ದೇಶದ ಜನತೆಗೆ ಅಮಿತ್ ಶಾ ವಿವರ ನೀಡಲಿ: ವಿ.ಧನಂಜಯ ಕುಮಾರ್

Update: 2018-01-12 14:59 GMT

ಬೆಂಗಳೂರು, ಜ.12: ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿಗೆ ಬಂದಿರುವ 80 ಸಾವಿರ ಕೋಟಿ ರೂ.ದೇಣಿಗೆಯ ಮೂಲದ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೊದಲು ವಿವರಣೆ ನೀಡಲಿ ಎಂದು ಕೇಂದ್ರದ ಮಾಜಿ ಸಚಿವ ವಿ.ಧನಂಜಯ ಕುಮಾರ್ ಆಗ್ರಹಿಸಿದರು.

ಶುಕ್ರವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಗೆ ಅಂಬಾನಿ, ಅದಾನಿ ಸೇರಿದಂತೆ ಇನ್ನಿತರರು ಎಷ್ಟು ದೇಣಿಗೆಯನ್ನು ನೀಡಿದ್ದಾರೆ ಎಂಬ ಲೆಕ್ಕವನ್ನು ಅಮಿತ್ ಶಾ ನೀಡಿದ್ದರೆ ಅವರಿಗೆ ಶಹಬ್ಬಾಸ್‌ಗಿರಿ ನೀಡಬಹುದಿತ್ತು ಎಂದರು.

ಮಾಧ್ಯಮಗಳು ಅಮಿತ್ ಶಾರನ್ನು ‘ಚಾಣಕ್ಯ’ ಎಂದು ಬಿಂಬಿಸುತ್ತಿವೆ. ಆದರೆ, ಅವರು ಯಾವ ವಿಚಾರದಲ್ಲಿ ನೈಪುಣ್ಯತೆಯನ್ನು ಹೊಂದಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ತಮ್ಮ ಪಕ್ಷದಲ್ಲಿರುವ ಆಂತರಿಕ ಗೊಂದಲಗಳನ್ನು ಬಗೆಹರಿಸಿಕೊಳ್ಳುವುದನ್ನು ಬಿಟ್ಟು ಅನಗತ್ಯ ವಿಚಾರಗಳನ್ನು ಜನತೆಯ ಮುಂದಿಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಬೆಂಗಳೂರು-ದಿಲ್ಲಿ ನಡುವೆ ಪ್ರತಿದಿನ 20-25 ವಿಮಾನಗಳು ಸಂಚರಿಸುತ್ತವೆ. ಆದರೆ, ಅಮಿತ್ ಶಾ ನಗರಕ್ಕೆ ವಿಶೇಷ ವಿಮಾನದಲ್ಲೆ ಬರುವ ಉದ್ದೇಶವೇನು? ಅವರು ಇಲ್ಲಿಗೆ ಬರುವಾಗ ವಿಶೇಷ ವಿಮಾನದಲ್ಲಿ ಹಣದ ಮೂಟೆಗಳನ್ನು ತರುತ್ತಿದ್ದಾರೆ ಎಂಬ ಅನುಮಾನವಿದೆ. ಆದುದರಿಂದ, ಮುಂದಿನ ದಿನಗಳಲ್ಲಿ ಅಮಿತ್ ಶಾ ಬರುವಾಗ ಅವರ ವಿಮಾನದ ತಪಾಸಣೆ ನಡೆಸಲು ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಮನವಿ ಮಾಡುವುದಾಗಿ ಅವರು ಹೇಳಿದರು.

ಈ ಹಿಂದೆ ಕೇಂದ್ರ ಸರಕಾರ ಸಂಪೂರ್ಣವಾಗಿ ಪ್ರಾಯೋಜಿಸುತ್ತಿದ್ದ 28 ಯೋಜನೆಗಳನ್ನು 6ಕ್ಕೆ ಇಳಿಸಿದೆ. ಹೀಗಾಗಿ ಕೇವಲ ಶೇ.10 ರಷ್ಟು ಹೆಚ್ಚುವರಿ ಹಣದಲ್ಲಿ 22 ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ರಾಜ್ಯಕ್ಕೆ ತೀವ್ರ ಹಣಕಾಸಿನ ಕೊರತೆಯಾಗುತ್ತಿದೆ ಎಂದು ಅವರು ವಿವರಿಸಿದರು.

13ನೇ ಹಣಕಾಸು ಆಯೋಗ ರಾಜ್ಯಕ್ಕೆ ಬಿಡುಗಡೆ ಮಾಡಿರುವುದು 62,775 ಕೋಟಿ ರೂ.ಗಳು. ಆದರೆ, ರಾಜ್ಯಕ್ಕೆ ಸಿಕ್ಕಿರುವುದು ಕೇವಲ 61,592 ಕೋಟಿ ರೂ.ಗಳು ಮಾತ್ರ. ಇದರಲ್ಲಿ 1,083 ಕೋಟಿ ರೂ.ಗಳ ಕೊರತೆಯಾಗಿದೆ. 14ನೇ ಹಣಕಾಸು ಆಯೋಗದ ವಿತರಣಾ ಸೂತ್ರದಂತೆ ರಾಜ್ಯಕ್ಕೆ ಸುಮಾರು 10,553 ಕೋಟಿ ರೂ.ಗಳಷ್ಟು ಹಣ ಬಿಡುಗಡೆಯಾಗಿಲ್ಲ ಎಂದು ಧನಂಜಯಕುಮಾರ್ ಆರೋಪಿಸಿದರು.

