ಸ್ವಾಮೀಜಿಗಳಿಂದ ಸಮಾಜದ ಸ್ವಾಸ್ಥ ಹಾಳಾಗುತ್ತಿದೆ: ಡಾ.ಮಹೇಶ್ ಜೋಷಿ
ಬೆಂಗಳೂರು, ಜ.14: ವೀರ ಸನ್ಯಾಸಿಯಾಗಿದ್ದ ಸ್ವಾಮಿ ವಿವೇಕಾನಂದರು ಸ್ವಾರ್ಥಕ್ಕಾಗಿ ಬದುಕುವ ಬದಲು ನಿಸ್ವಾರ್ಥಿಯಾಗಿ ಬದುಕು ಎಂಬ ಸಂದೇಶವನ್ನು ಸಾರಿದರೆ, ಈಗಿನ ಸ್ವಾಮಿಜೀಗಳು ತಮ್ಮ ಸ್ವಾರ್ಥಕ್ಕಾಗಿ ಸಮಾಜದ ಸ್ವಾಸ್ಥವನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಸಾರ ಭಾರತಿ ದಕ್ಷಿಣ ವಲಯದ ಮಾಜಿ ಮಹಾನಿರ್ದೇಶಕ ಡಾ.ಮಹೇಶ್ ಜೋಷಿ ಕಿಡಿಕಾರಿದ್ದಾರೆ.
ರವಿವಾರ ಕನ್ನಡ ಸಾಹಿತ್ಯ ಪರಿಷತ್‌ನ ಕುವೆಂಪು ಸಭಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ನಗರ ಜಿಲ್ಲೆ ಹೆಗಡೆ ಕಲ್ಚರಲ್ ಮತ್ತು ಸೋಷಿಯಲ್ ಅಕಾಡಮಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 155ನೆ ಜನ್ಮದಿನಾಚರಣೆ-ಯುವ ಸಪ್ತಾಹ ಹಾಗೂ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿನ ಬಡತನ, ಹಸಿವು, ಅನಕ್ಷರತೆ, ಜಾತಿ ತಾರತಮ್ಯಗಳನ್ನು ಹೋಗಲಾಡಿಸಲು ಸಂಕಲ್ಪ ತೊಟ್ಟಿದ್ದ ಸ್ವಾಮಿ ವಿವೇಕಾನಂದರು ಯುವರನ್ನು ಉತ್ಸಾಹಿಗಳನ್ನಾಗಿಸಲು ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಸಂದೇಶ ಸೇರಿ ಹತ್ತು ಹಲವು ಸಂದೇಶಗಳನ್ನು ಈ ಸಮಾಜಕ್ಕೆ ರವಾನಿಸಿದರು. ಹೀಗಾಗಿಯೆ ವಿವೇಕಾನಂದರು ಎಲ್ಲ ವರ್ಗದವರಿಗೂ ಆದರ್ಶ ಗುರುವಿನ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಹೇಳಿದರು.
ಗ್ರಂಥಾಲಯ ಇಲಾಖೆಯ ನಿರ್ದೇಶಕ ಶಿವಕುಮಾರ ಎಸ್. ಹೊಸಮನಿ ಮಾತನಾಡಿ, ಸ್ವಾಮಿ ವಿವೇಕಾನಂದರ ಸಂದೇಶಗಳಿರುವ ಇಂಗ್ಲಿಷ್ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದು, ಈ ಪುಸ್ತಕಗಳು ಬೆಂಗಳೂರು ನಗರದ ಎಲ್ಲ ಗ್ರಂಥಾಲಯಗಳಲ್ಲಿ ಲಭ್ಯವಿವೆ. ಹೀಗಾಗಿ, ಯುವಕರು ಈ ಪುಸ್ತಕಗಳನ್ನು ಓದಿ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಳೀದರು.
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾಯಣ್ಣ ಮಾತನಾಡಿ, ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪನೆಯಾಗಲು ಸ್ವಾಮಿ ವಿವೇಕಾನಂದರ ಬಹುದೊಡ್ಡ ಕೊಡುಗೆಯೂ ಇದೇ ಎಂದು ಹೇಳಿದರು.
ಡಾ.ಹೇಮಾವತಿ ಸೊನೊಳ್ಳಿ ಸೇರಿ ಹಲವು ಗಣ್ಯ ವ್ಯಕ್ತಿಗಳಿಗೆ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀ ಯ ