ಬೆಂಗಳೂರನ್ನು ದೇಶದ ಎರಡನೇ ರಾಜಧಾನಿಯಾಗಿಸಿ: ಪ್ರಧಾನಿಗೆ ಸಚಿವ ಆರ್.ವಿ.ದೇಶಪಾಂಡೆ ಪತ್ರ

Update: 2018-01-12 13:57 GMT

ಬೆಂಗಳೂರು, ಜ.12: ಬೆಂಗಳೂರನ್ನು ಭಾರತದ ಎರಡನೆ ರಾಜಧಾನಿಯನ್ನಾಗಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ಪತ್ರ ಬರೆದಿದ್ದಾರೆ.

ದೇಶಕ್ಕೆ ಎರಡನೆ ರಾಜಧಾನಿಯ ಅಗತ್ಯವಿರುವ ಬಗ್ಗೆ ಪತ್ರದಲ್ಲಿ ಪ್ರಸ್ತಾಪ ಮಾಡಿರುವ ದೇಶಪಾಂಡೆ, ದೇಶದ ದಕ್ಷಿಣ ಭಾಗದಲ್ಲಿರುವ ನಗರ, ನೈಸರ್ಗಿಕ ಪ್ರಕೋಪ ಮತ್ತು ಪ್ರತಿಕೂಲ ಹವಾಮಾನಗಳಿಂದ ಮುಕ್ತವಾಗಿದೆ. ವೃತ್ತಿಪರರಿಂದ ಕೂಡಿದ ವಿಭಿನ್ನ ಜನಸಮುದಾಯ ಮತ್ತು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ವಿಸ್ತೃತ ಕೈಗಾರಿಕೆಗಳನ್ನು ಒಳಗೊಂಡ ಬೆಂಗಳೂರು ನಗರ ಎಲ್ಲ ವಿಧದಲ್ಲೂ ದೇಶದ ಎರಡನೇ ರಾಜಧಾನಿಯಾಗಲು ಅರ್ಹ ನಗರ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತಕ್ಕೆ ತುರ್ತಾಗಿ ಎರಡನೇ ರಾಜಧಾನಿಯ ಅಗತ್ಯವಿದೆ ಮತ್ತು ಆ ಹೊಣೆಯನ್ನು ನಿಭಾಯಿಸಲು ಬೆಂಗಳೂರು ಅತ್ಯುತ್ತಮ ನಗರ. ಭಾರತದಂಥ ವಿಶಾಲ ರಾಷ್ಟ್ರವನ್ನು ಒಂದು ನಗರದಿಂದ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ವಿಶೇಷವಾಗಿ, ಸರಕಾರವು ಆಡಳಿತ, ರಚನಾತ್ಮಕ ಸುಧಾರಣೆ, ರಾಷ್ಟ್ರೀಯ ಮರುನಿರ್ಮಾಣ ಮತ್ತು ಅಂತಾರಾಷ್ಟ್ರೀಯ ಸಹಭಾಗಿತ್ವಕ್ಕೆ ಸಂಬಂಧಿಸಿದಂತೆ ಮಾದರಿಯುತ ಮತ್ತು ಆಮೂಲಾಗ್ರ ಬದಲಾವಣೆಗೆ ಸಿದ್ಧತೆ ನಡೆಸುತ್ತಿರುವ ಹೊತ್ತಲ್ಲಿ ಇದರ ಅಗತ್ಯ ಹೆಚ್ಚಿದೆ ಎಂದು ಆರ್.ವಿ.ದೇಶಪಾಂಡೆ ಹೇಳಿದ್ದಾರೆ.

