ವಿಕಲಚೇತನರ ಸಮಸ್ಯೆ ಪರಿಹರಿಸಲು ಉನ್ನತ ಮಟ್ಟದ ಸಭೆ: ಕಾನೂನು ಸಚಿವ ಜಯಚಂದ್ರ

Update: 2018-01-12 14:13 GMT

ಬೆಂಗಳೂರು, ಜ. 12: ರಾಜ್ಯದಲ್ಲಿನ ವಿಕಲಚೇತನರ ಸಮಸ್ಯೆಗಳನ್ನು ಪರಿಹರಿಸಲು ಇನ್ನು ಒಂದು ವಾರದಲ್ಲಿ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಇಂದಿಲ್ಲಿ ತಿಳಿಸಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ರಾಜ್ಯ ಸರಕಾರಿ ಅಂಗವಿಕಲ ನೌಕರರ ಸಂಘದಿಂದ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವಿಕಲಚೇತನರ ಸಮಸ್ಯೆಗಳ ನಿವಾರಣೆಗೆ ರಾಜ್ಯ ಸರಕಾರ ಬದ್ಧ. ಸಚಿವ ಸಂಪುಟದ ಉಪಸಮಿತಿಗೆ ನಾನೇ ಅಧ್ಯಕ್ಷನಾಗಿದ್ದೇನೆ ಎಂದು ಹೇಳಿದರು.

ವಿಕಲಚೇತನರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯ ಸರಕಾರ ಬದ್ಧ. ಆದರೆ, ಈ ಸಂಬಂಧ ಮಾಹಿತಿ ಕೊರತೆಯಿದ್ದು, ಸಂಘದ ಪದಾಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು ವಿಕಲಚೇತನರ ಸಮಸ್ಯೆಗಳನ್ನು ಶೀಘ್ರದಲ್ಲೆ ಚರ್ಚಿಸಿ ಅಗತ್ಯ ಪರಿಹಾರ ಕಲ್ಪಿಸಲಾಗುವುದು ಎಂದು ಹೇಳಿದರು.

ಅಂಗವೈಕಲ್ಯಕ್ಕೆ ರಾಜ್ಯದ ಚಿತ್ರದುರ್ಗ, ತುಮಕೂರು, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿನ ಅಶುದ್ಧ ನೀರೇ ಮೂಲ ಕಾರಣ. ತಾಯಿಯ ಎದೆ ಹಾಲಿನಲ್ಲೆ ಫ್ಲೋರೈಡ್ ಅಂಶ ಇರುವುದು ಸಂಶೋಧನೆಯಿಂದ ಪತ್ತೆಯಾಗಿದೆ. ಇದು ದೇವರ ಶಾಪವಲ್ಲ, ಬದಲಿಗೆ ಪ್ರಕೃತಿಯ ವೈಫಲ್ಯ ಎಂದು ವಿಶ್ಲೇಷಿಸಿದರು.

ರಾಜ್ಯದಲ್ಲಿ ಅಂತರ್ಜಲ ಮಟ್ಟ ಸಾವಿರ ಅಡಿಗೆ ಇಳಿದಿದ್ದು, ನೀರಿನ ಅಗತ್ಯತೆಗೆ ಕೊಳವೆ ಬಾವಿ ಕೊರೆದರೆ ಲವಣಾಂಶಮುಕ್ತ ನೀರು ಬಳಸಲಾಗುತ್ತಿದೆ ಎಂದ ಅವರು, 1500 ಅಡಿ ಆಳದ ನೀರನ್ನು ಬಳಕೆ ಮಾಡುವುದು ಅತ್ಯಂತ ಅಪಾಯಕಾರಿ ಎಂದು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿನ ವಿಕಲಚೇತನರಿಗೆ ವಸತಿ, ನಿವೇಶನಗಳಲ್ಲಿನ ಮೀಸಲಾತಿ ಶೇ.2ರಿಂದ 5ಕ್ಕೆ ಹೆಚ್ಚಳ, ಉದ್ಯೋಗ ಮೀಸಲಾತಿ ಪ್ರಮಾಣ ಹೆಚ್ಚಳ ಸೇರಿದಂತೆ ವಿಕಲಚೇತನರ ಸಂಘಟನೆಯ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಯಚಂದ್ರ ಹೇಳಿದರು.

ಕಾರ್ಯಕ್ರಮದಲ್ಲಿ ಆಹಾರ ಸಚಿವ ಯು.ಟಿ.ಖಾದರ್, ಸಂಸದ ಚಂದ್ರಪ್ಪ, ಅಂಗವಿಕಲ ನೌಕರರ ಸಂಘದ ಅಧ್ಯಕ್ಷ ಇಂದ್ರೇಶ್, ಗೌರವಾಧ್ಯಕ್ಷ ರೇಣುಕಾರಾಧ್ಯ, ಮಾಹಿತಿ ಆಯುಕ್ತ ಎಲ್.ಕೃಷ್ಣಮೂರ್ತಿ, ಪತ್ರಕರ್ತೆ ಜ್ಯೋತಿ ಇರ್ವತ್ತೂರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News