ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ತೇಜಸ್ವಿಯವರ ಕಳಕಳಿ ಕಾಳಜಿಗಳು

Update: 2018-01-14 11:20 GMT

ಪರಿಸರ ಕುರಿತ ಸಂಶೋಧನೆ ನಡೆಸಲು ಖ್ಯಾತ ಸಾಹಿತಿ ಮತ್ತು ಪರಿಸರ ಪ್ರೇಮಿ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸ್ಮರಣಾರ್ಥ ‘ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ’ ಸ್ಥಾಪನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಐದು ಕೋಟಿ ರೂ.ನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷರು, ಸದಸ್ಯರ ನೇಮಕಾತಿಯ ಸರಕಾರಿ ಆದೇಶವು ಈ ವರ್ಷ ಹೊರಬಂದು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ. ಹಲವು ಉದ್ದೇಶಗಳನ್ನು ಹೊಂದಿರುವ ಪ್ರತಿಷ್ಠಾನವು, ಪ್ರತಿವರ್ಷ ಪರಿಸರ, ಸಾಹಿತ್ಯ, ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಸಹ ಮಾಡಲಿದೆ. ಪರಿಸರ, ವಿಜ್ಞಾನ ಮತ್ತು ತಂತ್ರಜ್ಞಾನದ ‘ಕನ್ನಡ ವಿಷಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಂದಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿ, ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತಾಗಿ ತೇಜಸ್ವಿಯವರೊಂದಿಗೆ ಒಡನಾಡುವ ಹಲವು ಅವಕಾಶಗಳು ಈ ಅಂಕಣಕಾರನಿಗೆ ಒದಗಿಬಂದಿತ್ತು. ತೇಜಸ್ವಿಯವರಿಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಸ್ವತಃ ಬಳಸಿದ ಅನುಭವವಿತ್ತು. ಅದರ ಸಮಸ್ಯೆಗಳ ಬಗ್ಗೆ ಅರಿವಿತ್ತು. ಅವುಗಳ ಪರಿಹಾರಗಳಿಗಾಗಿ ಹಲವು ಪ್ರಯತ್ನಗಳನ್ನು ಅವರು ಮಾಡಿದರು. ಕಂಪ್ಯೂಟರ್ ಸೇರಿದಂತೆ ಇತರ ಇಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಮರ್ಥವಾಗಿ ಕನ್ನಡ ಬಳಸಿ ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕನ್ನಡವನ್ನು ಉಳಿಸಿಬೆಳೆಸುವ ಆವಶ್ಯಕತೆಯನ್ನು ಅವರು ಮನಗಂಡಿದ್ದರು.

