ಸೌದಿ: ಮೊದಲ ಬಾರಿ ಕ್ರೀಡಾಂಗಣದಲ್ಲಿ ಫುಟ್ಬಾಲ್ ವೀಕ್ಷಿಸಿದ ಮಹಿಳೆಯರು

Update: 2018-01-13 17:52 GMT

  ಜಿದ್ದಾ,ಜ.13: ಸೌದಿ ಅರೇಬಿಯದಲ್ಲಿ ಮಹಿಳೆಯರು ಇದೇ ಮೊದಲ ಬಾರಿಗೆ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸುವುದರೊಂದಿಗೆ ಆ ದೇಶವು ಇನ್ನೊಂದು ಸಾಮಾಜಿಕ ಬದಲಾವಣೆಗೆ ಸಾಕ್ಷಿಯಾಯಿತು.

   ಜಿದ್ದಾ ನಗರದಲ್ಲಿ ಶುಕ್ರವಾರ ನಡೆದ ಸೌದಿ ಅರೇಬಿಯದ ಎರಡು ಫುಟ್ಬಾಲ್ ತಂಡಗಳ ನಡುವೆ ನಡೆದ ಪಂದ್ಯವನ್ನು ವೀಕ್ಷಿಸಲು ಮಹಿಳೆಯರಿಗೆ ಅನುಮತಿ ನೀಡಲಾಗಿತ್ತು. ಜಿದ್ದಾದ ಕಿಂಗ್ ಅಬ್ದುಲ್ಲಾ ಸ್ಪೋರ್ಟ್ಸ್ ಸಿಟಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯವನ್ನು ಹೆಚ್ಚಿನ ಸಂಖ್ಯೆಯ ಮಹಿಳೆಯರು ತಮ್ಮ ಕುಟುಂಬಗಳೊಂದಿಗೆ ಬಂದು ವೀಕ್ಷಿಸಿದರು. ಸೌದಿಯಲ್ಲಿ ಈ ಮೊದಲು ಮಹಿಳೆಯರಿಗೆ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ವೀಕ್ಷಿಸುವುದಕ್ಕೆ ನಿಷೇಧವಿತ್ತು.

 ಅಲ್ ಅಹ್ಲಿ ಹಾಗೂ ಅಲ್ ಬಾತಿನ್ ತಂಡಗಳ ನಡುವೆ ಶನಿವಾರ ನಡೆಯಲಿರುವ ದ್ವಿತೀಯ ಪಂದ್ಯ ಹಾಗೂ ಮುಂದಿನ ಗುರುವಾರ ನಡೆಯಲಿರುವ ತೃತೀಯ ಪಂದ್ಯಗಳನ್ನು ವೀಕ್ಷಿಸಲು ಅನುಮತಿ ನೀಡಲಾಗುವುದೆಂದು ಕಳೆದ ವಾರ ಸೌದಿ ಆಡಳಿತ ತಿಳಿಸಿತ್ತು. ಸೌದಿ ಅರೇಬಿಯದ ಇತರ ಪ್ರಮುಖ ಕ್ರೀಡಾಂಗಣಗಳಲ್ಲಿಯೂ ಪಂದ್ಯಗಳ ವೀಕ್ಷಣೆಗಾಗಿ ಮಹಿಳೆಯರಿಗೆ ಸೂಕ್ತ ಏರ್ಪಾಡುಗಳನ್ನು ಮಾಡಲಾಗುವುದೆಂದು ದೇಶದ ಕ್ರೀಡಾ ಪ್ರಾಧಿಕಾರವು ತಿಳಿಸಿದೆ.

ಸೌದಿ ಅರೇಬಿಯದಲ್ಲಿ ಮಹಿಳಾ ಸುಧಾರಣಾ ಕ್ರಮಗಳನ್ನು ತ್ವರಿತಗೊಳಿಸಿರುವ ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರು ಇತ್ತೀಚೆಗಷ್ಟೇ ಮಹಿಳೆಯರಿಗೆ ವಾಹನ ಚಲಾಯಿಸಲೂ ಅನುಮತಿ ನೀಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News