ಜಾತ್ಯತೀತ ಹಬ್ಬ ‘ಸಂಕ್ರಾಂತಿ’: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭ ಹಾರೈಕೆ

Update: 2018-01-12 12:54 GMT

ಬೆಂಗಳೂರು, ಜ. 12: ಮಕರ ಸಂಕ್ರಾಂತಿ ಎಂಬುದು ಹಳ್ಳಿಗರ ಹಬ್ಬ, ರೈತರ ಹಬ್ಬ, ಹೆಣ್ಣುಮಕ್ಕಳ ಹಬ್ಬ. ಸುಗ್ಗಿಯ ಹಿಗ್ಗನ್ನು ಹಂಚಿಕೊಳ್ಳುವ ಹಬ್ಬ. ಸಂಕ್ರಾಂತಿಯ ಸಂದರ್ಭದಲ್ಲಿ ಹಳ್ಳಿಗಳಲ್ಲಿನ ಪ್ರತಿ ಮನೆ-ಮನೆಗಳಲ್ಲೂ ತಳಿರು-ತೋರಣಗಳು ಕಂಗೊಳಿಸುತ್ತಿರುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ಶುಭ ಹಾರೈಸಿದ್ದಾರೆ.

ಮನೆಯ ಬಾಗಿಲಿನ ಇಕ್ಕೆಲಗಳಲ್ಲಿ ಕಬ್ಬಿನ ಜಲ್ಲೆಗಳು ಸ್ವಾಗತಿಸುತ್ತವೆ. ಮನೆಯ ಮುಂಭಾಗದಲ್ಲಿ ಆಕರ್ಷಕ ಹಾಗೂ ವರ್ಣರಂಜಿತ ರಂಗೋಲಿಗಳು ಎಲ್ಲರ ಗಮನ ಸೆಳೆಯುತ್ತವೆ. ಮನೆಯ ಅಂಗಳದಲ್ಲಿ ಒಂದೆಡೆ ಫಸಲಿನ ರಾಶಿ. ಮತ್ತೊಂದೆಡೆ ಅಲಂಕೃತ ರಾಸುಗಳು. ಶ್ರಮಜೀವಿ ರೈತನಿಗೆ ಇದು ವಿರಾಮದ ದಿನ. ಇದು ನಮ್ಮ ಹಳ್ಳಿಗಳ ಚಿತ್ರಣ ಎಂದು ಅವರು ತಿಳಿಸಿದ್ದಾರೆ.

ದುಡಿಮೆಯಲ್ಲಿ ಪಾಲುದಾರರಾದ ತಮ್ಮ ರಾಸುಗಳಿಗೂ ಕೆಲವು ಪ್ರದೇಶಗಳಲ್ಲಿ ರೈತರು ಕಿಚ್ಚು (ಬೆಂಕಿ) ಹಾಯಿಸುವ ಸ್ಫರ್ಧೆ ಏರ್ಪಡಿಸುತ್ತಾರೆ. ಚಳಿಗಾಲದಲ್ಲಿ ಬೆಂಕಿ ಹಾಯಿಸುವುದರಿಂದ ರಾಸುಗಳು ಉಲ್ಲಸಿತಗೊಳ್ಳುತ್ತವೆ ಎಂಬುದು ಅವರ ನಂಬಿಕೆ. ಹೆಣ್ಣು ಮಕ್ಕಳಿಗಂತೂ ಹೊಸ ಉಡುಪು ಧರಿಸಿ ತಮ್ಮ ಬಂಧು-ಮಿತ್ರರಿಗೆ ಎಳ್ಳು ಬೀರುವ ಸಂಭ್ರಮ ಎಂದು ಅವರು ಬಣ್ಣಿಸಿದ್ದಾರೆ.

ರಾಜ್ಯದ ಜನತೆಯಲ್ಲಿ, ಅದರಲ್ಲೂ ವಿಶೇಷವಾಗಿ ನಮ್ಮ ರೈತರ ಬಾಳಲ್ಲಿ, ಸಂತಸ ಮನೆ ಮಾಡಲಿ ಎಂಬುದೇ ಜಾತ್ಯತೀತ ಹಬ್ಬವಾದ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ನನ್ನ ಮನದಾಳದ ಹಾರೈಕೆ ಎಂದು ಸಿದ್ದರಾಮಯ್ಯ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News