ಕನ್ನಡ ತಂತ್ರಾಂಶಗಳಿಗೆ ಸರಕಾರವು ನೀಡಬೇಕಾದ ಉತ್ತೇಜನ; ಕಂಪ್ಯೂಟರ್‌ನಲ್ಲಿ ಕನ್ನಡ ಭಾಷಾ ಬಳಕೆಯ ಅನಿವಾರ್ಯತೆ - ಇವುಗಳ ಕುರಿತು ಒತ್ತಿಹೇಳುವಾಗ ತೇಜಸ್ವಿ ಹೀಗೆಂದಿದ್ದಾರೆ : ‘‘ಒಂದು ಭಾಷೆಯಲ್ಲಿ ಎಂತೆಂಥ ಮೇಧಾವಿಗಳಿದ್ದರು, ಎಷ್ಟು ಜ್ಞಾನಪೀಠ ಪ್ರಶಸ್ತಿಗಳು ಬಂದಿದ್ದವು. ಎಷ್ಟು ಅದ್ದೂರಿಯ ಸಾಹಿತ್ಯ ಸಮ್ಮೇಳನಗಳು ನಡೆದುವು ಇತ್ಯಾದಿಗಳೆಲ್ಲಾ ಒಂದು ಭಾಷೆಯ ಅಭಿವೃದ್ಧಿಗೆ ಪರೋಕ್ಷವಾಗಿ ಸಹಾಯ ಮಾಡುತ್ತವಾದರೂ, ಇವುಗಳಿಗಿಂತ ಅತ್ಯಂತ ಮುಖ್ಯವಾದುದು ಮತ್ತು ಒಂದು ಭಾಷೆಯ ಅಳಿವು ಉಳಿವನ್ನು ನೇರವಾಗಿ ನಿರ್ಧರಿಸುವುದು ಅದರ ಜನಬಳಕೆ. ಜನ ಬಳಸುವುದು ಕಡಿಮೆಯಾಗುತ್ತ ಬಂದಂತೆ ಆ ಭಾಷೆ ಅವಸಾನಕ್ಕೆ ಹತ್ತಿರವಾಗುತ್ತದೆ. ಯಾವ ಪ್ರಶಸ್ತಿ, ಸರಕಾರದ ಅನುದಾನಗಳು, ಆ ಭಾಷೆಯ ಸಾಹಿತ್ಯ ಸಮ್ಮೇಳನಗಳು, ಭಾವನಾತ್ಮಕ ಭಾಷಾಭಿಮಾನ, ಚಳವಳಿ ಇತ್ಯಾದಿಗಳು ಯಾವುವೂ ಆ ಭಾಷೆಯನ್ನು ಉಳಿಸಲಾರವು. ಇದಕ್ಕೆ ಸಂಸ್ಕೃತವೇ ಜ್ವಲಂತ ಉದಾಹರಣೆ. ಈ ದೃಷ್ಟಿಯಿಂದ ಜಾಗತೀಕರಣದ ಈ ಪರ್ವಕಾಲದಲ್ಲಿ ಭಾರತದ ಎಲ್ಲ ದೇಶ ಭಾಷೆಗಳೂ ತುಂಬ ಅಪಾಯಕರ ಪರಿಸ್ಥಿತಿಯಲ್ಲಿವೆ ಎಂಬುದನ್ನು ನಿಸ್ಸಂಶಯವಾಗಿ ಒಪ್ಪಬಹುದು. ಇದಕ್ಕೆ ಮುಖ್ಯ ಕಾರಣ ಮನುಷ್ಯ ಸಮಾಜದ ಎಲ್ಲ ವಹಿವಾಟುಗಳೂ ಇಲೆಕ್ಟ್ರಾನಿಕ್ ಮಾಧ್ಯಮಕ್ಕೆ ಬದಲಾಗುತ್ತಿರುವುದು. ಕಂಪ್ಯೂಟರ್, ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಸರ್ವವ್ಯಾಪಿಯಾಗಿ ಅವರಿಸುತ್ತಿದೆ. ನಾವು ಕಂಪ್ಯೂಟರಿನಲ್ಲಿ ಇಂಗ್ಲಿಷ್ ಭಾಷೆಯಷ್ಟೇ ಸರ್ವಸಮರ್ಥವಾಗಿ ನಮ್ಮ ಭಾಷೆಯನ್ನೂ ಬಳಸಲು ಸಾಧ್ಯವಾಗದಿದ್ದರೆ ನಮ್ಮ ಭಾಷೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ’’

