ನೋಡಿದಷ್ಟೂ ಎತ್ತರ ಕಾಣುವ ಪ್ರೊ.ಜೆ.ಆರ್. ಲಕ್ಷ್ಮಣರಾವ್

Update: 2018-01-13 12:36 GMT

ಜೆಆರ್‌ಎಲ್ ಅವರ ವೃತ್ತಿಯೇತರ ಮೇಧಾವಿ ಜೀವಿಗಳ ಒಡನಾಟ, ಅವರುಗಳ ನಡುವಿನ ಸಾಮಾಜಿಕ ವಿಷಯ ಮತ್ತು ಕಾರ್ಯಗಳ ಬಗೆಗಿನ ದೃಷ್ಟಿಕೋನ ಮತ್ತು ವೈಚಾರಿಕ ಅಂತರ್‌ಕ್ರಿಯೆಗಳು ನನ್ನಂತಹ ಸಾಮಾನ್ಯರ ಕಣ್ಣು ತೆರೆಸಿ, ಜೀವನದಲ್ಲಿ ಒಂದು ಸಾರ್ಥಕ ಪಥವನ್ನು ಹುಡುಕಿಕೊಳ್ಳುವಂತೆ ಪ್ರೇರೇಪಿಸುತ್ತಿತ್ತು.

  

ವೈಚಾರಿಕ, ವೈಜ್ಞಾನಿಕ ಮನೋಭಾವಗಳಿಗೆ ಮತ್ತೊಂದು ಹೆಸರು ಜೆಆರ್‌ಆರ್ - ಶ್ರೀಯುತ ಜೆ.ಆರ್.ಲಕ್ಷ್ಮಣರಾವ್ ಅವರು. ಸಾಮಾಜಿಕ ಕಳಕಳಿಯ, ವಯಸ್ಸು, ಲಿಂಗ, ಧರ್ಮ, ಆರ್ಥಿಕ ಸ್ತರಗಳೆಂಬ ಭೇದಗಳೇ ಇಲ್ಲದ, ಎಲ್ಲರೊಡನೆ ನಗುಮುಖದಿಂದ, ಮಾತನಾಡುತ್ತಿದ್ದರಾದರೂ ಜೆಆರ್‌ಎಲ್ ಎಂದೂ ಸರಿ, ತಪ್ಪುಗಳ ಬಗೆಗೆ ರಾಜಿ ಮಾಡಿಕೊಂಡವರಲ್ಲ. ವೃತ್ತಿಯಲ್ಲಿ ವಿಜ್ಞಾನ ವಿಷಯ (ಸಾವಯವ ರಸಾಯನ ವಿಜ್ಞಾನ) ಪ್ರಾಧ್ಯಾಪಕರು, ಪ್ರವೃತ್ತಿಯಲ್ಲಿ ವಿಜ್ಞಾನ ವಿಷಯವನ್ನು ಮೈಗೂಡಿಸಿಕೊಂಡು ಸಮಾಜ, ಸಮುದಾಯಗಳಲ್ಲಿ ಜನರಿಗೆ ವಿಜ್ಞಾನವನ್ನು ತಲುಪಿಸಬೇಕು ಎನ್ನುವ ಕಾಯಕವನ್ನು ಹಮ್ಮಿಕೊಂಡು, ಈ ದಿಸೆಯಲ್ಲಿ ಅನನ್ಯವಾಗಿ ಕೆಲಸ ಮಾಡಿದರು.

