ಕೋಮು ರಾಜಕಾರಣವನ್ನು ಜನತೆ ತಿರಸ್ಕರಿಸಲಿ: ಅಬ್ದುಲ್ ಹನ್ನಾನ್

Update: 2018-01-12 16:28 GMT

ಬೆಂಗಳೂರು, ಜ.12: ಕಳೆದ ಕೆಲ ತಿಂಗಳುಗಳಿಂದ ರಾಜ್ಯದಲ್ಲಿ ತೀವ್ರ ಸ್ವರೂಪದ ಕೋಮು ರಾಜಕಾರಣದ ಮೂಲಕ ಮತಗಳಿಕೆಯ ಕಸರತ್ತಿನಲ್ಲಿ ಬಿಜೆಪಿ ನಿರಂತರವಾಗಿ ತನ್ನನ್ನು ತೊಡಗಿಸಿಕೊಂಡಿದೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಆರೋಪಿಸಿದ್ದಾರೆ.

ಕೊಲೆ, ಅತ್ಯಾಚಾರ, ಉದ್ರೇಕಕಾರಿ ಹೇಳಿಕೆ, ವಿದ್ಯಾರ್ಥಿನಿಯರ ಸ್ವಾತಂತ್ರ ನಿಯಂತ್ರಣ, ಪ್ರತಿಭಟನೆಯ ನೆಪವೊಡ್ಡಿ ಶಾಂತಿ ಭಂಗ ಮಾಡುವುದು ಹಾಗೂ ಮಾಧ್ಯಮಗಳ ಮೂಲಕ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಕೋಮುವಾದಿ ಬಿಜೆಪಿ ಮತ್ತು ಸಂಘಟನೆಗಳು ರಾಜ್ಯದಲ್ಲಿ ಕೋಮುಗಲಭೆ ನಡೆಸಲು ಸಂಚು ರೂಪಿಸಿದ್ದ ಪರಿಣಾಮ ರಾಜ್ಯದ ಕೆಲವೆಡೆ ಅನಾಹುತಗಳು ನಡೆದಿವೆ ಎಂದು ಅವರು ಪ್ರಕಟನೆಯಲ್ಲಿ ದೂರಿದ್ದಾರೆ.

ಸಮಾಜದ ಸ್ವಾಸ್ಥ ಹಾಳು ಮಾಡುವಂತಹ ಎಲ್ಲ ಹುನ್ನಾರಗಳನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಾತಿ, ಧರ್ಮ, ಭಾಷಿಗರು ಒಂದಾಗಿ ಕೋಮುವಾದ ರಾಜಕಾರಣಕ್ಕೆ ಅಂತ್ಯ ಹಾಡಬೇಕಾಗಿದೆ. ಕರ್ನಾಟಕಕ್ಕೆ ಸೌಹಾರ್ದದ ದೊಡ್ಡ ಇತಿಹಾಸವಿದೆ ಎಂದು ಅಬ್ದುಲ್ ಹನ್ನಾನ್ ಹೇಳಿದ್ದಾರೆ.

ನಮ್ಮ ರಾಜ್ಯವನ್ನು ಇನ್ನೂ ಸಮೃದ್ಧಿಯಾಗಿ ಬೆಳೆಸಬೇಕು. ಅಮಾಯಕರ ಜೀವವನ್ನು ಬಲಿ ಪಡೆದು ರಾಜಕಾರಣ ಮಾಡುವ ‘ಶವ ರಾಜಕಾರಣಕ್ಕೆ’ ಜನತೆ ತಿಲಾಂಜಲಿ ಹಾಡಬೇಕು. ಜತೆಗೆ ಕಪೋಲಕಲ್ಪಿತ ಹಾಗೂ ಪೂರ್ವಗ್ರಹ ಪೀಡಿತ ಸುದ್ದಿಯನ್ನು ಬಿತ್ತರಿಸದೆ ಮಾಧ್ಯಮ ತನ್ನ ಜವಾಬ್ದಾರಿಯನ್ನು ಅರಿತು ನೈಜ ಸುದ್ದಿ ಪ್ರಚಾರ ಪಡಿಸಲಿ ಎಂದು ಅವರು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಶಾಂತಿ ಭಂಗ ಮಾಡುವವರ ಮೇಲೆ ಯಾವುದೇ ಮುಲಾಜಿಲ್ಲದೆ ಸರಕಾರ ಸೂಕ್ತ ಕಾನೂನು ಕ್ರಮ ಜರುಗಿಸಿ ಕೋಮುವಾದಿ ಗೂಂಡಾಗಳನ್ನು ನಿಯಂತ್ರಣದಲ್ಲಿಟ್ಟು ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಅಬ್ದುಲ್ ಹನ್ನಾನ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News