ಬಸ್ ಆ್ಯಂಬುಲೆನ್ಸ್ ಸೇವೆ ರಾಜ್ಯದೆಲ್ಲೆಡೆ ವಿಸ್ತರಣೆ: ಎಚ್.ಎಂ.ರೇವಣ್ಣ

Update: 2018-01-12 13:25 GMT

ಬೆಂಗಳೂರು, ಜ.12: ದೊಡ್ಡ ಮಟ್ಟದಲ್ಲಿ ಅಪಘಾತವಾಗುವ ಸಂದರ್ಭಗಳಲ್ಲಿ ಗಾಯಗೊಳ್ಳುವ ವ್ಯಕ್ತಿಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಸಂಭವಿಸಬಹುದಾದ ಸಾವುಗಳನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಸಾರಿಗೆ ವಿಭಾಗಗಳಲ್ಲಿ ‘ಬಸ್ ಆ್ಯಂಬುಲೆನ್ಸ್’ಗೆ ಚಾಲನೆ ನೀಡಲಾಗುವುದು ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು.

ಶುಕ್ರವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಗರದ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಣೆ, ಗೋಲ್ಡನ್ ಅವರ್ ಟ್ರಸ್ಟ್‌ನೊಂದಿಗೆ ಒಡಂಬಡಿಕೆಗೆ ಸಹಿ ಹಾಗೂ ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

ದೇಶದ ಸಾರಿಗೆ ನಿಗಮಗಳಲ್ಲಿ ಮೊದಲ ಬಾರಿಗೆ ಕೆಎಸ್ಸಾರ್ಟಿಸಿ ಬಹು ಹಾಸಿಗೆಗಳುಳ್ಳ ಬಸ್ ಆ್ಯಂಬುಲೆನ್ಸ್ ಅನ್ನು ಪರಿಚಯಿಸಿದೆ. ಎಂಟು ಗಂಭೀರ ರೋಗಿಗಳನ್ನು ಮಲಗಿಸಿ ಹಾಗೂ 16 ಗಾಯಾಳುಗಳನ್ನು ಕುಳ್ಳಿರಿಸಿಕೊಂಡು ಪ್ರಥಮ ಚಿಕಿತ್ಸೆ ನೀಡುವ ಸೌಲಭ್ಯವನ್ನು ಬಸ್ ಆ್ಯಂಬುಲೆನ್ಸ್ ಹೊಂದಿದೆ. ಹೀಗಾಗಿ ಬಸ್ ಆ್ಯಂಬುಲೆನ್ಸ್ ರಾಜ್ಯದ ಇತರೆ ಸಾರಿಗೆ ವಿಭಾಗಗಳಿಗೂ ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.

ಕೆಎಸ್ಸಾರ್ಟಿಸಿ ಸಂಸ್ಥೆ ಪ್ರಸ್ತಕ ಸಾಲಿನಲ್ಲಿ ಸುಮಾರು 14ಕೋಟಿ ರೂ.ಗೂ ಹೆಚ್ಚು ಲಾಭಗಳಿಸಿದೆ. ಇದಕ್ಕೆ ಅಧಿಕಾರಿ ಹಾಗೂ ಸಿಬ್ಬಂದಿಗಳ ಹೊಂದಾಣಿಕೆ ಹಾಗೂ ಕಠಿಣ ಪರಿಶ್ರಮವೇ ಕಾರಣವಾಗಿದೆ. ಹೀಗಾಗಿ ಕೆಎಸ್ಸಾರ್ಟಿಸಿ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆಯುವ ಮೂಲಕ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದ್ವಿಚಕ್ರ ಸವಾರರಿಗೆ ತರಬೇತಿ: ರಾಜ್ಯದಲ್ಲಿ ಅಪಘಾತವಾಗುವ ವೇಳೆ ಹೆಚ್ಚು ಸಾವನ್ನಪ್ಪುತ್ತಿರುವುದು ದ್ವಿಚಕ್ರ ಸವಾರರಾಗಿದ್ದಾರೆ. ಹೀಗಾಗಿ ಬೈಕ್ ಸವಾರರಿಗೆ ಕೆಎಸ್ಸಾರ್ಟಿಸಿ ಸಂಸ್ಥೆಯ ಮೂಲಕವೇ ಉಚಿತ ತರಬೇತಿಯನ್ನು ನೀಡಲು ನಿರ್ಧರಿಸಲಾಗಿದೆ. ಹಾಗೂ ಮಹಿಳೆಯರಿಗೆ ಬಾರಿ ವಾಹನದ ತರಬೇತಿ ನೀಡಲು ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಕೆಎಸ್ಸಾರ್ಟಿಸಿ ಅಧ್ಯಕ್ಷ ಕೆ.ಗೋಪಾಲ್ ಪೂಜಾರಿ ಮಾತನಾಡಿ, ಕೆಎಸ್ಸಾರ್ಟಿಸಿ ಸಿಬ್ಬಂದಿಗಳ ಪ್ರಮಾಣಿಕ ಸೇವೆ ಹಾಗೂ ಕಠಿಣ ಪರಿಶ್ರಮದಿಂದಾಗಿ ಸಂಸ್ಥೆ ಆರ್ಥಿಕವಾಗಿ ಸದೃಢಗೊಳ್ಳುತ್ತಿದೆ. ಹೀಗಾಗಿ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ವರ್ಷಕ್ಕೆ ಒಂದು ಬಾರಿ ಜಯದೇವ ಆಸ್ಪತ್ರೆಯಲ್ಲಿ ಹೃದಯ, ಕಿಡ್ನಿ ಸೇರಿದಂತೆ ಎಲ್ಲ ರೀತಿಯ ತಪಾಸಣೆಗಳನ್ನು ನಡೆಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಐದು ವರ್ಷಗಳಲ್ಲಿ ಅಪಘಾತ ರಹಿತ ಬಸ್ ಚಾಲನೆ ಮಾಡಿದ 86 ಚಾಲಕರಿಗೆ ಬೆಳ್ಳಿ ಪದಕ ನೀಡಿ ಗೌರವಿಸಲಾಯಿತು. ಹಾಗೂ ಚಾಲಕರಿಗೆ ಪ್ರಥಮ ಚಿಕಿತ್ಸಾ ಕಿಟ್‌ನ್ನು ವಿತರಿಸಲಾಯಿತು. ಈ ವೇಳೆ ಗೋಲ್ಡನ್ ಅವರ್ ಸಂಸ್ಥೆಯ ಮುಖ್ಯಸ್ಥ ಡಾ.ಎನ್.ಕೆ.ವೆಂಕಟರಮಣ, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಚ್.ಆರ್.ಉಮಾಶಂಕರ್, ಕೆಎಸ್ಸಾರ್ಟಿಸಿ ನಿರ್ದೇಶಕ ರವಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News