ಅವರನ್ನು ನಾನು ಭೇಟಿ ಮಾಡಿದುದು ಬಹುಶಃ ಅವರ ಜೀವನದ ಉತ್ತರಾರ್ಧದಲ್ಲಿ. ಆದರೂ ಅವರ ವಿಜ್ಞಾನ ಸಂವಹನ ಮತ್ತು ಚಟುವಟಿಕೆಗಳ ಸಲುವಾಗಿ ಅವರ ಒಡನಾಟದಲ್ಲಿದ್ದಾಗ, ಅವರ ವಿದ್ಯಾರ್ಥಿಗಳು (ನಾನು ಕಂಡಾಗ ಅವರ ವಿದ್ಯಾರ್ಥಿಗಳೂ 40 ವಯಸ್ಸಿನ ಆಸುಪಾಸಿನ ವಯಸ್ಸಿನ ವ್ಯಕ್ತಿಗಳೇ) ತಮ್ಮ ಮೇಷ್ಟ್ರ ಬಗೆಗೆ ಎಂತಹ ಗೌರವಾದರಗಳನ್ನು ತೋರಿಸುತ್ತಿದ್ದರೆಂದರೆ ಅದು ಜೆಆರ್‌ಎಲ್ ಅವರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿದಂತೆ. ಜೆಆರ್‌ಎಲ್ ವಿದ್ಯಾರ್ಥಿಗಳು ಆ ವೇಳೆಗಾಗಲೇ ಹತ್ತು ಹಲವು ಅಧಿಕಾರ ಸ್ಥಾನಗಳಲ್ಲಿ ಇದ್ದ ನಿಷ್ಠಾವಂತರು. ಇದೇ ಬಗೆಯಲ್ಲಿ ಜೆಆರ್‌ಎಲ್ ಅವರ ವೃತ್ತಿಯೇತರ ಮೇಧಾವಿ ಜೀವಿಗಳ ಒಡನಾಟ, ಅವರುಗಳ ನಡುವಿನ ಸಾಮಾಜಿಕ ವಿಷಯ ಮತ್ತು ಕಾರ್ಯಗಳ ಬಗೆಗಿನ ದೃಷ್ಟಿಕೋನ ಮತ್ತು ವೈಚಾರಿಕ ಅಂತರ್‌ಕ್ರಿಯೆಗಳು ನನ್ನಂತಹ ಸಾಮಾನ್ಯರ ಕಣ್ಣು ತೆರೆಸಿ, ಜೀವನದಲ್ಲಿ ಒಂದು ಸಾರ್ಥಕ ಪಥವನ್ನು ಹುಡುಕಿಕೊಳ್ಳುವಂತೆ ಪ್ರೇರೇಪಿಸುತ್ತಿತ್ತು. ಇಂಥ ಕೆಲವರನ್ನು ಇಲ್ಲಿ ಹೆಸರಿಸುತ್ತೇನೆ: ಅ.ನ.ಮೂರ್ತಿರಾವ್, ಡಾ. ಹಾ.ಮಾ.ನಾಯಕ್, ಪ್ರೊ. ಕೆ.ಶ್ರೀನಿವಾಸನ್, ಪ್ರೊ. ಎಚ್.ನರಸಿಂಹಯ್ಯ, ಡಾ. ಎಂ.ಪಿ.ಪರಮೇಶ್ವರನ್ (ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ತು), ಡಾ. ಅಮೂಲ್ಯ ರೆಡ್ಡಿ, ಪ್ರೊ. ಸೇತುರಾವ್, ಡಾ.ಎಂ.ಆರ್.ಎನ್.ಮೂರ್ತಿ, ಡಾ. ಪ್ರಭುಶಂಕರ್ ಮುಂತಾದ ಅನೇಕರು. ಇವರುಗಳಲ್ಲದೆ ಎ.ರಹಮಾನ್ ಹಾಗೂ ಅಡ್ಯನಡ್ಕ ಕೃಷ್ಣಭಟ್ಟ ಅವರುಗಳನ್ನು ನಾನು ಮೊದಲೇ ಬಲ್ಲವಳಾಗಿದ್ದರೂ ಇಂತಹ ಅರ್ಥಪೂರ್ಣ ಜೀವಿಗಳು ಜೆಆರ್‌ಎಲ್ ಅವರ ಆಪ್ತರಾಗಿದ್ದರು ಎಂದು ತಿಳಿಸಲು ಪ್ರಸ್ತಾಪಿಸುತ್ತಿದ್ದೇನೆ.

1960ರ ಸಾಲಿನ ಪೂರ್ವಾರ್ಧದಲ್ಲಿ ಮೈಸೂರಿನಲ್ಲಿರುವ ಆಹಾರ ಸಂಶೋಧನಾಲಯದ ನಿಯತಕಾಲಿಕ ಆಹಾರ ‘ವಿಜ್ಞಾನ’ ಸಂಪಾದಕರು (ನಾನು ಸಹಾಯಕ ಸಂಪಾದಕಿ) ನನ್ನನ್ನು ಜೆಆರ್‌ಎಲ್ ಅವರಲ್ಲಿಗೆ ಒಮ್ಮಮ್ಮೆ ಸ್ಪಷ್ಟೀಕರಣ ಮುಂತಾದ ವಿಚಾರ ತಿಳಿದು ಬರಲು ಕಳುಹಿಸುತ್ತಿದ್ದರು. ಇದು ಪರಿಚಯದ ಲೆಕ್ಕಕ್ಕೆ ಬರುವುದಿಲ್ಲ. ಅತ್ಯಂತ ಹೊರವಲಯದ ಸಂಪರ್ಕವಷ್ಟೆ. ಆದರೆ ಪ್ರೊಫೆಸರ್ ಅವರು ನನ್ನನ್ನು ಕರೆದು ಕೂಡಿಸಿ, ಸ್ಪಷ್ಟೀಕರಣ ಅಥವಾ ಮಾಹಿತಿಕೊಟ್ಟು ಕಳುಹಿಸುತ್ತಿದ್ದರು. ಇದು ಅವರ ಬಗೆಗಿನ ಹಳೆಯ ನೆನಪು. ಆಮೇಲೆ ಸಿಎಸ್‌ಐಆರ್, ದಿಲ್ಲಿಗೆ ಸೈನ್ಸ್ ರಿಪೋರ್ಟರ್ ಕೆಲಸಕ್ಕೆ ತೆರಳಿದೆ. ಅಲ್ಲಿಂದ ಮದುವೆ ವಿಷಯಕ್ಕಾಗಿ ಮರಳಿ ಬಂದೆ, ಕೆಲಸವನ್ನೂ ಬಿಟ್ಟುಕೊಟ್ಟೆ. ಆದರೆ ಸ್ವಲ್ಪ ಮಟ್ಟಿಗೆ ಕನ್ನಡ ಮತ್ತು ಇಂಗ್ಲಿಷ್‌ಗಳಲ್ಲಿ ಜನಪ್ರಿಯ ವಿಜ್ಞಾನ ಸಂವಹನದ ಕೆಲಸ ಕಲಿತು, ಮಾಡುತ್ತಿದ್ದೆ. ನಾನು ಮತ್ತೆ ಕೆಲಸಕ್ಕೆ ಸೇರುವ ಮೊದಲು ಇನ್ನೂ ಮನೆಯಲ್ಲಿರುವಾಗ, ಜೆಆರ್‌ಎಲ್, ಕೆ.ಎಸ್.ನಿರಂಜನ ಅವರು ಗಳು ಹುಟ್ಟುಹಾಕಬೇಕೆಂದಿದ್ದ ವಿಜ್ಞಾನ ನಿಯತಕಾಲಿಕದ ಬಗೆಗೆ ನನಗೆ ಕಾಗದ ಬರೆದು, ನಾನೂ ಆ ಕಾರ್ಯದಲ್ಲಿ ಪಾಲುಗೊಳ್ಳ ಬೇಕೆಂದು ಆಹ್ವಾನಿಸಿದ್ದರು. ಆದರೆ ಅದು ಹೊರ ಬರಲೇ ಇಲ್ಲ.

