ಆಹಾರ ಪದಾರ್ಥಗಳ ಗುಣಮಟ್ಟ ಕಾಪಾಡಲು ಸಿಸಿಟಿವಿ ಅಳವಡಿಕೆ: ಸಚಿವೆ ಉಮಾಶ್ರೀ

Update: 2018-01-12 14:01 GMT

ಬೆಂಗಳೂರು, ಜ. 12: ಅಂಗನವಾಡಿಗಳಿಗೆ ಪೂರೈಕೆಯಾಗುತ್ತಿರುವ ಆಹಾರ ಪದಾರ್ಥಗಳ ಗುಣಮಟ್ಟ ಕಾಪಾಡಲು ರಾಜ್ಯದ ಎಲ್ಲಾ ಎಂಎಸ್‌ಪಿಟಿಸಿಗಳಲ್ಲಿಯೂ ಸಿಸಿಟಿವಿ ಅಳವಡಿಸಲು ಸೂಚಿಸಲಾಗಿದೆ. ಇವುಗಳ ಜವಾಬ್ದಾರಿಯನ್ನು ಆಯಾ ವ್ಯಾಪ್ತಿಗೆ ಬರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ವಹಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಹೇಳಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ರಾಜ್ಯದ ಎಲ್ಲ ಉಪ ನಿರ್ದೇಶಕರುಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಮಕ್ಕಳಿಗೆ ಪೂರೈಸುವ ಆಹಾರದ ಗುಣಮಟ್ಟ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕಳಪೆ ಆಹಾರ ಪೂರೈಸಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ನಿರ್ದೇಶನ ನೀಡಿದರು.

ಸರಕಾರದ ಮಹತ್ವಾಕಾಂಕ್ಷೆಯ ಮಾತೃಪೂರ್ಣ ಯೋಜನೆ ರಾಜ್ಯದ ಗರ್ಭಿಣಿ ಮತ್ತು ಬಾಣಂತಿಯರಿಗೆ ಗುಣಮಟ್ಟದ ಪೌಷ್ಠಿಕ ಆಹಾರ ದೊರಕಿಸಲು ಇಲಾಖೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದ ಅವರು, ಯೋಜನೆಯಲ್ಲಿ ಯಾವುದೇ ಲೋಪದೋಷ ಕಂಡಬಂದರೆ ಉಪ ನಿರ್ದೇಶಕರನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಇಲಾಖೆ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪಬೇಕು. ಆ ನಿಟ್ಟಿನಲ್ಲಿ ಇಲಾಖೆಯ ಎಲ್ಲ ಅಧಿಕಾರಿಗಳು ಶ್ರಮ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ಸಚಿವೆ ಉಮಾಶ್ರೀ ಸೂಚಿಸಿದರು. ಸಭೆಯಲ್ಲಿ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್, ನಿರ್ದೇಶಕಿ ದೀಪಾ ಚೋಳನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News