ಬಹುಮುಖಿ ಜೀವನಶೈಲಿ, ಕೈಗಾರಿಕಾ ಅಭಿವೃದ್ಧಿ ಮತ್ತು ತಂತ್ರಜ್ಞಾನ ಅನ್ವೇಷಣೆಗಳನ್ನು ಹೊಂದಿರುವ ಬೆಂಗಳೂರು, ಎರಡನೇ ರಾಜಧಾನಿ ಸ್ಥಾನಮಾನಕ್ಕೆ ನ್ಯಾಯ ಒದಗಿಸಲು ಸಮರ್ಥವಾಗಿದೆ. ಬಾಹ್ಯ ಶಕ್ತಿಗಳಿಂದ ಸುರಕ್ಷಿತವಾಗಿ ಮತ್ತು ಅಂತಾರಾಷ್ಟ್ರೀಯ ಗಡಿಗಳಿಂದ ದೂರ ಇರುವ ಮತ್ತು ವರ್ಷದ ಬಹುತೇಕ ಅವಧಿಯಲ್ಲಿ ಹಿತಕರ ಹವಾಮಾನ ಹೊಂದಿರುವ, ಭಾರತದ ಉದ್ಯಾನ ನಗರಿ ಹಾಗೂ ಸಂಶೋಧನೆಗಳ ಕೇಂದ್ರ ಎಂದು ಪರಿಗಣಿಸಲ್ಪಡುವ ಬೆಂಗಳೂರಿಗೆ ಭಾರತದ ಎರಡನೇ ರಾಜಧಾನಿಯಾಗುವ ಸಾಮರ್ಥ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಸಾಫ್ಟ್‌ವೇರ್ ಇಂಜಿನಿಯರ್‌ಗಳಷ್ಟೆ ಸಂಖ್ಯೆಯ ಶಾಸ್ತ್ರೀಯ ಭಾಷಾ ವಿದ್ವಾಂಸರನ್ನು ಕಾಣಬಹುದಾದ ದೇಶದ ಏಕೈಕ ನಗರ ಬೆಂಗಳೂರು. ದಿಲ್ಲಿ ಹೊರತುಪಡಿಸಿದರೆ, ಬಹುಶಃ ವಿಶ್ವದಲ್ಲೇ ಅತ್ಯಂತ ವೈವಿಧ್ಯಮಯ ವಿದ್ಯಾರ್ಥಿ ಸಮುದಾಯ ಮತ್ತು ರಾಷ್ಟ್ರದಲ್ಲೇ ಅತ್ಯಂತ ವೈವಿಧ್ಯಮಯ ವೃತ್ತಿಪರರನ್ನು ಹೊಂದಿರುವ ಹಾಗೂ ವಿವಿಧ ಸಂಸ್ಕೃತಿಗಳನ್ನು ಬಿಂಬಿಸುವ, ದೃಢ ನಾಗರಿಕತೆಯುಳ್ಳ ನಗರವಾಗಿದೆ ಎಂದು ದೇಶಪಾಂಡೆ ಪತ್ರದಲ್ಲಿ ಹೇಳಿದ್ದಾರೆ.

ಈ ನಡೆಯು ವಿಕೇಂದ್ರೀಕರಣ ವ್ಯವಸ್ಥೆ ಮತ್ತು ತ್ವರಿತ ನಿರ್ಧಾರ ಕೈಗೊಳ್ಳುವಿಕೆಯ ಭಾಗವಾಗಿದೆ. ಇದು ದಕ್ಷಿಣ ಭಾರತದ ಜನರಿಗೆ ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆಗಳನ್ನು ಸಮೀಪಕ್ಕೆ ತರುವ ಮೂಲಕ ಅವರನ್ನು ದೇಶದ ಆಡಳಿತ ವ್ಯಾಪ್ತಿಯಲ್ಲಿ ಸಹಭಾಗಿಗಳನ್ನಾಗಿಸುವಲ್ಲಿ ಸಹಕಾರಿಯಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ದಕ್ಷಿಣ ಭಾರತದ ಬೇಡಿಕೆಗಳಿಗೆ ಸಂಬಂಧಿಸಿ ಇಲ್ಲಿನ ಜನರು ದಿಲ್ಲಿ ಆಡಳಿತದ ಬಗ್ಗೆ ಹೊಂದಿರುವ ನಕಾರಾತ್ಮಕ ದೃಷ್ಟಿಕೋನದ ಬಗ್ಗೆಯೂ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ದೂರದಲ್ಲಿರುವ ಮತ್ತು ದಕ್ಷಿಣ ಭಾರತದ ಸಂಸ್ಕೃತಿ, ಧಾರ್ಮಿಕತೆಯ ವಿಶಿಷ್ಟತೆ ಮತ್ತು ಪ್ರಾಮುಖ್ಯತೆಯನ್ನು ಗುರುತಿಸದ ಆಡಳಿತ ವ್ಯವಸ್ಥೆಯಿಂದ, ದೇಶದ ಅಭಿವೃದ್ಧಿ ಅಸಾಧ್ಯ. ಅಲ್ಲದೆ ಸಾಂಸ್ಕೃತಿಕವಾಗಿ ಶ್ರೀಮಂತ ಮತ್ತು ಸಂಕೀರ್ಣವಾಗಿರುವ ದೇಶದ ಇತಿಹಾಸಕ್ಕೆ ಇದರಿಂದ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ದೃಷ್ಟಿಕೋನದಲ್ಲಿ ದಕ್ಷಿಣ ಭಾರತದ ಸಕ್ರಿಯ ಪಾಲುದಾರಿಕೆಗೆ ಹೊಸ ರಾಜಧಾನಿಯ ಅಗತ್ಯವಿದೆ. ಸುಪ್ರೀಂಕೋರ್ಟ್‌ನ ಎರಡನೇ ಪೀಠ ಸ್ಥಾಪನೆ, ಕೇಂದ್ರ ನಾಗರಿಕ ಸೇವಾ ಆಯೋಗದ ಎರಡನೇ ಕಚೇರಿ ಸ್ಥಾಪನೆ ಮತ್ತು ಸಂಸತ್‌ನ ಚಳಿಗಾಲದ ಅಧಿವೇಶನವನ್ನು ಬೆಂಗಳೂರಿನಲ್ಲಿ ನಡೆಸುವುದು, ಇತ್ಯಾದಿಗಳನ್ನು ಪರಿಗಣಿಸಬಹುದು ಎಂದು ಪತ್ರದಲ್ಲಿ ದೇಶಪಾಂಡೆ ಬರೆದಿದ್ದಾರೆ.

