ಹಕ್ಕಿಜ್ವರ ದೃಢ: ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಇಲ್ಲ; ಸಚಿವ ಎ.ಮಂಜು

Update: 2018-01-12 14:20 GMT

ಬೆಂಗಳೂರು, ಜ.12: ಬೆಂಗಳೂರು ನಗರ ಜಿಲ್ಲೆ ಪೂರ್ವ ತಾಲೂಕಿನಲ್ಲಿ ಹಕ್ಕಿಜ್ವರಕ್ಕೆ ಕಾರಣವಾದ ಎಚ್-5 ರೋಗಾಣು ಇರುವುದು ದೃಢಪಟ್ಟಿದ್ದು, ಇದು ಮನುಷ್ಯನ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ಆದುದರಿಂದ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಪಶು ಸಂಗೋಪನಾ ಸಚಿವ ಎ.ಮಂಜು ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಣಿಗಲ್ ಮೂಲದ ಕೋಳಿಫಾರಂನಿಂದ ಪೂರೈಕೆಯಾದ ಕೋಳಿಯಲ್ಲಿ ಹಕ್ಕಿಜ್ವರ ಇರುವುದು ಪತ್ತೆಯಾಗಿದ್ದು, ಈಗಾಗಲೇ ಅಲ್ಲಿನ ಕೋಳಿಫಾರಂ ಮುಚ್ಚಲಾಗಿದೆ ಎಂದು ಹೇಳಿದರು.

ಮುನ್ನಚ್ಚರಿಕೆ ಕ್ರಮವಾಗಿ ತಮಿಳುನಾಡು ಮತ್ತು ಆಂಧ್ರ ಸೇರಿದಂತೆ ಹೊರ ರಾಜ್ಯಗಳಿಂದ ರಾಜ್ಯಕ್ಕೆ ಬರುವ ಕೋಳಿಗಳನ್ನು ಪರೀಕ್ಷೆಗೆ ಒಳಪಡಿಸಲು ನಿರ್ದೇಶನ ನೀಡಲಾಗಿದೆ ಎಂದ ಅವರು, ಹಕ್ಕಿಜ್ವರ ಕಾಣಿಸಿಕೊಂಡ ಕೋಳಿಗಳ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದರು.

ಹಕ್ಕಿಜ್ವರ ಕಾಣಿಸಿಕೊಂಡಿರುವ 10 ಕಿ.ಮೀ ವ್ಯಾಪ್ತಿಯಲ್ಲಿ ಕೋಳಿಗಳಿಗೆ ಜ್ವರ ನಿಯಂತ್ರಣ ಲಸಿಕೆ ಹಾಕಿ ರೋಗ ನಿಯಂತ್ರಣಕ್ಕೆ ಕ್ರಮ ವಹಿಸಲಾಗಿದೆ ಎಂದ ಅವರು, ಹಕ್ಕಿಜ್ವರಕ್ಕೆ ಆತಂಕಪಡುವ ಅಗತ್ಯವಿಲ್ಲ. ಕೋಳಿ ಮತ್ತು ಮೊಟ್ಟೆ ಸೇವನೆಯಿಂದ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.

ರೈತರ ಖಾತೆಗೆ ಪ್ರೋತ್ಸಾಹ ಧನ:  ಹಾಲು ಉತ್ಪಾದಕರಿಗೆ ರಾಜ್ಯ ಸರಕಾರ ಪ್ರತಿ ಲೀಟರ್‌ಗೆ ನೀಡುವ ಪ್ರೋತ್ಸಾಹಧನವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುವುದು. ಹಾಲು ಉತ್ಪಾದಕರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡಬೇಕು ಎಂದು ಸೂಚಿಸಿದರು.

ರೇಶ್ಮೆ ಅಭಿವೃದ್ಧಿ: ರಾಜ್ಯದಲ್ಲಿ ಶೇ.49ರಷ್ಟು ಕಚ್ಚಾರೇಶ್ಮೆ ಉತ್ಪಾದಿಸಲಾಗುತ್ತಿದೆ. 1,25,545 ರೇಶ್ಮೆ ಬೆಳೆಗಾರರ ಕುಟುಂಬಗಳು 5948 ರೇಶ್ಮೆ ನೂಲು ಬಿಚ್ಚಾಣಿಕೆದಾರರು ರೇಷ್ಮೆ ಕೃಷಿಯನ್ನು ಅವಲಂಬಿಸಿದ್ದಾರೆ. ಸರಕಾರ ನೀಡಿದ್ದ 21 ಕೋಟಿ ರೂ.ಗಳನ್ನು ಕೆಎಸ್‌ಐಸಿ ಸರಕಾರಕ್ಕೆ ಮರು ಪಾವತಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಮನಗರ, ಕೊಳ್ಳೇಗಾಲ, ಶಿಡ್ಲಘಟ್ಟ, ಕೋಲಾರ, ಚನ್ನಪಟ್ಟಣ, ವಿಜಯಪುರ ಮಾರುಕಟ್ಟೆಗಳಲ್ಲಿ ಇ-ಹರಾಜು ವ್ಯವಸ್ಥೆ ಜಾರಿಗೆ ತಂದಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತರೆ ಮಾರುಕಟ್ಟೆಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದರು.

ಡಿಸೆಂಬರ್ ಅಂತ್ಯಕ್ಕೆ ಒಟ್ಟಾರೆ ಹಿಪ್ಪುನೇರಳೆ ಪ್ರದೇಶದ ವಿಸ್ತೀರ್ಣ 97,818 ಹೆಕ್ಟೇರ್‌ಗೆ ಹೆಚ್ಚಳವಾಗಿದ್ದು, 49,203 ಮೆಟ್ರಿಕ್ ಟನ್ ರೇಶ್ಮೆ ಉತ್ಪಾದನೆಯಾಗಿದೆ ಎಂದ ಅವರು, ತುಮಕೂರು ಜಿಲ್ಲೆ ಪಾವಗಡದಲ್ಲಿ ರೇಶ್ಮೆಗೂಡಿನ ಬ್ಯಾಂಕ್ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News