ಮುಂದೆ 1978ರಲ್ಲಿ (1974ರಲ್ಲಿ ಎರಡನೆಯ ಬಾರಿಗೆ ಕೇಂದ್ರ ಆಹಾರ ಸಂಶೋಧನಾಲಯದ ಕೆಲಸ ಸೇರಿದ್ದೆ) ‘ವಿಜ್ಞಾನ’ ಎಂಬ ಜನಪ್ರಿಯ ವಿಜ್ಞಾನ ನಿಯತಕಾಲಿಕ ಹೊರತರಬೇಕೆಂದಿರುವ ತಮ್ಮ ಮತ್ತು ಒಡನಾಡಿಗಳ ವಿಷಯ ಹೊತ್ತು ತಂದು ನಮ್ಮ ಸಂಶೋಧನಾಲಯದ 15-20 ಮಂದಿಯನ್ನು ಅನೌಪಚಾರಿಕವಾಗಿ ಭೇಟಿ ಮಾಡಿ, ಆ ಕಾರ್ಯದಲ್ಲಿ ಭಾಗವಹಿಸುವ ಬಗೆಗೆ ಕೇಳಿದರು. ಅವರ ಡೆಮೊಕ್ರೆಟಿಕ್ ಕಾರ್ಯ ವಿಧಾನ ಹೇಗಿರುತ್ತೆಂದರೆ ಯಾವುದಕ್ಕೂ ಯಾರಿಗೂ ತಮ್ಮ ಅಭಿಮತ, ದೃಷ್ಟಿಗಳನ್ನು ಹೇರದೆ ಅವರ ವಿಚಾರಗಳನ್ನು ಕೇಳಿ ಯಾರೂ ಒಪ್ಪುವಂತಹ ಯುಕ್ತ ಹಾಗೂ ಸರಿಯಾದ ನಿರ್ಧಾರಗಳಿಗೆ ಬರುತ್ತಿದ್ದರು. ಆ ದಿನ ನನ್ನ ಸಹೋದ್ಯೋಗಿಗಳೆಲ್ಲ ಶ್ರೀಮತಿ ಹರಿಪ್ರಸಾದ್ ಇಂತಹದೇ ಕೆಲಸ ಮಾಡುತ್ತಿದ್ದಾರೆ, ಅವರನ್ನು ಆರಿಸಿಕೊಳ್ಳಿ ಎಂದು ಹೇಳಿದರು. ಜೆಆರ್‌ಎಲ್ ಅವರು ತಮ್ಮ ನಿಯತಕಾಲಿಕದ ಹೆಸರಿನಲ್ಲಿ ಸಿಎಫ್‌ಟಿಆರ್‌ಐ ನಿರ್ದೇಶಕರಿಗೆ ನನ್ನ ಸೇವೆಯನ್ನು ಎರವಲು ಕೊಡುವಂತೆ ಕೇಳಿದರು. ನಿರ್ದೇಶಕರು ತಮ್ಮ ಸಂಸ್ಥೆಯ ಕೆಲಸಗಳಿಗೆ ಅಡ್ಡಿಯಾಗದಂತೆ ಯಾವುದೇ ಬಗೆಯ ನನ್ನ ಇಂತಹ ಸೇವೆಯನ್ನು ಎರವಲು ಕೊಡಲು ಸಂಪೂರ್ಣ ಬೆಂಬಲವಿದೆಯೆಂಬ ಉತ್ತರ ನೀಡಿದರು. ಹೀಗೆ ಆರಂಭವಾಯಿತು, ಜೆಆರ್‌ಎಲ್ ಅವರಂತಹ ಮೆಂಟರ್ ಅವರ ನೇತೃತ್ವದಲ್ಲಿ ನನ್ನ ಸೇವೆ.

