ ರಾಜ್ಯದಲ್ಲಿ ರಾಜ್ಯದಲ್ಲಿ 16 ಜಿಲ್ಲೆಗಳು, 97 ತಾಲೂಕುಗಳು, 3454 ಗ್ರಾ.ಪಂಗಳು, 17,536 ಗ್ರಾಮಗಳು ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಿಸಲಾಗಿದೆ.

ಚಿಕ್ಕಬಳ್ಳಾಪುರ, ಮೈಸೂರು, ಕೊಪ್ಪಳ ಹಾಗೂ ಚಾಮರಾಜನಗರ ಜಿಲ್ಲೆಗಳು ಜ.30ರಂದು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಳೆಂದು ಘೋಷಿಸಲ್ಪಡುವ ಅರ್ಹತೆಯನ್ನು ಪಡೆಯಲಿವೆ. ಆದರೆ, ಬಿಜಾಪುರ, ರಾಯಚೂರು, ಬೀದರ್, ಯಾದಗಿರಿ, ಗುಲ್ಬರ್ಗ ಜಿಲ್ಲೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿಯಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಈ ಜಿಲ್ಲೆಗಳ ಎಲ್ಲ ಗ್ರಾಮ ಪಂಚಾಯತ್ ಅಧ್ಯಕ್ಷರು, ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಜನಪ್ರತಿನಿಧಿಗಳಿಗೆ ಅವರ ಜವಾಬ್ದಾರಿಯನ್ನು ಅರ್ಥೈಸಿಕೊಂಡು ರಾಜ್ಯದ ಗುರಿ ಮುಟ್ಟಲು ಸಹಕರಿಸುವಂತೆ ಕೋರಲಾಗಿದೆ. ಅಲ್ಲದೆ, ಆ ಜಿಲ್ಲೆಗಳ ಜಿ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ರಾಜ್ಯಕ್ಕೆ ಇನ್ನು ಸುಮಾರು 18 ಲಕ್ಷ ಶೌಚಾಲಯಗಳ ಅಗತ್ಯವಿದೆ. ಮಾರ್ಚ್‌ನೊಳಗೆ ಎಲ್ಲ ಶೌಚಾಲಯಗಳನ್ನು ನಿರ್ಮಿಸುವ ಗುರಿಯಿದೆ. ಶೌಚಾಲಯಕ್ಕಾಗಿ ಸಮರ ಅತ್ಯಂತ ಪರಿಣಾಮಕಾರಿಯಾಗಿ ನಡೆಯುತ್ತಿದೆ. ಫೆಬ್ರವರಿ ವೇಳೆಗೆ ಇನ್ನು 2-3 ಜಿಲ್ಲೆಗಳನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿ ಮಾಡುವ ಉದ್ದೇಶವಿೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್, ಮಹಾದಾಯಿ ವಿಚಾರದಲ್ಲಿ ನೀಡಿರುವ ಹೇಳಿಕೆಯಿಂದ ರಾಜ್ಯದ ರೈತರು, ಪ್ರಜ್ಞಾವಂತ ನಾಗರಿಕರು ಆಕ್ರೋಶಗೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಶಿ ರಾಜ್ಯದ ಜನತೆಯ ಪ್ರೌಢಿಮೆಯನ್ನು ಪ್ರಶ್ನಿಸುವಂತೆ ಆಡಿರುವ ಈ ರಾಜಕೀಯ ಕುತಂತ್ರದ ನಾಟಕ ಇವತ್ತು ಬಟಾಬಯಲಾಗಿದೆ ಎಂದು ಎಚ್.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ಮನೋಹರ್ ಪಾರಿಕ್ಕರ್ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ, ಯಡಿಯೂರಪ್ಪಗೆ ಪತ್ರ ಬರೆಯಲು ಬೇರೆ ಬೇರೆ ಕಾರಣಗಳಿವೆ ಎಂದಿದ್ದಾರೆ. ಯಾವ ಕಾರಣಕ್ಕಾಗಿ ಪಾರಿಕ್ಕರ್ ಅವರಿಂದ ಪತ್ರ ಬರೆಸಿಕೊಂಡು ತರಲಾಯಿತು ಎಂಬುದನ್ನು ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹಾಗೂ ಪ್ರಹ್ಲಾದ್ ಜೋಶಿ ಜನತೆಯ ಮುಂದಿಡಬೇಕು ಎಂದು ಅವರು ಆಗ್ರಹಿಸಿದರು.