ವ್ಯತಿರಿಕ್ತ ವಿತರಣಾ ವ್ಯವಸ್ಥೆ: 2015ನೆ ಹಣಕಾಸಿನ ವಿತರಣಾ ಸೂತ್ರವನ್ನು ಗಮನಿಸಿದರೆ ರಾಜ್ಯದಿಂದ ಕೇಂದ್ರ ಸರಕಾರಕ್ಕೆ ತಲಾ ಆದಾಯವು ಶೇ.19ರಷ್ಟಿದೆ. ಆದರೆ, ಕೇಂದ್ರವು ನಮಗೆ ವಿತರಣೆ ಮಾಡುತ್ತಿರುವ ಹಣದ ಪ್ರಮಾಣವು ಶೇ.6.3ರಷ್ಟು ಮಾತ್ರ. ಉತ್ತರಪ್ರದೇಶದಿಂದ ಕೇಂದ್ರಕ್ಕೆ ತಲಾ ಆದಾಯವು ಶೇ.7ರಷ್ಟು ಮಾತ್ರವಿದೆ. ಆದರೆ, ವಿತರಣೆ ಮಾಡುತ್ತಿರುವ ಹಣದ ಪ್ರಮಾಣ ಶೇ.11.2ರಷ್ಟಿದೆ ಎಂದು ಅವರು ಹೇಳಿದರು.

ನಮ್ಮ ರಾಜ್ಯಕ್ಕೆ ಕೇಂದ್ರ ಸರಕಾರ 2.19 ಲಕ್ಷ ಕೋಟಿ ರೂ.ಉಡುಗೊರೆ ಕೊಟ್ಟಂತೆ ಅಮಿತ್ ಶಾ ಮಾತನಾಡುತ್ತಿದ್ದಾರೆ. ಕೇಂದ್ರದ ಅನುದಾನದ ಲೆಕ್ಕ ಕೇಳಲು ಅಮಿತ್ ಶಾ ಯಾರು? ಅವರು ಒಂದು ಪಕ್ಷದ ಅಧ್ಯಕ್ಷರಷ್ಟೇ, ಸರಕಾರದ ಭಾಗವಲ್ಲ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಲಿ ಎಂದು ಧನಂಜಯಕುಮಾರ್ ತಿರುಗೇಟು ನೀಡಿದರು.

ಕೇಂದ್ರದಿಂದ ಬಂದಿರುವ ಅನುದಾನವನ್ನು ಕಾಂಗ್ರೆಸ್ ಕಾರ್ಯಕರ್ತರು, ಶಾಸಕರು, ಸಚಿವರು ಲಪಟಾಯಿಸಿರುವ ರೀತಿಯಲ್ಲಿ ಆರೋಪ ಮಾಡುತ್ತಿರುವ ಅಮಿತ್ ಶಾ, ನಮ್ಮನ್ನು ಪ್ರಶ್ನಿಸುವ ಬದಲು ಕೇಂದ್ರ ಸರಕಾರಕ್ಕೆ ರಾಜ್ಯದಿಂದ ಸಲ್ಲಿಸಿರುವ ದಾಖಲೆಗಳನ್ನು ಖುದ್ದು ಪರಿಶೀಲಿಸಿಕೊಳ್ಳಲಿ ಎಂದು ಧನಂಜಯಕುಮಾರ್ ಹೇಳಿದರು.

ರಾಜ್ಯ ಸರಕಾರವು ಸಾರ್ವಜನಿಕರ ಹಣದಿಂದ ಆಹಾರ ಭದ್ರತೆಯ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಇಂದಿರಾ ಕ್ಯಾಂಟೀನ್ ಸೇರಿದಂತೆ ಹಲವಾರು ಕಲ್ಯಾಣ ಯೋಜನೆಗಳನ್ನು ರೂಪಿಸಿದೆ. ಈ ಎಲ್ಲ ಯೋಜನೆಗಳ ಖರ್ಚು ಹೆಚ್ಚಿರಬಹುದು. ಆದರೆ, ನಮ್ಮದು ಬಂಡವಾಳಶಾಹಿ ರಾಜ್ಯವಲ್ಲ. ಕಲ್ಯಾಣ ರಾಜ್ಯವು ವೆಚ್ಚದ ಹೊರತಾಗಿಯೂ ತನ್ನ ರಾಜ್ಯದ ಜನತೆಯ ಅಭ್ಯುಧಯ ಬಯಸುತ್ತಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ಪ್ರೊ.ಕೆ.ಇ.ರಾಧಾಕೃಷ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News