ವಿವೇಕಾನಂದರ ಆದರ್ಶ ಪಾಲಿಸಲು ಪಣತೊಡೋಣ: ಪ್ರಹ್ಲಾದ್ ದಾಮೋದರ ದಾಸ ಮೋದಿ

Update: 2018-01-12 17:40 GMT

ಬೆಂಗಳೂರು, ಜ.12: ಯುವ ಸಮುದಾಯದ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಪಾಲಿಸುವ ಮೂಲಕ ಬಲಿಷ್ಠ ಭಾರತದ ನಿರ್ಮಾಣಕ್ಕೆ ಪಣ ತೊಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ದಾಮೋದರ ದಾಸ ಮೋದಿ ತಿಳಿಸಿದರು.

ಶುಕ್ರವಾರ ನಗರದ ಬನಶಂಕರಿಯ ಐಟಿಐ ಲೇಔಟ್ ವಿದ್ಯಾಪೀಠದಲ್ಲಿರುವ ಶ್ರೀಕೃಷ್ಣ ಸಮೂಹ ವಿದ್ಯಾ ಸಂಸ್ಥೆ ಸ್ವಾಮಿ ವಿವೇಕಾನಂದರ 156ನೆ ಜಯಂತಿ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತವನ್ನು ವಿಶ್ವಮಟ್ಟದಲ್ಲಿ ಬೆಳಗಬೇಕಾದರೆ ಯುವ ಜನತೆ ಮೌಲ್ಯಗಳನ್ನು ಮೈ ಗೂಡಿಸಿಕೊಳ್ಳಬೇಕು. ದೇಶದಲ್ಲಿರುವ ಏನೇ ಸಮಸ್ಯೆಗಳಿದ್ದರೂ ಹೋಗಲಾಡಿಸುತ್ತೇವೆಂಬ ಅಚಲ ಆತ್ಮವಿಶ್ವಾಸವನ್ನು ಹೊಂದಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ವಿವೇಕಾನಂದರು ನಡೆದು ಬಂದ ಹಾದಿಯನ್ನು ಅಧ್ಯಯನ ಮಾಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ವಿವೇಕಾನಂದರು ಬಾಲ್ಯದಿಂದಲೇ ಮೂಢನಂಬಿಕೆಯ ವಿರುದ್ಧ ಜಾಗೃತಿಗೊಂಡಿದ್ದರು. ಪರೀಕ್ಷಿಸದೆ ಯಾವುದನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಅಂತಹ ವೈಜ್ಞಾನಿಕ ಮನೋಭಾವನೆಯನ್ನು ಯುವ ಜನತೆ ಮಾದರಿಯಾಗಿ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಹೀಗೆ ಪ್ರತಿಯೊಬ್ಬರು ದೇಶದ ಸರ್ವತೋಮುಖ ಅಭಿವೃದ್ಧಿಗೆ ಸಹಭಾಗಿಗಳಾಗಬೇಕು ಎಂದು ಅವರು ಆಶಿಸಿದರು.

ಕಾರ್ಯಕ್ರಮದಲ್ಲಿ ಬಸವನಗುಡಿ ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ, ಅದಮ್ಯ ಚೇತನ ಟ್ರಸ್ಟ್ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಕೃಷ್ಣ ಸಮೂಹ ವಿದ್ಯಾ ಸಂಸ್ಥೆ ಅಧ್ಯಕ್ಷ ಡಾ.ಎಂ.ಆರ್.ನಾಯ್ಡು ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News