1978 ಅಕ್ಟೋಬರ್ ‘ವಿಜ್ಞಾನ’ ಮಾಸಪತ್ರಿಕೆಯ ಪ್ರಾಯೋಗಿಕ ಸಂಚಿಕೆ ಆರಂಭವಾಯಿತು. ಆನಂತರ ಅದು 1979ರಲ್ಲಿ ಮಾಸಿಕ ಪತ್ರಿಕೆಯಾಯಿತು. ಈ ಪತ್ರಿಕೆ ಹುಟ್ಟು ಹಾಕಿ, ಅದರ ಮುಖ್ಯ ಹೊಣೆ ಹೊತ್ತ ಜೆಆರ್‌ಎಲ್ ಅವರು ವಿಜ್ಞಾನ ಲೇಖನಗಳ ಬರೆವಣಿಗೆಗೆ ಮೇಲ್ಪಂಕ್ತಿ ಹಾಕಿದರು. ಅದಾಗಲೇ ಪ್ರಬುದ್ಧ ಕರ್ನಾಟಕದ ಚಿನ್ನದ ಸಂಚಿಕೆಗಳ ಎರಡು ವಿಜ್ಞಾನ ಸಂಪುಟಗಳನ್ನು ಅತಿ ಯಶಸ್ವಿಯಾಗಿ ಜೆಆರ್‌ಎಲ್ ಸಂಪಾದಿಸಿದ್ದ ಹೊತ್ತಿಗೆಗಳನ್ನು ಮೈಸೂರು ವಿಶ್ವವಿದ್ಯಾನಿಲಯವು ಪ್ರಕಟಿಸಿದ್ದಿತು. ಅದರ ನಂತರ ವಿಜ್ಞಾನ ಕರ್ನಾಟಕದ ಸಂಪಾದಕರಾಗಿ ಉತ್ತಮ ಗುಣಮಟ್ಟದ ವಿಜ್ಞಾನ ನಿಯತಕಾಲಿಕವನ್ನು ನಿರ್ವಹಿಸಿ, ಕೆಲಸ ಮಾಡಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಿಜ್ಞಾನ ಲೇಖಕರ ಶಿಬಿರವನ್ನು ಸಹ ಸಂಘಟಿಸಿ, ಅದರ ಸ್ವರೂಪವನ್ನು ಸಂಪೂರ್ಣವಾಗಿ ಯೋಜಿಸಿ, ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಿ ನಡೆಸಿಕೊಟ್ಟರು. ಇದರಲ್ಲಿ ಆಗ ಭಾಗವಹಿಸಿದ್ದುದು ಕಾಲೇಜು ಅಧ್ಯಾಪಕರುಗಳು. ಅತಿಮೌಲ್ಯಯುತರಾಗಿ ನಡೆದ ಆ ಶಿಬಿರದ ಬಗೆಗೆ ಕೇಳಿದ್ದೇನೆ. ಇದಲ್ಲದೆ ಜೆಆರ್‌ಎಲ್ ಅವರ ಮತ್ತೊಂದು ಕೊಡುಗೆಯ ಮಹೋನ್ನತ ಕ್ಷೇತ್ರವೆಂದರೆ ಮೈಸೂರು ವಿವಿ ಪ್ರಸಾರಾಂಗವು ಹೊರತಂದ ನಾಲ್ಕು ಸಂಪುಟಗಳ ಇಂಗ್ಲಿಷ್-ಕನ್ನಡ ನಿಘಂಟಿನಲ್ಲಿ ಕೆಲಸ. ಅವರು ಅದರ ಪ್ರಧಾನ ಸಂಪಾದಕರಲ್ಲಿ ಒಬ್ಬರಾಗಿದ್ದರು. ಇಂಗ್ಲಿಷ್ ಹಾಗೂ ಕನ್ನಡ - ಈ ಎರಡೂ ಭಾಷೆಗಳಲ್ಲಿ ಅವರ ಶಬ್ದ ಸಂಪತ್ತು ಹಾಗೂ ಅಭಿವ್ಯಕ್ತಿಗಳು ಸಂಪದ್ಭರಿತವಾಗಿದ್ದವು. ವಿಜ್ಞಾನ ಬರಹದಲ್ಲಿ ಅದಾಗಲೇ ತೊಡಗಿಸಿಕೊಂಡಿದ್ದರಿಂದ ಅವರ ಪದ ಪ್ರಯೋಗಗಳು ಮತ್ತು ವಾಕ್ಯಗಳು ಹಾಗೂ ವಿಷಯ ವಿವರಣೆಗಳು ಅತಿ ಉಚಿತವಾಗಿರುತ್ತಿದ್ದವು. ಈ ನಿಘಂಟಿನ ಎಲ್ಲ ವಿಜ್ಞಾನ ಮತ್ತು ತಂತ್ರಜ್ಞಾನಗಳ ಪಾರಿಭಾಷಿಕ ಪದಗಳನ್ನು ಜಗತ್ತಿನ ನಿಘಂಟುಗಳಲ್ಲಿ ಬಳಸುವಂತೆ ಶಿಷ್ಟರೂಪದಲ್ಲಿ, ಅಗತ್ಯವಿದ್ದರೆ ಟಂಕಿಸುವ ವಿಧಿ ವಿಧಾನಗಳಲ್ಲಿ, ಎಂದರೆ ಅದರ ಆ ಪದದ ಮೂಲ, ಪೂರ್ವಾರ್ಧ, ದ್ವಂದ್ವಗಳಿಲ್ಲದ ನಿಖರ ರೂಪ ಮುಂತಾದ ಒರೆಹಚ್ಚಬೇಕಾದ ಎಲ್ಲಾ ಬಗೆಯ ಹಂತಗಳಲ್ಲೂ ಪರಿಶೀಲನೆ ಮಾಡಿ, ಆಮೇಲೆ ಒಪ್ಪಿಗೆಯಾಗುವ ಪದವನ್ನು ಅಲ್ಲಿ ಬಳಸಿದ್ದಾರೆ. ಈ ಅರ್ಥದಲ್ಲಿ ವಿಜ್ಞಾನ ಬರಹಗಾರರಿಗೆ ಈ ಪದಗಳು ಅಮೂಲ್ಯ ಕಾಣಿಕೆಗಳೆಂದೇ ಹೇಳಬಹುದು. ಏಕೆಂದರೆ 1961ರಷ್ಟು ಹಿಂದೆ ಅಂಬೆಗಾಲಿಕ್ಕುವಂತೆ ಜನಪ್ರಿಯ ವಿಜ್ಞಾನ ಬರಹ ಶೈಲಿ ಕಲಿತ ನನಗೆ ನಿಖರ ಪದಗಳು ಅಥವಾ ಇನ್ನೂ ರೂಪಿಸದ ಪದಗಳನ್ನು ಟಂಕಿಸುವುದು ಎಂತಹ ಹರಸಾಹಸ ವಿಷಯವೆಂದು ಗೊತ್ತಿದ್ದಿತು.