ಕನ್ನಡ ತಂತ್ರಾಂಶ ತಯಾರಕಾ ಕ್ಷೇತ್ರವು ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದ ಕನ್ನಡಾಭಿಮಾನಿಗಳು ದಶಕದ ಹಿಂದೆ ಅಂತರ್ಜಾಲದಲ್ಲಿ ಬಹುದೊಡ್ಡ ಚರ್ಚೆಯನ್ನೇ ನಡೆಸಿದರು. ಇದಕ್ಕೆ ಪೂರಕವಾಗಿ, ಆಗ ತೇಜಸ್ವಿಯವರು ಪತ್ರಿಕೆಗಳ ಮೂಲಕ ಈ ಚರ್ಚೆಯನ್ನು ಮುಂದುವರಿಸಿದರು ಮತ್ತು ಕನ್ನಡ ತಂತ್ರಜ್ಞಾನ ಕುರಿತ ಲೇಖನಗಳನ್ನು ಪತ್ರಿಕೆಗಳಿಗೆ ಬರೆದು ತಮ್ಮ ನಿಲುವನ್ನು ಪ್ರಕಟಿಸಿದರು. ಕನ್ನಡದ ಉಚಿತ ಲಿಪಿತಂತ್ರಾಂಶವಾದ ‘ನುಡಿ’ ಸಿದ್ಧಪಡಿಸಲು ಕನ್ನಡ ಗಣಕ ಪರಿಷತ್ತಿಗೆ ಅನುದಾನ ನೀಡಿ, ಸರಕಾರವು ತಮ್ಮನ್ನು ಕಡೆಗಣಿಸಿದೆ ಎಂದು ಖಾಸಗಿ ತಂತ್ರಾಂಶ ತಯಾರಕರು ದೂರಿದ್ದರು. ಕನ್ನಡ ತಂತ್ರಾಂಶ ತಯಾರಿಕೆಯಲ್ಲಿ ಯಾರೊಬ್ಬರದೂ ಏಕಸ್ವಾಮ್ಯ ಇರಬಾರದು, ಕನ್ನಡ ಅಭಿವೃದ್ಧಿಯಾಗಬೇಕಾದರೆ ತಂತ್ರಾಂಶ ಅಭಿವೃದ್ಧಿಯಲ್ಲಿ ಮುಕ್ತಮಾರುಕಟ್ಟೆ ನೀತಿಯನ್ನು ಅನುಸರಿಸಬೇಕು ಎಂದು ತೇಜಸ್ವಿ ಪ್ರಬಲವಾಗಿ ಪ್ರತಿಪಾದಿಸಿದರು. ‘‘ಕನ್ನಡದ ತಂತ್ರಾಂಶ ಅಭಿವೃದ್ಧಿಗೆ ಸರಕಾರದ ಕೊಳ್ಳುವ ಶಕ್ತಿಯನ್ನು ಬಳಸಿಕೊಳ್ಳಬೇಕು ಮತ್ತು ಇದಕ್ಕಾಗಿ ವ್ಯಾಪಾರೀ ದೃಷ್ಟಿಯು ಉತ್ತಮ ಮಾರ್ಗ’’ ಎಂದು ಕಂಪ್ಯೂಟರ್ ತಜ್ಞರಾದ ಪ್ರೊ. ಎಚ್.ಎನ್.ಮಹಾಬಲರವರು ಎರಡು ದಶಕಗಳ ಹಿಂದೆಯೇ ಸರಕಾರಕ್ಕೆ ಸಲಹೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು. ಕನ್ನಡದ ಖ್ಯಾತ ನಿಘಂಟು ತಜ್ಞರಾದ ಶ್ರೀ ಜಿ.ವೆಂಕಟಸುಬ್ಬಯ್ಯ, ಭಾಷಾ ತಜ್ಞರಾದ ಶ್ರೀ ಲಿಂಗದೇವರು ಹಳೆಮನೆ ಮತ್ತು ಸಾಹಿತಿ, ಬರಹಗಾರ ಡಾ. ಚಂದ್ರಶೇಖರ ಕಂಬಾರ ಇವರು ಭಾಗವಹಿಸಿದ್ದ ಹಲವು ಸಭೆಗಳಲ್ಲಿ ಇಂತಹ ತಮ್ಮ ನಿಲುವುಗಳನ್ನು ತೇಜಸ್ವಿಯವರು ಹಲವು ಬಾರಿ ಪ್ರತಿಪಾದಿಸಿದ್ದಾರೆ. ಇದರಿಂದ, ತೇಜಸ್ವಿ ವ್ಯಾಪಾರಿಗಳ ಪರವಾಗಿದ್ದಾರೆ ಎಂಬ ಆರೋಪವನ್ನೂ ಎದುರಿಸಬೇಕಾಯಿತು. ಮೈಕ್ರೋಸಾಫ್ಟ್ ಕಂಪೆನಿಯ ವತಿಯಿಂದ ರೂಪಿಸಲಾಗಿದ್ದ ತಂತ್ರಾಂಶ ತರಬೇತಿ ಯೋಜನೆಯನ್ನು ವಿರೋಧಿಸಿ ಅವರು ಸರಕಾರಕ್ಕೆ ಪತ್ರ ಬರೆದಿದ್ದರು. ‘‘ಈ ಹಿಂದಿನಿಂದ ಕನ್ನಡದ ತಂತ್ರಾಂಶಗಳನ್ನು ತಯಾರಿಸುತ್ತಿರುವ ನಮ್ಮದೇ ನಾಡಿನ ಖಾಸಗಿ ವ್ಯಕ್ತಿಗಳು ಮತ್ತು ಕಂಪೆನಿಗಳಿಗೆ ಸರಕಾರ ಉತ್ತೇಜನವನ್ನು ನೀಡಬೇಕು, ಕನ್ನಡವನ್ನು ಮೈಕ್ರೋಸಾಫ್ಟ್‌ನಂತಹ ದೊಡ್ಡ ಕಂಪೆನಿಗಳಿಗೆ ಸೀಮಿತಗೊಳಿಸಬಾರದು’’ ಎಂದು ತೇಜಸ್ವಿಯವರು ಅಭಿಪ್ರಾಯಪಟ್ಟಿದ್ದಾರೆ. ‘‘ಉಚಿತ ತಂತ್ರಾಂಶಗಳಿಗೆ ಬಳಕೆಯ ಬೆಂಬಲ ದೊರೆಯುವುದಿಲ್ಲ. ಒಂದು ಹಂತದವರೆಗೆ ಇವು ಉಪಯೋಗಕ್ಕೆ ಬರುತ್ತವೆ. ಆನಂತರದಲ್ಲಿ, ಅವುಗಳು ಹಲವು ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ. ಇವುಗಳನ್ನು ಪರಿಹರಿಸಿಕೊಳ್ಳಲು ಅವು ಉಚಿತ ಮಾತ್ರವಲ್ಲ, ಅವು ಮುಕ್ತ ತಂತ್ರಾಂಶಗಳೂ (ಫ್ರೀ ಆ್ಯಂಡ್ ಓಪನ್ ಸೋರ್ಸ್ ಸಾಫ್ಟ್‌ವೇರ್) ಸಹ ಆಗಬೇಕು. ಉಚಿತ ತಂತ್ರಾಂಶಗಳ ಆಕರ ಕ್ರಮವಿಧಿಯು ಮುಕ್ತವಾಗಿ ದೊರೆತಲ್ಲಿ ಅದರಲ್ಲಿನ ತೊಡಕುಗಳು ಮತ್ತು ಸಮಸ್ಯೆಗಳನ್ನು ಆಸಕ್ತ ತಂತ್ರಜ್ಞರು ಪರಿಹರಿಸಿ ಇತರ ಬಳಕೆದಾರರಿಗೆ ನೀಡಬಹುದು. ಸಮುದಾಯದ ಸಹಭಾಗಿತ್ವದಲ್ಲಿ ಕನ್ನಡ ತಂತ್ರಾಂಶ ತಯಾರಿಕೆಯು ಮುನ್ನಡೆಯಬೇಕು ಎಂಬುದು ತೇಜಸ್ವಿ ನಿಲುವಾಗಿತ್ತು.

