ನಿಮ್ಮ ಆಹಾರದಲ್ಲಿ ಹಸಿರು ಬೀನ್ಸ್ ಇರಲೇಬೇಕು,ಏಕೆ ಗೊತ್ತೇ?

Update: 2018-01-12 14:28 GMT

ಹಸಿರು ಬೀನ್ಸ್ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ತರಕಾರಿಯಾಗಿದೆ. ದಿನವೂ ಬೀನ್ಸ್ ತಿನ್ನುವವರಿಗೆ ಅದು ಅಪಾರ ಆರೋಗ್ಯಲಾಭಗಳನ್ನು ನೀಡುತ್ತದೆ. ಇದನ್ನು ಬೇಯಿಸಿದ ರೂಪದಲ್ಲಿ ಅಥವಾ ಹಸಿಯಾಗಿಯೂ ತಿನ್ನಬಹುದಾಗಿದೆ.

 ವಿವಿಧ ವಿಟಾಮಿನ್‌ಗಳು, ಖನಿಜಗಳನ್ನು ಹೇರಳವಾಗಿ ಹೊಂದಿರುವ ಬೀನ್ಸ್ ಕಡಿಮೆ ಕ್ಯಾಲರಿಗಳು ಮತ್ತು ಕೊಬ್ಬನ್ನು ಒಳಗೊಂಡಿರುತ್ತವೆ. ಇವುಗಳಲ್ಲಿ ಕೊಲೆಸ್ಟ್ರಾಲ್ ಇಲ್ಲವೇ ಇಲ್ಲ. ಇವು ಅಧಿಕ ನಾರನ್ನು ಹೊಂದಿದ್ದು, ನಮ್ಮ ದೈನಂದಿನ ಪ್ರೋಟಿನ್ ಅಗತ್ಯವನ್ನು ಪೂರೈಸುತ್ತವೆ. ಎ,ಸಿ,ಕೆ ಮತ್ತು ಬಿ 6ನಂತಹ ವಿಟಾಮಿನ್‌ಗಳನ್ನು ಹಾಗೂ ಫಾಲಿಕ್ ಆ್ಯಸಿಡ್ ಹೊಂದಿರುವ ಬೀನ್ಸ್ ನಮ್ಮ ಶರೀರಕ್ಕೆ ಅಗತ್ಯವಿರುವ ಕ್ಯಾಲ್ಶಿಯಂ, ಕಬ್ಬಿಣ, ಮ್ಯಾಂಗನೀಸ್, ಪೊಟ್ಯಾಷಿಯಂ ಮತ್ತು ತಾಮ್ರದ ಉತ್ತಮ ಮೂಲವಾಗಿವೆ. ಹೇರಳ ಪೋಷಕಾಂಶಗಳನ್ನು ಹೊಂದಿರುವ ಬೀನ್ಸ್ ನಮ್ಮ ಆರೋಗ್ಯಕ್ಕೆ ಹೇಗೆ ಲಾಭಕಾರಿ ಎನ್ನುವುದನ್ನು ತಿಳಿಯೋಣ.

ಪಾಲಕ್‌ಗೆ ಹೋಲಿಸಿದರೆ ಬೀನ್ಸ್ ದುಪ್ಪಟ್ಟು ಕಬ್ಬಿಣವನ್ನು ಒಳಗೊಂಡಿದೆ. ಶ್ವಾಸಕೋಶಗಳಿಂದ ಇಡೀ ದೇಹದಲ್ಲಿಯ ಜೀವಕೋಶಗಳಿಗೆ ಆಮ್ಲಜನಕವನ್ನು ಪೂರೈಸಲು ಕಬ್ಬಿಣ ಅಗತ್ಯವಾಗಿದೆ. ನಿಮಗೆ ದಣಿವಾದಂತೆ ಮತ್ತು ಶಕ್ತಿಗುಂದಿದಂತೆ ಅನ್ನಿಸುತ್ತಿದ್ದರೆ ಈ ಹಸಿರು ಬೀನ್ಸ್‌ನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.

ಬೀನ್ಸ್‌ನಲ್ಲಿ ಕ್ಯಾಲ್ಶಿಯಂ ಮತ್ತು ಹೃದಯವನ್ನು ರಕ್ಷಿಸುವ ಫ್ಲಾವನಾಯ್ಡಾಗಳು ಹೇರಳವಾಗಿವೆ. ಫ್ಲಾವನಾಯ್ಡಾಗಳು ಉರಿಯೂತ ನಿರೋಧಕ ಗುಣವನ್ನು ಹೊಂದಿದ್ದು, ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತವೆ.

 ದೃಷ್ಟಿ ಮಾಂದ್ಯತೆಯನ್ನು ತಡೆಯುವಲ್ಲಿ ಪರಿಣಾಮಕಾರಿ ಪಾತ್ರವನ್ನು ನಿರ್ವಹಿಸುವ ಕ್ಯಾರೊಟಿನಾಯ್ಡಾಗಳು ಬೀನ್ಸ್‌ನಲ್ಲಿ ಸಮೃದ್ಧವಾಗಿವೆ. ಅದರಲ್ಲಿ ಲುಟೆನ್ ಕೂಡ ಹೇರಳವಾಗಿದ್ದು, ಇದು ಕಣ್ಣಿನ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ ಮತ್ತು ರಾತ್ರಿವೇಳೆ ದೃಷ್ಟಿಯನ್ನು ಚುರುಕುಗೊಳಿಸುತ್ತದೆ.

