ಮತದಾರರ ಪಟ್ಟಿ ಪರಿಷ್ಕರಣೆ ಜ.22 ರವರೆಗೆ ವಿಸ್ತರಣೆ

Update: 2018-01-12 12:34 GMT

ಬೆಂಗಳೂರು, ಜ.12: ಮತದಾರರ ಪಟ್ಟಿ ಪರಿಷ್ಕರಣೆಯನ್ನು ಜ.22 ರವರೆಗೆ ವಿಸ್ತರಿಸಲಾಗಿದ್ದು, ಫೆ.28 ಕ್ಕೆ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ನಗರದ ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅರ್ಹತೆಯಿರುವ ಹಲವು ಮಂದಿ ಚುನಾವಣಾ ಪಟ್ಟಿಗೆ ಸೇರಲು ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳ ಮುಖಂಡರು ಹಾಗೂ ಜಿಲ್ಲಾಧಿಕಾರಿಗಳ ಮನವಿಯ ಮೇರೆಗೆ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದರು.

ಅರ್ಹತೆಯಿರುವ ಪ್ರತಿಯೊಬ್ಬರು ಮತದಾರರ ಪಟ್ಟಿಗೆ ಸೇರಬೇಕೆಂಬುದು ಚುನಾವಣಾ ಆಯೋಗದ ಆಶಯವಾಗಿದೆ. ಹೀಗಾಗಿ ಬೆಂಗಳೂರು ಜನತೆಗೆ ‘ಬೆಂಗಳೂರು ಒನ್’ ಕೇಂದ್ರದಲ್ಲೂ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಚುನಾವಣಾ ಆಯೋಗದ ಅಧಿಕಾರಿಗಳು ಜ.22ರಿಂದ ಫೆ.28 ರವರೆಗೆ ಮನೆ, ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯಲ್ಲಿರುವ ಹೆಸರುಗಳನ್ನು ಪರಿಶೀಲಿಸಲಿದ್ದಾರೆ. ಇದಕ್ಕೆ ಜನತೆ ಸಹಕರಿಸಬೇಕೆಂದು ಅವರು ಹೇಳಿದರು.

ರಾಜ್ಯದಲ್ಲಿ ಹಲವು ಭಾಗಗಳಲ್ಲಿ ರಾಜಕೀಯ ಪಕ್ಷಗಳು ಬೂತ್ ಏಜೆಂಟ್‌ಗಳನ್ನು ನೇಮಿಸಿಲ್ಲ. ಈ ಬಗ್ಗೆ ಎರಡು ಬಾರಿ ಸಭೆ ಮಾಡಿ ಪಕ್ಷಗಳ ಮುಖಂಡರಿಗೆ ಮನವರಿಕೆ ಮಾಡಿಕೊಡಲಾಗಿದೆ. ಮತದಾನದ ರೂಪರೇಷೆಗಳ ಕುರಿತು ಮಾಹಿತಿ ತಿಳಿದಿರುವ ವ್ಯಕ್ತಿಗಳನ್ನು ಬೂತ್ ಏಜೆಂಟ್‌ಗಳನ್ನು ನೇಮಿಸಬೇಕೆಂದು ಅವರು ಮನವಿ ಮಾಡಿದರು.

ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣಾ ನಡೆಸಲು ರಾಜ್ಯ ಚುನಾವಣಾ ಆಯೋಗ ಸಮರ್ಥವಾಗಿದೆ. ಕಳೆದ ಬಾರಿಯು ಒಂದೇ ಹಂತದಲ್ಲಿ ಚುನಾವಣಾ ನಡೆಸಿ ಯಶಸ್ವಿಯಾಗಿದ್ದೇವೆ. ವಿವಿಧ ಪಕ್ಷಗಳ ಮುಖಂಡರು ಒಂದೇ ಹಂತದ ಚುನಾವಣೆಗೆ ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗ ತೀರ್ಮಾನ ಕೈಗೊಳ್ಳಬೇಕು.
-ಸಂಜೀವ್ ಕುಮಾರ್, ಮುಖ್ಯ ಚುನಾವಣಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News