ಕನ್ನಡ ತಂತ್ರಾಂಶ ಅಭಿವೃದ್ಧಿ ಕ್ಷೇತ್ರದಲ್ಲಿನ ಗೊಂದಲಗಳನ್ನು ಪರಿಹರಿಸುವತ್ತ ಅವರು ಹಲವು ಪ್ರಯತ್ನಗಳನ್ನು ಸಹ ಮಾಡಿದರು. ‘ನುಡಿ’ ತಂತ್ರಾಂಶದ ಆಕರಕ್ರಮವಿಧಿಯನ್ನು (ಸೋರ್ಸ್‌ಕೋಡ್) ಮುಕ್ತಗೊಳಿಸಲು ನಡೆದ ಪ್ರಯತ್ನಗಳು ಸಫಲವಾಗದ ಹಿನ್ನೆಲೆಯಲ್ಲಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಮೂಲಕ, ಅನಿವಾರ್ಯವಾಗಿ, ಅವರು ಮತ್ತೊಂದು ತಂತ್ರಾಂಶವನ್ನೇ ಮೊದಲಿನಿಂದ ಸಿದ್ಧಪಡಿಸುವ ಕೆಲಸಕ್ಕೆ ಕೈಹಾಕಿದರು. ಅವರ ಪ್ರಯತ್ನದ ಫಲವೇ ‘ಕುವೆಂಪು ಕನ್ನಡ ತಂತ್ರಾಂಶ’. ಇದನ್ನು ರೂಪಿಸಲು ಎಲ್ಲಾ ರೀತಿಯ ಮಾರ್ಗದರ್ಶನ, ಸಲಹೆ, ಸೂಚನೆ ಮತ್ತು ನೆರವನ್ನು ತೇಜಸ್ವಿ ನೀಡಿದರು. ಅವರ ಸೂಚನೆ ಮೇರೆಗೆ ಯೋಜನೆಗೆ ಅಗತ್ಯವಿದ್ದ ಆರು ಲಕ್ಷ ರೂಪಾಯಿಗಳ ಅನುದಾನವನ್ನು ವಿಧಾನ ಪರಿಷತ್ತಿನ ಅಂದಿನ ಸದಸ್ಯ ಡಾ. ಚಂದ್ರಶೇಖರ ಕಂಬಾರರು ತಮ್ಮ ಶಾಸಕರ ನಿಧಿಯಿಂದ ನೀಡಿದ್ದರು. ಕನ್ನಡದ ಉತ್ತಮ ತಂತ್ರಾಂಶಗಳನ್ನು ನಮ್ಮ ವಿಶ್ವವಿದ್ಯಾನಿಲಯಗಳು ಮಾತ್ರವೇ ಮಾಡಬಲ್ಲವು ಎಂಬುದನ್ನು ತೇಜಸ್ವಿ ಬಲವಾಗಿ ನಂಬಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಧನಸಹಾಯದೊಂದಿಗೆ, ಕುಪ್ಪಳ್ಳಿಯಲ್ಲಿ ‘ಕುವೆಂಪು ತಂತ್ರಾಂಶ ಅಭಿವೃದ್ಧಿ ಕೇಂದ್ರ’ವನ್ನು ಆರಂಭಿಸಿ ಕನ್ನಡಕ್ಕಾಗಿ ಉತ್ತಮ ತಂತ್ರಾಂಶಗಳನ್ನು ರೂಪಿಸುವ ಅವರ ಕನಸು ನಾನಾ ಕಾರಣಗಳಿಗಾಗಿ ಸಾಕಾರವಾಗದೇ ಕನಸಾಗಿಯೇ ಉಳಿದಿದೆ.

