ಆರ್‌ಟಿಇ ಕಾಯ್ದೆ ದುರ್ಬಲಗೊಳಿಸುವ ಹುನ್ನಾರ: ಆಪ್

Update: 2018-01-12 12:51 GMT

ಬೆಂಗಳೂರು, ಜ.12: ರಾಜ್ಯ ಸರಕಾರ ಕಡ್ಡಾಯ ಶಿಕ್ಷಣ ಹಕ್ಕು(ಆರ್‌ಟಿಇ) ಕಾಯ್ದೆಯನ್ನು ದುರ್ಬಲಗೊಳಿಸಲು ಮುಂದಾಗಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಮುಖಂಡರು ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ರೇಣುಕಾ ವಿಶ್ವನಾಥನ್, ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುವ ಮೊದಲು ಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸಬೇಕು ಎಂದು ಕಾಯ್ದೆಯನ್ನು ಬದಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಸರಕಾರಿ ಶಾಲೆಗಳಿಗೆ ಅಗತ್ಯವಿರುವ ಸೌಲಭ್ಯಗಳು ಕಲ್ಪಿಸುವ ಬದಲಿಗೆ, ಖಾಸಗಿ ಶಾಲೆಗಳ ಪರವಾದ ಯೋಜನೆ ರೂಪಿಸಲು ಮುಂದಾಗಿರುವುದು ಎಷ್ಟು ಸರಿ ಎಂದರು.

ರಾಜ್ಯದಲ್ಲಿರುವ ಸರಕಾರಿ ಶಾಲೆಗಳಲ್ಲಿ ಕುಡಿಯುವ ನೀರು, ಕೊಠಡಿ, ಶೌಚಾಲಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅಗತ್ಯವಿರುವ ಯಾವುದೇ ಸೌಲಭ್ಯಗಳಿಲ್ಲ. ಹೀಗಿರುವಾಗ ಆರ್‌ಟಿಇ ಕಾಯ್ದೆ ಬಡ ಮಕ್ಕಳಿಗೆ ಆಶಾದೀಪವಾಗಿದೆ. ಆದರೆ, ಸರಕಾರದ ಆದೇಶದಿಂದಾಗಿ ಪೋಷಕರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಆದುದರಿಂದ ಸರಕಾರ ಈ ರೀತಿಯಲ್ಲಿ ಯೋಚನೆ ಮಾಡುವುದನ್ನು ಬಿಡಬೇಕು ಎಂದು ಮನವಿ ಮಾಡಿದರು.

ಸರಕಾರ ಗಮನ ಶಿಕ್ಷಣದ ಅಭಿವೃದ್ಧಿಗೆ ಕಡೆಗೆ ಸಂಪೂರ್ಣವಾಗಿ ಕೇಂದ್ರೀಕರಿಸಿಕೊಂಡಿರಬೇಕು. ಸರಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ ಗಣನೀಯವಾಗಿ ಅಭಿವೃದ್ಧಿಯಾಗುವವರೆಗೂ ಗಮನ ಹರಿಸಬೇಕು. ಅಲ್ಲದೆ, ಖಾಸಗಿ ಶಾಲೆಯಲ್ಲಿ ಉಚಿತ ಶಿಕ್ಷಣದ ಅವಕಾಶ ಬಡ ಮಕ್ಕಳಿಗೆ ದೊರಕಬೇಕು. ಸಮಾಜದ ಎಲ್ಲ ಮಕ್ಕಳಿಗೂ ಸಮಾನವಾದ ಶಿಕ್ಷಣ ಸಿಗಬೇಕೆ ಹೊರತು ಕೇವಲ ಕೆಲವು ಮಕ್ಕಳಿಗೆ ಮಾತ್ರವಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News