ಇಂತಹ ಸಾಧನೆಗಳ ಸಿರಿಸಂಪತ್ತಿನ ಹಿನ್ನೆಲೆಯಲ್ಲಿ ಜೆಆರ್‌ಎಲ್ ಅವರು ವಿಜ್ಞಾನ ಪತ್ರಿಕೆಗೆ ಅಸ್ತಿವಾರ ಹಾಕಿ, ಒಂದು ದಶಕ ಕಾಲ ಅದರ ಪ್ರಧಾನ ಸಂಪಾದಕರಾಗಿ ನಡೆಸಿಕೊಟ್ಟರು. ಆಮೇಲೆ ಸಹ ಅವರೇ ಅದನ್ನು ನಡೆಸಿದ್ದರೆ ಯಾರೂ ಒಪ್ಪುತ್ತಿದ್ದರು. ಆದರೆ ಅವರಿಗೇ ವಿಶಿಷ್ಟವಾದ ವೈಖರಿಯಲ್ಲಿ, ಡೆಮಾಕ್ರೆಟಿಕ್ ಆಗಿ ಅದನ್ನು ಮತ್ತೊಬ್ಬ ಮೇಧಾವಿ ಪ್ರೊಫೆಸರ್ ಆದ ಅಡ್ಯನಡ್ಕ ಕೃಷ್ಣಭಟ್ ಅವರಿಗೆ ಬಿಟ್ಟುಕೊಟ್ಟಿದ್ದುದು ಅಷ್ಟೇ ಅಲ್ಲ ತಾನು ಒಬ್ಬ ಸಂಪಾದಕೀಯ ಸದಸ್ಯನಾಗಿ ಕೆಲಸ ಮಾಡಿದರು ಎಂಬುದು ಇಲ್ಲಿ ವಿಶೇಷವಾಗುತ್ತದೆ. ಕೃಷ್ಣಭಟ್ಟರು ಸಹ ಮೇರು ಸಂವಹನಕಾರರೇ. ಆದರೆ ತೆರೆದ ವೈಚಾರಿಕತೆಯಿಲ್ಲದವರಿಗೆ ತಾನು ಮತ್ತೆ ಮತ್ತೊಬ್ಬರ ಕೈಕೆಳಗೆ ಕೆಲಸ ಮಾಡುವುದು ಒಪ್ಪಿಗೆಯಾಗದಿರಬಹುದು. ಕೃಷ್ಣಭಟ್ಟರೂ ಅಂಥವರೇ. ನಾನು ಪ್ರಧಾನ ಸಂಪಾದಕಿಯಾಗಿದ್ದಾಗ ಅವರು ಸಂಪಾದಕೀಯ ಸದಸ್ಯರಾಗಿ ಕೆಲಸ ಮಾಡಿದುದನ್ನು ಆಳವಾದ ಕೃತಜ್ಞತೆಯಿಂದ ಸ್ಮರಿಸುತ್ತೇನೆ.