ಕನ್ನಡ ಭಾಷೆಯ ಉಳಿವಿಗಾಗಿ ಭಾಷಾ ತಂತ್ರಜ್ಞಾನಗಳನ್ನು ಕನ್ನಡಕ್ಕೆ ಸಮರ್ಥವಾಗಿ ದುಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಅವರು ಕನಸುಕಂಡಿದ್ದರು. ಈ ಕುರಿತು ಕಾಲಕಾಲಕ್ಕೆ ಸಲಹೆಗಳನ್ನು ನೀಡುವ ಮೂಲಕ ಕರ್ನಾಟಕ ಸರಕಾರದ ಗಮನವನ್ನು ಸೆಳೆದಿದ್ದರು. ಗೊಂದಲರಹಿತ, ಸರಳವಾದ ಕನ್ನಡ ತಂತ್ರಾಂಶಗಳ ಅಭಿವೃದ್ಧಿಯಲ್ಲಿ ಅವರು ಕಳಕಳಿ ಕಾಳಜಿಗಳನ್ನು ತೋರಿದ್ದರು. ಕಂಪ್ಯೂಟರಿನಲ್ಲಿ ಕನ್ನಡ ಬಳಕೆಯಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ತಂತ್ರಾಂಶ ತಯಾರಕರು, ಆಸಕ್ತ ತಂತ್ರಜ್ಞರು ಮತ್ತು ಸರಕಾರದ ಅಧಿಕಾರಿಗಳ ಸಮನ್ವಯ ಸಭೆಗಳನ್ನು ಸಂಘಟಿಸಿದ್ದರು. ಕನ್ನಡ ತಂತ್ರಾಂಶ ಅಭಿವೃದ್ಧಿಗಾಗಿ ಸರಕಾರದ ಮಟ್ಟದಲ್ಲಿ ಒಂದು ತಜ್ಞರ ಸ್ಥಾಯಿ ಸಮಿತಿ ರೂಪಿಸಬೇಕು ಎನ್ನುವ ತೇಜಸ್ವಿಯವರ ಆಶಯ ಡಾ.ಚಂದ್ರಶೇಖರ ಕಂಬಾರರ ಪ್ರಯತ್ನಗಳಿಂದಾಗಿ ಸಾಕಾರಗೊಂಡಿದೆ. ತೇಜಸ್ವಿಯವರ ಕನ್ನಡ ತಂತ್ರಜ್ಞಾನಗಳ ಆಶಯಗಳ ಮೇಲೆ ‘ತೇಜಸ್ವಿ ಪ್ರತಿಷ್ಠಾನ’ವು ಬೆಳಕು ಚೆಲ್ಲುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