ಪಾರಿಕ್ಕರ್, ಯಡಿಯೂರಪ್ಪಗೆ ಪತ್ರ ಬರೆದ ಬಗ್ಗೆ ಹಲವಾರು ರೀತಿಯಲ್ಲಿ ವಿಶ್ಲೇಷಣೆಗಳು ನಡೆಯಿತು. ಇದೊಂದು ರಾಜಕೀಯ ಪತ್ರ ಎಂಬುದನ್ನು ರೈತರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿಯಲ್ಲಿ ಬಿಜೆಪಿ ನೆಲೆ ಕಳೆದುಕೊಳ್ಳುತ್ತಿದೆ. ತಮ್ಮ ಪರಿವರ್ತನಾ ಸಮಾವೇಶಕ್ಕೆ ಜನರನ್ನು ಸೇರಿಸಲು ಮಹಾದಾಯಿ ರಾಜಿ ಸಂಧಾನದ ಬಗ್ಗೆ ಘೋಷಣೆ ಮಾಡುವ ರೀತಿಯಲ್ಲಿ ಬಿಂಬಿಸಲಾಯಿತು ಎಂದು ಅವರು ಟೀಕಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮುತ್ಸದ್ದಿತನ ತೋರಿಸಿ, ಪ್ರತಿಷ್ಠೆಗೆ ಅಂಟಿಕೊಳ್ಳದೆ ರಾಜ್ಯದ ಹಿತಕ್ಕಾಗಿ ಪಾರಿಕ್ಕರ್‌ಗೆ ಪತ್ರ ಬರೆದರು. ಬಿಜೆಪಿಯವರು ಇಂತಹ ಕುತಂತ್ರ ಮಾಡಿ ರಾಜ್ಯದ ಜನರಿಗೆ ಅವಮಾನ ಮಾಡುವ ಅವಶ್ಯಕತೆ ಏನಿತ್ತು. ಪಾರಿಕ್ಕರ್ ಹೇಳಿಕೆ ನಂತರ, ರಾಜ್ಯದ ಜನತೆಯ ಬೆಂಬಲ, ಆಶೀರ್ವಾದ ಕೇಳುವ ನೈತಿಕ ಹಕ್ಕನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಯಾವ ಮುಖ ಇಟ್ಟುಕೊಂಡು ಬಿಜೆಪಿಯವರು ಪರಿವರ್ತನಾ ರ್ಯಾಲಿ ನಡೆಸುತ್ತಿದ್ದಾರೆ. ಕ್ಷುಲ್ಲಕ ರಾಜಕಾರಣ ಮಾಡುವುದನ್ನು ಬಿಟ್ಟು, ಪ್ರಧಾನಿಯ ಮನವೊಲಿಕೆಗೆ ಯತ್ನಿಸಿದ್ದರೆ ಇವರ ರಾಜ್ಯದ ಪರವಾದ ಕಾಳಜಿಯನ್ನು ಮೆಚ್ಚಬಹುದಿತ್ತು. ಅದನ್ನು ಬಿಟ್ಟು ರಾಜ್ಯದ ಜನತೆಗೆ ಮೋಸ ಮಾಡಲು ರಾಷ್ಟ್ರೀಯ ಪಕ್ಷವೊಂದು ಇಷ್ಟು ಸಣ್ಣತನಕ್ಕೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಹೇಳಿದರು.

ಸಂವಿಧಾನಾತ್ಮಕ ಹುದ್ದೆಯನ್ನು ಅಲಂಕರಿಸಿರುವ ಮನೋಹರ್ ಪಾರಿಕ್ಕರ್, ಒಕ್ಕೂಟ ವ್ಯವಸ್ಥೆಯಲ್ಲಿ ಕೈಗೊಂಡಿರುವ ರಾಷ್ಟ್ರೀಯ ಜಲ ನೀತಿಯ ಮಹತ್ವದ ತೀರ್ಮಾನವನ್ನು ವಿರೋಧಿಸಿರುವುದು ಖಂಡನೀಯ. ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಲಾಯಕ್ಕಲ್ಲ. 200 ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರಪಾಲಾಗುತ್ತಿದೆ. 42-45 ಟಿಎಂಸಿ ನೀರು ನಮಗೆ ಸಿಗಲೇಬೇಕು ಎಂದು ಅವರು ಹೇಳಿದರು.

ಮನೋಹರ್ ಪಾರಿಕ್ಕರ್ ತಪ್ಪು ಹೆಜ್ಜೆಗಳನ್ನು ಇಡುತ್ತಿದ್ದು, ರಾಜ್ಯದ ಕೆಲವು ಸಣ್ಣ ಮನಸ್ಸಿನ ರಾಜಕಾರಣಿಗಳೊಂದಿಗೆ ಸೇರಿ ಕುತಂತ್ರದ ನಾಟಕವಾಡುತ್ತಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಮುಂದುವರೆಯಲು ಅವರಿಗೆ ನೈತಿಕತೆಯಿಲ್ಲ. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹಾಗೂ ಪ್ರಹ್ಲಾದ್ ಜೋಶಿ ಉತ್ತರ ಕರ್ನಾಟಕ ಭಾಗದ ರೈತರ ಕ್ಷಮೆ ಕೋರಬೇಕು ಎಂದು ಎಚ್.ಕೆ.ಪಾಟೀಲ್ ಆಗ್ರಹಿಸಿದರು.

ರಾಜ್ಯಕ್ಕೆ ಕೇಂದ್ರ ಸರಕಾರದ ಪ್ರಶಸ್ತಿ

ಕೋಲಾರ ಜಿಲ್ಲೆಯಲ್ಲಿ 100 ದಿನಗಳಲ್ಲಿ 75 ಸಾವಿರ ಶೌಚಾಲಯಗಳನ್ನು ನಿರ್ಮಿಸುವ ಮೂಲಕ 1107 ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಮಾಡಿದ ಸಾಧನೆಗಾಗಿ ಕೇಂದ್ರ ಸರಕಾರವು ‘ಸ್ವಚ್ಛತಾ ಹೀ ಸೇವಾ ಪ್ರಶಸ್ತಿ’ ನೀಡಿದೆ. ಅಲ್ಲದೆ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ‘ದರ್ಪಣ ಪ್ರಶಸ್ತಿ’ ಲಭಿಸಿದೆ.
-ಎಚ್.ಕೆ.ಪಾಟೀಲ್, ಗ್ರಾಮೀಣಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News