ದಕ್ಷಿಣ ಭಾರತೀಯರನ್ನು ರಾಜಕೀಯ ಪಾಲುದಾರಿಕೆ ಮತ್ತು ಆಡಳಿತಾತ್ಮಕ ನೀತಿ ರಚನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ಇದು ಸಕಾರಾತ್ಮಕ ಆರಂಭವಾಗಿದೆ. ಭಾರತದಲ್ಲಿ ಎರಡನೇ ರಾಜಧಾನಿಯನ್ನು ರಚಿಸುವ ಲಾಭವೇನೆಂದರೆ, ವಿಶೇಷವಾಗಿ ಇದು ದಕ್ಷಿಣ ಭಾರತದಲ್ಲಿದ್ದರೆ, ವಹಿವಾಟು, ಸಾಂಸ್ಕೃತಿಕ ವಿನಿಮಯ, ವೈಜ್ಞಾನಿಕ ಅನ್ವೇಷಣೆ, ತಂತ್ರಜ್ಞಾನ ಸಂಶೋಧನೆಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲು ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

ಕೋಟ್ಯಂತರ ದಕ್ಷಿಣ ಭಾರತೀಯರು ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ಪ್ರವೇಶಿಸಲು ಸಹ ಈ ಹೆಜ್ಜೆ ನೆರವಾಗಲಿದೆ. ರಾಷ್ಟ್ರವು ದಿಲ್ಲಿಯ ಶಕ್ತಿ ಕೇಂದ್ರದಲ್ಲಿ ನಿರ್ಧಾರವಾಗುವ ದೂರದ ವದಂತಿ ಅಲ್ಲ, ಬದಲಾಗಿ ದೇಶವು ದೈನಂದಿನ ಜನಮತ ಸಂಗ್ರಹ, ಸಂಸ್ಕೃತಿ ನಾಗರೀಕತೆ ಮತ್ತು ಅಭಿವೃದ್ಧಿಯ ದೈನಂದಿನ ಉತ್ಸವ ಎಂಬುದು ಜನರಿಗೆ ಅರ್ಥವಾಗಲಿದೆ ಎಂದು ಅವರು ಹೇಳಿದರು.

ಈ ರಾಷ್ಟ್ರೀಯ ಮಹತ್ವಾಕಾಂಕ್ಷೆ ಮತ್ತು ಬಯಕೆಯೊಂದಿಗೆ ನೀವು ಸಹಮತ ಹೊಂದಿದ್ದೀರಿ ಎಂಬುದು ನನ್ನ ದೃಢವಾದ ನಂಬಿಕೆ ಎಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ದೇಶಪಾಂಡೆ ತಿಳಿಸಿದ್ದಾರೆ.

ಈ ಬಗ್ಗೆ ಆರ್.ವಿ.ದೇಶಪಾಂಡೆರವರು ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೂ ಕೂಡ ಮನವಿ ಸಲ್ಲಿಸಿದ್ದಾರೆ. ಅಲ್ಲದೇ ಮಾನ್ಯ ಮುಖ್ಯಮಂತ್ರಿಗಳಿಗೂ ಕೂಡಾ ಮನವಿ ಮಾಡಿದ್ದು, ಮುಖ್ಯಮಂತ್ರಿಗಳಿಂದಲೂ ಸೂಕ್ತ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸುವಂತೆ ಮುಖ್ಯಮಂತ್ರಿಯನ್ನು ಕೋರಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News