ಕನ್ನಡ ಭಾಷೆಯ ಉಳಿವಿಗಾಗಿ ಭಾಷಾ ತಂತ್ರಜ್ಞಾನಗಳನ್ನು ಕನ್ನಡಕ್ಕೆ ಸಮರ್ಥವಾಗಿ ದುಡಿಸಿಕೊಳ್ಳಬೇಕು ಎಂಬುದರ ಬಗ್ಗೆ ತೇಜಸ್ವಿ ಕನಸುಕಂಡಿದ್ದರು. ಈ ಕುರಿತು ಕಾಲಕಾಲಕ್ಕೆ ಸಲಹೆಗಳನ್ನು ನೀಡುವ ಮೂಲಕ ಕರ್ನಾಟಕ ಸರಕಾರದ ಗಮನವನ್ನು ಸೆಳೆದಿದ್ದರು. ಗೊಂದಲರಹಿತ, ಸರಳವಾದ ಕನ್ನಡ ತಂತ್ರಾಂಶಗಳ ಅಭಿವೃದ್ಧಿಯಲ್ಲಿ ಅವರು ಕಳಕಳಿ ಕಾಳಜಿಗಳನ್ನು ತೋರಿದ್ದರು.

ಡಾ.ಎ.ಸತ್ಯನಾರಾಯಣ

Writer - ಡಾ.ಎ.ಸತ್ಯನಾರಾಯಣ

contributor

Editor - ಡಾ.ಎ.ಸತ್ಯನಾರಾಯಣ

contributor

Similar News