ಮಾಧ್ಯಮಗಳ ಆಶಯವನ್ನು ಸಾಮಾಜಿಕ ಜಾಲತಾಣ ಈಡೇರಿಸಬಲ್ಲದು: ಮಂಜುನಾಥ ಅದ್ದೆ

Update: 2018-01-11 17:16 GMT

ಬೆಂಗಳೂರು, ಜ.11: ದಿನಪತ್ರಿಕೆಗಳು ಹಾಗೂ ಟಿವಿ ಮಾಧ್ಯಮಗಳು ಜಾಹೀರಾತಿಗೆ ಹೆಚ್ಚಿನ ಆದ್ಯತೆ ಕೊಡುತ್ತಿರುವ ಇವತ್ತಿನ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳು ಮಾತ್ರ ನಿಜವಾದ ಪತ್ರಿಕೋದ್ಯಮದ ಆಶಯಗಳನ್ನು ಈಡೇರಿಸಬಲ್ಲವು ಎಂದು ಹಿರಿಯ ಪತ್ರಕರ್ತ ಮಂಜುನಾಥ ಅದ್ದೆ ಅಭಿಪ್ರಾಯಪಟ್ಟರು.

ಗುರುವಾರ ಬಯಲು ಬಳಗ ನಗರದ ಸರಕಾರಿ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಜನಪರ ಪತ್ರಿಕೋದ್ಯಮ’ ಕುರಿತು ಉಪನ್ಯಾಸ ನೀಡಿದ ಅವರು, ಪ್ರಸ್ತುತ ಕನ್ನಡ ಪತ್ರಿಕೋದ್ಯಮದ ಜಗತ್ತು ತನ್ನ ಹಿಡಿತವನ್ನು ಮಾರುಕಟ್ಟೆದಾರರಿಗೆ ಬಿಟ್ಟುಕೊಟ್ಟು, ಸಂದಿಗ್ಧ ಸ್ಥಿತಿಯನ್ನು ಎದುರಿಸುತ್ತಿದೆ ಎಂದು ವಿಷಾದಿಸಿದರು.

ಕನ್ನಡ ಪತ್ರಿಕೋದ್ಯಮ ತನ್ನ ಮೌಲ್ಯಗಳನ್ನು ಕಳೆದುಕೊಳ್ಳುವತ್ತ ಸಾಗಿದೆ. ಇಲ್ಲಿ ಪತ್ರಕರ್ತರು ನಿರ್ಣಾಯಕ ಸ್ಥಾನದಲ್ಲಿಲ್ಲ. ಸುದ್ದಿ ಮಾಡುವುದಕ್ಕೆ ಮಾತ್ರ ಪತ್ರಕರ್ತರು ಸೀಮಿತಗೊಂಡಿದ್ದು, ಅದನ್ನು ಪ್ರಕಟಿಸುವ ಜವಾಬ್ದಾರಿಯನ್ನು ಆಯಾ ಪತ್ರಿಕೆಗಳಲ್ಲಿರುವ ಮಾರುಕಟ್ಟೆ ವಿಭಾಗ ವಹಿಸಿಕೊಂಡಿರುವುದು ಆತಂಕದ ಬೆಳವಣಿಗೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕೇರಳ, ತಮಿಳುನಾಡಿನ ಕೆಲವು ಮಾಧ್ಯಮಗಳು ಇಂದಿಗೂ ಪತ್ರಿಕಾ ಸಿದ್ಧಾಂತಗಳನ್ನು ಉಳಿಸಿಕೊಂಡಿವೆ. ಜನರ ಆಶೋತ್ತರಗಳತ್ತ ಮುಖ ಮಾಡಿ ಸುದ್ದಿಗಳನ್ನು ಪ್ರಕಟಿಸುತ್ತಿವೆ. ಆದರೆ, ಕನ್ನಡ ಮಾಧ್ಯಮ ಜಗತ್ತು ಸಂಪೂರ್ಣವಾಗಿ ಮಾರುಕಟ್ಟೆ ಅಡಿಯಾಳಾಗಿದೆ. ಹೀಗಾಗಿ ರಾಜ್ಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವವರು ಜನಪರವಾದ ಬರಹಗಳನ್ನು ಪ್ರಕಟಿಸಬೇಕು. ಆ ಮೂಲಕ ಪತ್ರಿಕೋದ್ಯಮದ ಆಶಯಗಳನ್ನು ಜೀವಂತವಾಗಿಡಬೇಕಾಗಿದೆ ಎಂದು ಅವರು ಆಶಿಸಿದರು.

ಕನ್ನಡ ಪತ್ರಿಕೋದ್ಯಮದ ಈ ದುಸ್ಥಿತಿಗೆ ಯಾರು ಕಾರಣರೆಂದು ಹುಡುಕಾಟದ ಹಾದಿ ಒಂದು ಕಡೆಯಾದರೆ, ಪತ್ರಿಕೋದ್ಯಮ ಮಾಡಬೇಕಾಗಿದ್ದ ಕೆಲಸಗಳನ್ನು ಜನಪರ ಆಶಯವುಳ್ಳ ನಾವೆಲ್ಲರೂ ಪರ್ಯಾಯ ಮಾಧ್ಯಮದ ಮೂಲಕ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಬರವಣಿಗೆಯಲ್ಲಿ ಆಸಕ್ತಿಯುಳ್ಳ ಪ್ರತಿಯೊಬ್ಬರು ತಮ್ಮ ಅನಿಸಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮುಕ್ತವಾಗಿ ಹಂಚಿಕೊಳ್ಳಬೇಕಾಗಿದೆ. ಆ ಮೂಲಕ ಜನಪರ ವಿಷಯಗಳತ್ತ ಜನಾಭಿಪ್ರಾಯ ಮೂಡಿಸುವುದು ಜವಾಬ್ದಾರಿಯಾಗಬೇಕೆಂದು ಅವರು ಹೇಳಿದರು.

ಈ ವೇಳೆ ಪ್ರೆಸ್‌ಕ್ಲಬ್‌ನ ಮಾಧ್ಯಮ ಪ್ರಶಸ್ತಿಗೆ ಪುರಸ್ಕೃತರಾಗಿರುವ ಹಿನ್ನೆಲೆಯಲ್ಲಿ ಮಂಜುನಾಥ ಅದ್ದೆಗೆ ನಾಟಕಕಾರ ಕೆ.ವೈ.ನಾರಾಯಣಸ್ವಾಮಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಕವಯತ್ರಿ ಎಚ್.ಎಲ್.ಪುಷ್ಪ, ಹೋರಾಟಗಾರ್ತಿ ಕಿರಣಾ, ಬಯಲು ಬಳಗದ ಹುಲಿಕುಂಟೆ ಮೂರ್ತಿ, ಪ್ರಕಾಶ್ ಮಂಟೇದ, ರವಿಬಾಗಿ, ಮಂಜುನಾರಾಯಣ್, ರವಿ ಮತ್ತಿರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News