‘ವಿಜ್ಞಾನ’ ನಿಯತಕಾಲಿಕೆಯ ರಿಜಿಸ್ಟ್ರೇಷನ್‌ನಲ್ಲಿ ಸ್ವಲ್ಪ ತೊಡಕುಂಟಾಗಿ ಅದಕ್ಕೆ ಬಾಲವನ್ನು ಹಚ್ಚಬೇಕಾಗಿ ಬಂದಿತು. ಹೀಗೆ ಹುಟ್ಟಿತು ರಿಜಿಸ್ಟರ್ಡ್‌ ಬಾಲವಿಜ್ಞಾನ ಮಾಸಪತ್ರಿಕೆ, 1979ರ ಅಂತ್ಯದಲ್ಲಿ ಈ ನಿಯತ ಕಾಲಿಕ ನಡೆಸಿ ಒಂದು ಪ್ರಶ್ನಾವಳಿಯನ್ನು ಸುಮಾರು 5,000 ಮಂದಿಗೆ ಕಳುಹಿಸಿದಾಗ ಇಂತಹ ಪತ್ರಿಕೆಯ ಅಗತ್ಯದ ಬಗೆಗೆ ಭಾರೀ ಬಹುಮತ ಬಂದಿತು. ಈ ಆಶ್ವಾಸನೆಯನ್ನು ಅವಲಂಬಿಸಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿಗೆ (ಕರಾವಿಪ), 1980ರ ಅಂತ್ಯದಲ್ಲಿ ನಾಂದಿ ಹಾಕಲಾಯಿತು. ಹೂವಿನೊಂದಿಗೆ ನಾರೂ ಸ್ವರ್ಗ ಸೇರುವಂತೆ ಬಾಲವಿಜ್ಞಾನದಲ್ಲಿ ಸಂಪಾದಕ ಸಮಿತಿಯಲ್ಲಿ ಅದಾಗಲೇ ಕೆಲಸ ಮಾಡುತ್ತಿದ್ದ ನಾನೂ ಕರಾವಿಪದ ಒಬ್ಬ ಸಂಸ್ಥಾಪಕ ಸದಸ್ಯೆಯಾಗಿ ಸಹಿ ಮಾಡುವ ಸುವರ್ಣಾವಕಾಶ ನನ್ನದಾಯಿತು.

ಜೆಆರ್‌ಎಲ್ ಅವರ ವಿಜ್ಞಾನ ಸಂವಹನ ಹಿನ್ನೆಲೆ ಹಾಗೂ ಅವರ ಅನೇಕ ಪರಿಚಯಸ್ಥರ ವಿಷಯ ಪರಿಣತಿಗಳಿಂದಾಗಿ ಬಾಲವಿಜ್ಞಾನ ಪತ್ರಿಕೆಯು ಅತ್ಯಂತ ದೃಢ ಹೆಜ್ಜೆಗಳಿಂದ ಕನ್ನಡ ಸಾಹಿತ್ಯ ಲೋಕವನ್ನು ಪ್ರವೇಶಿಸಿತು. ಅದು ಈಗಲೂ ತನ್ನ 39ನೆಯ ಸಂಪುಟದಲ್ಲಿ ನಡೆಯುತ್ತಿದೆ. ನಾನು ಈಗ ಎರಡನೆಯ ಬಾರಿಗೆ ಅದರ ಪ್ರಧಾನ ಸಂಪಾದಕಿಯಾಗಿದ್ದೇನೆ.

ಇಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತು (ಕೆಎಸ್‌ಸಿಎಸ್‌ಟಿ) ಮತ್ತು ವಿಶೇಷವಾಗಿ ಆಗಿನ ಅದರ ಮುಖ್ಯಸ್ಥ, ಅಂತಾರಾಷ್ಟ್ರೀಯವಾಗಿ ವಿದ್ಯುತ್‌ರಸಾಯನ ವಿಜ್ಞಾನತಜ್ಞರಲ್ಲಿ ಒಬ್ಬರಾಗಿದ್ದ, ಜೆಆರ್‌ಎಲ್ ಅವರ ವಿದ್ಯಾರ್ಥಿ ಡಾ. ಅಮೂಲ್ಯ ರೆಡ್ಡಿ ಅವರನ್ನು, ಅದರ ಕಾರ್ಯದರ್ಶಿ ಹಾಗೂ ಅನುಪಮ ಸಂಘಟನಾ ಶಕ್ತಿಯ ರಸಾಯನವಿಜ್ಞಾನ ಪ್ರೊ. ಎಮ್.ಸೇತುರಾವ್ ಅವರುಗಳನ್ನು ನೆನಪಿಸಿಕೊಳ್ಳಲೇಬೇಕು. ಪರಿಷತ್ತಿನ ಬೈಲಾದಲ್ಲಿ ಒಂದು ಅವಕಾಶವನ್ನು ಹೆಕ್ಕಿ ತೆಗೆದು ಜನಪ್ರಿಯ ವಿಜ್ಞಾನ ನಿಯತಕಾಲಿಕೆ ಹೊರತರುವುದಕ್ಕೆ ಒಪ್ಪಿಗೆ ಪಡೆಯಲಾಯಿತು. ಆಗ ಕೇರಳದ ಎಂ.ಪಿ.ಪರಮೇಶ್ವರನ್ ಅವರನ್ನು ಕರೆಯಿಸಿ, ಕರಾವಿಪದ ಸ್ಥಾಪನೆಯ ಬಗೆಗೆ ಮಾಹಿತಿ ಪಡೆಯಲಾಯಿತು. ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ತಿಗೂ ಭೇಟಿಕೊಟ್ಟೆವು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು (ಕರಾವಿಪ) ಸ್ಥಾಪಿಸಿ, ಅದರ ಬೈಲಾಗಳನ್ನು ರೂಪಿಸಿ, ನೋಂದಾಯಿಸಿಲಾಯಿತು. ಇದು ವಿದ್ಯಾರ್ಥಿಗಳು, ಜನಸಾಮಾನ್ಯರು ಮತ್ತು ವಿವಿಧ ಕ್ಷೇತ್ರದ ಜನರಿಗೆ ಅವರುಗಳಿಗೆ ಸೂಕ್ತವಾದ ವಿಜ್ಞಾನ ವಿಷಯಗಳನ್ನು ತಕ್ಕುದಾಗಿ ತಲುಪಿಸುವ ಬಗೆಗೆ ರೂಪುರೇಷೆಗಳನ್ನು ತಯಾರಿಸಿ, ಕಾರ್ಯಕ್ರಮ ಯೋಜನೆಗಳನ್ನು ಹಮ್ಮಿಕೊಳ್ಳಲಾಯಿತು. ಇದರ ಒಂದು ಪ್ರಧಾನ ಅಂಗ ಬಾಲವಿಜ್ಞಾನ ಅಲ್ಲದೆ ಸುಲಭ ಬೆಲೆಯ ಕಿರುಪುಸ್ತಿಕೆಗಳ ಪ್ರಕಟನೆ, ರಾಜ್ಯದ ಬೇರೆ ಬೇರೆ ಭಾಗಗಳಲ್ಲಿರುವ ವಿಷಯ ಪರಿಣತರಿಂದ ವಿಜ್ಞಾನ ವಿಷಯ ಬರಹ, ಉಪನ್ಯಾಸ, ಪ್ರಶ್ನೋತ್ತರ ಕಾರ್ಯಕ್ರಮಗಳು ಮತ್ತು ವಿಜ್ಞಾನ ಲೇಖಕರ ಕಮ್ಮಟ ಇವೆಲ್ಲ ಕರಾವಿಪದ ಕಾರ್ಯಕ್ರಮ ವ್ಯಾಪ್ತಿಗೆ ಬಂದವು.

