ಬಂಧಿತ ಬಿಜೆಪಿ ಕಾರ್ಯಕರ್ತರನ್ನು ಗಲ್ಲಿಗೇರಿಸಿ: ಕೆ.ವಿ.ಭಾಗ್ಯಮ್ಮ ನಾರಾಯಣಸ್ವಾಮಿ

Update: 2018-01-12 12:48 GMT

ಬೆಂಗಳೂರು, ಜ.12: ವಿಜಯಪುರದಲ್ಲಿ ದಲಿತ ವಿದ್ಯಾರ್ಥಿ ದಾನಮ್ಮ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣ ಸಂಬಂಧ ಬಂಧಿತವಾಗಿರುವ ಬಿಜೆಪಿ ಕಾರ್ಯಕರ್ತರನ್ನು ಗಲ್ಲಿಗೇರಿಸಿ ಎಂದು ಕರ್ನಾಟಕ ದಲಿತ ಮಹಿಳಾ ಒಕ್ಕೂಟ ರಾಜ್ಯ ಸಂಚಾಲಕಿ ಕೆ.ವಿ.ಭಾಗ್ಯಮ್ಮ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ. 

ಶುಕ್ರವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ವಿಜಯಪುರದಲ್ಲಿ ದಲಿತ ವಿದ್ಯಾರ್ಥಿನಿ ಕೊಲೆ ಹಾಗೂ ಮಹಾರಾಷ್ಟ್ರದ ಕೋರೆಗಾಂವ್‌ನಲ್ಲಿ ಭೀಮ ಕೋರೆಗಾಂವ್ ಸಂಗ್ರಾಮದ 200ನೇ ವಿಜಯೋತ್ಸವ ಮೆರವಣಿಗೆ ದಲಿತರ ಮೇಲೆ ನಡೆದ ಹಿಂಸೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೆ.ವಿ.ಭಾಗ್ಯಮ್ಮ ನಾರಾಯಣಸ್ವಾಮಿ, ರಾಜ್ಯದಲ್ಲಿ ದಲಿತರ ಮೇಲೆ ಹಿಂಸೆ ಮಾತ್ರವಲ್ಲದೆ, ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ. ಅಲ್ಲದೆ, ಇತ್ತೀಚಿಗೆ ದಲಿತ ಬಾಲಕಿ ದಾನಮ್ಮಳ ಮೇಲೆ ಐವರು ಬಿಜೆಪಿ ಕಾರ್ಯಕರ್ತರು ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಹೀನ ಕೃತ್ಯ ಬೆಳಕಿಗೆ ಬಂದಿದೆ. ಹೀಗಾಗಿ, ಮಹಿಳೆ ಮತ್ತು ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಠಿಣ ಕಾಯ್ದೆ ರೂಪಿಸುವಂತೆ ಒತ್ತಾಯಿಸಿದರು.

ದಸಂಸ ಸಂಚಾಲಕ ಎಂ.ಸೋಮಶೇಖರ್, ಸಂಭ್ರಮಾಚರಣೆಯ ದಿನ ಸೂಕ್ತ ಪೊಲೀಸ್ ರಕ್ಷಣೆ ಒದಗಿಸದೇ, ಸಂಘ ಪರಿವಾರದ ಕಾರ್ಯಕರ್ತರನ್ನು ಪರೋಕ್ಷವಾಗಿ ಬೆಂಬಲಿಸಿ, ಹಿಂಸಾಚಾರಕ್ಕೆ ನೇರ ಹೊಣೆಗಾರರಾಗಿರುವ ಮಹಾರಾಷ್ಟ್ರ ಸರಕಾರವನ್ನು ಕೂಡಲೇ ವಜಾಗೊಳಿಸಬೇಕು. ಅಲ್ಲದೆ, ಬಿಜೆಪಿ ನೇತೃತ್ವದ ಆಡಳಿತ ಇರುವ ರಾಜ್ಯಗಳಲ್ಲಿ ದಲಿತರ ಪ್ರಾಣಕ್ಕೆ ಅಭದ್ರತೆಯಿದ್ದು, ಅವರ ರಕ್ಷಣೆಗಾಗಿ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಕೇಂದ್ರ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದರು.

ಪ್ರತಿಭಟನೆಯಲ್ಲಿ ರಾಜ್ಯ ಸಂಚಾಲಕ ಅಂದಾನಿ ಸೋಮನಹಳ್ಳಿ, ಎಚ್.ಎನ್.ಸನಂದಕುಮಾರ್, ಮಲ್ಲಸಂದ್ರ ವೆಂಕಟೇಶ್, ಕೃಷ್ಣಪ್ಪ, ಮಾವಳ್ಳಿ ಶಾಂತಮ್ಮ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News