ಶರೀರಕ್ಕೆ ಫ್ರೀ ರ್ಯಾಡಿಕಲ್‌ಗಳಿಂದ ಹಾನಿಯ ವಿರುದ್ಧ ರಕ್ಷಣೆ ನೀಡುವ ಉತ್ಕರ್ಷಣ ನಿರೋಧಕಗಳು ಬೀನ್ಸ್‌ನಲ್ಲಿವೆ. ಫ್ರೀ ರ್ಯಾಡಿಕಲ್‌ಗಳು ಹೃದ್ರೋಗ ಮತ್ತು ಕ್ಯಾನ್ಸರ್‌ಗೆ ಕಾರಣವಾಗುತ್ತವೆ. ಹೀಗಾಗಿ ಶರೀರದಲ್ಲಿ ಫ್ರೀ ರ್ಯಾಡಿಕಲ್‌ಗಳಿಂದ ಹಾನಿಯನ್ನು ತಡೆಯಲು ಬೀನ್ಸ್ ಉತ್ತಮ ಆಹಾರವಾಗಿದೆ.

ಬೀನ್ಸ್ ಸೇವನೆ ಕರುಳಿನ ಕ್ಯಾನ್ಸರ್‌ನ್ನು ತಡೆಯಲು ಸಹಕಾರಿಯಾಗಿದೆ. ಅದರಲ್ಲಿಯ ಅಧಿಕ ನಾರು ನಮ್ಮ ಜೀರ್ಣ ವ್ಯವಸ್ಥೆಯ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ. ಪಚನ ಕ್ರಿಯೆಯನ್ನು ಸುಲಭಗೊಳಿಸುವ ನಾರು ಕರುಳಿನ ಚಲನವಲನಗಳನ್ನು ಉತ್ತೇಜಿಸುವ ಮೂಲಕ ಕ್ಯಾನ್ಸರ್‌ನ ವಿರುದ್ಧ ರಕ್ಷಣೆ ನೀಡುತ್ತದೆ.

ಬೀನ್ಸ್‌ನಲ್ಲಿ ಪುಷ್ಕಳವಾಗಿರುವ ನಾರು ಮಲಬದ್ಧತೆ, ಅಲ್ಸರ್ ಮತ್ತು ಆಮ್ಲೀಯತೆ ಯಂತಹ ಜೀರ್ಣಾಂಗ ಸಂಬಂಧಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. 110 ಗ್ರಾಂ ಬೀನ್ಸ್ ನಮ್ಮ ಶರೀರಕ್ಕೆ ಪ್ರತಿನಿತ್ಯ ಅಗತ್ಯವಿರುವ ಶೇ.15ರಷ್ಟು ನಾರನ್ನು ಒದಗಿಸುತ್ತದೆ.

ಶರೀರದಲ್ಲಿ ಹಲವಾರು ಸೋಂಕುಗಳನ್ನು ತಡೆಯುವಲ್ಲಿ ನೆರವಾಗುವ ನಿಯಾಸಿನ್ ಮತ್ತು ಥಿಯಾಮೈನ್‌ನಂತಹ ಹಲವಾರು ವಿಟಾಮಿನ್‌ಗಳು ಬೀನ್ಸ್‌ನಲ್ಲಿವೆ. ನಮ್ಮ ಶರೀರದ ಮೇಲೆ ಸೋಂಕಿನ ದಾಳಿಯನ್ನು ತಡೆಯುವ ಮುಖ್ಯ ಪೋಷಕಾಂಶಗಳಾದ ವಿಟಾಮಿನ್ ಬಿ ಮತ್ತು ಸಿ ಕೂಡ ಬೀನ್ಸ್‌ನಲ್ಲಿವೆ.

ಬೀನ್ಸ್ ಗರ್ಭಿಣಿಯರ ಪಾಲಿಗೆ ಫಾಲೇಟ್‌ನ ಅತ್ಯುತ್ತಮ ಮೂಲವಾಗಿದೆ. ಫಾಲೇಟ್ ಜೀವಕೋಶಗಳ ವಿಭಜನೆ ಮತ್ತು ಡಿಎನ್‌ಎ ಸಂಸ್ಕರಣೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಶಿಶುಗಳಲ್ಲಿ ನರವ್ಯೆಹ ನಳಿಕೆಗಳಲ್ಲಿ ದೋಷಗಳನ್ನು ತಡೆಯಲು ಗರ್ಭಿಣಿಯರು ಬೀನ್ಸ್‌ನ್ನು ಅಗತ್ಯವಾಗಿ ಸೇವಿಸಬೇಕು.

ಬೀನ್ಸ್ ಅತ್ಯಂತ ಕಡಿಮೆ ಕ್ಯಾಲರಿಗಳನ್ನು ಹೊಂದಿದ್ದು, ಕೊಲೆಸ್ಟರಾಲ್ ಇಲ್ಲ . ಹೀಗಾಗಿ ಅದು ಶರೀರದ ತೂಕ ಇಳಿಸಲು ಪೂರಕವಾಗಿದೆ. ಅಲ್ಲದೆ ಅದರಲ್ಲಿಯ ಸ್ಯಾಚ್ಯುರೇಟೆಡ್ ಫ್ಯಾಟ್ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ನಾರು ಶರೀರದಲ್ಲಿ ಚಯಾಪಚಯವನ್ನು ಉತ್ತಮಗೊಳಿಸುತ್ತದೆ ಮತ್ತು ಹೊಟ್ಟೆ ಉಬ್ಬರಿಸುವುದನ್ನು ತಡೆಯುತ್ತದೆ. ತನ್ಮೂಲಕ ಶರೀರದ ತೂಕವನ್ನು ಹದವಾಗಿ ಕಾಯ್ದುಕೊಳ್ಳಲು ನೆರವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News