ಕರಾವಿಪದ ಆರಂಭಿಕ ದೆಸೆಯಲ್ಲಿ ನಡೆಯುತ್ತಿದ್ದ ವಿಜ್ಞಾನ ಲೇಖಕರ ಕಮ್ಮಟದ ಬಗೆಗೆ ಕೆಲವು ವಿವರಗಳನ್ನು ಹೇಳಲೇಬೇಕು. ಇದರ ಅಸ್ತಿಭಾರ ಹಾಕಿದವರೂ ಜೆಆರ್‌ಎಲ್ ಅವರೇ. ಮೊದಲಿಗೆ ಶಿಬಿರಾರ್ಥಿಗಳು 250 ಹಾಗೂ 1,000 ಪದಗಳ ಲೇಖನಗಳನ್ನು ಕಡ್ಡಾಯವಾಗಿ ಕಳುಹಿಸಬೇಕು. ಇದನ್ನು ಬಾಲವಿಜ್ಞಾನ ಸಂಪಾದಕ ಸಮಿತಿಯು ಓದಿ, ಅವರನ್ನು ಶಿಬಿರಕ್ಕೆ ಆಹ್ವಾನಿಸುವ ಬಗೆಗೆ ಮೌಲ್ಯಾಧಾರಿತ ತೀರ್ಪಿಗೆ ಬರುತ್ತಿದ್ದೆವು. ಆಮೇಲೆ ಅವರಿಗೆ ಬರೆದು, ಶಿಬಿರಕ್ಕೆ ಬರಬೇಕಾಗಿ ತಿಳಿಸಲಾಗುತ್ತಿತ್ತು. ಯುದ್ಧ ಕಾಲೇ ಶಸ್ತ್ರಾಭ್ಯಾಸೇ ಅಂತಲ್ಲ. ಇಷ್ಟಕ್ಕೇ ಪೂರ್ಣ 2 ತಿಂಗಳ ಕಾಲ ಬೇಕು. ಆಮೇಲೆ ಒಂದು ಮಟ್ಟದ ಲೇಖಕರು ಬರುತ್ತಿದ್ದ ಈ ಶಿಬಿರಗಳ ಚಟುವಟಿಕೆ ಸ್ಮರಣೀಯ ಮತ್ತು ದಾಖಲೆ ಯೋಗ್ಯವಾದದ್ದು. ಪ್ರತೀ ಲೇಖನದ ವಿಶ್ಲೆೇಷತೆ, ವಿಷಯ, ಪದ ಪ್ರಯೋಗ, ವ್ಯಾಕರಣ, ದ್ವಂದ್ವಾರ್ಥಗಳು, ವಾಕ್ಯರಚನೆ - ಎಲ್ಲವೂ ಸಮಪರ್ಕವಾಗಿರುವಂತೆ ತಿದ್ದಲು ಪ್ರತಿಯೊಬ್ಬರಿಗೂ ವಿಶ್ಲೇಷಿಸುವ ಸ್ವಾತಂತ್ರವಿದ್ದಿತು. ಮೊದಲದಿನದ ನಂತರ ನಮ್ಮ ಲೇಖನದ ಬಗೆಗೆ ಯಾರಿಗೂ ಚಳಿ ಇರುತ್ತಿರಲಿಲ್ಲ. ಏಕೆಂದರೆ ವಿಜ್ಞಾನ ಲೇಖನವೆಂದರೆ ವಿಜ್ಞಾನದ ತತ್ವ ಹಾಗೂ ವಿಷಯಗಳನ್ನು ಪ್ರಾಮಾಣಿಕವಾಗಿ, ಅರ್ಥವಾಗುವಂತೆ ಬರೆಯುವ ಕೆಲಸ. ಇದರಲ್ಲಿ ವ್ಯಕ್ತಿನಿಷ್ಠೆ ಸಲ್ಲದು. ಈ ಕಮ್ಮಟಗಳಲ್ಲಿನ ಇಂಗ್ಲಿಷಿಂದ ಕನ್ನಡ ಭಾಷಾಂತರ ಕಾರ್ಯಕ್ರಮಗಳು ಅಷ್ಟೇ ಚೇತೋಹಾರಿಯಾದ ಕಸರತ್ತಾಗಿದ್ದವು. ಏಕೆಂದರೆ ನಮ್ಮ ಆಕರಗಳನೇಕವು ಇರುವುದು ಇಂಗ್ಲಿಷಿನಲ್ಲಿ. ವಿಜ್ಞಾನ ವಿಷಯದ ನಿಖರ ವಿವರಣೆ ಮತ್ತು ನಮಗೆ ಸುಲಭವಾಗಿ ನಿಲುಕದ ಸುಳಿಸುಳಿಯಾದ ರಚನೆಯ ಇಂಗ್ಲಿಷ್ ವಾಕ್ಯಗಳು/ವ್ಯಾಕರಣ ಇವುಗಳನ್ನು ಜೆಆರ್‌ಎಲ್ ಮತ್ತು ಕೃಷ್ಣಭಟ್ಟರು ಬಹಳ ಉತ್ತಮವಾಗಿ ನಿರ್ವಹಿಸಿ, ತಿಳಿಸಿಕೊಡುತ್ತಿದ್ದರು. ಈ ಕಮ್ಮಟಗಳಿಂದ ಹೊರಬಂದ ಯಾರೇ ಶಿಬಿರಾರ್ಥಿಯು ವಿಜ್ಞಾನ ಬರಹ ಮಾಡುವ ಬಗೆಗೆ ಆತ್ಮವಿಶ್ವಾಸ ಗಳಿಸಿರುತ್ತಿದ್ದರು. ಇಲ್ಲಿ ಪ್ರತೀ ಬರವಣಿಗೆಗಾರನಿಗೆ ವಿಜ್ಞಾನ ವಿಷಯದಲ್ಲಿ ಒಂದು ಆಧಾರ ತಿಳಿವಳಿಕೆ ಇರಲೇಬೇಕು, ಎಂಬುದು ಮಾತ್ರ ಅತೀ ಮಹತ್ವದ ಅಂಶವಾಗಿದ್ದಿತು. ಇಷ್ಟೆಲ್ಲ ಸಾಮರ್ಥ್ಯಗಳ ಕಣಜವಾಗಿದ್ದ ಜೆ.ಆರ್.ಎಲ್. ವಿಜ್ಞಾನ ಬರಹ, ಕರಾವಿಪ ಸ್ಥಾಪನೆ, ವಿಜ್ಞಾನ ಲೇಖಕರ ಶಿಬಿರಗಳಿಗೆ ದೃಢ ತಳಪಾಯ ಹಾಕಿದರು. ಇವು ಕರ್ನಾಟಕ ರಾಜ್ಯಕ್ಕೆ ಅವರಿಂದ ಸಂದಿರುವ, ಬಹಳ ಕಾಲ ನಿಲ್ಲುವ ಮಾರ್ಗದರ್ಶಿ ಕೊಡುಗೆಗಳು.

Writer - ಶ್ರೀಮತಿ ಹರಿಪ್ರಸಾದ್

contributor

Editor - ಶ್ರೀಮತಿ ಹರಿಪ್ರಸಾದ್

contributor

Similar News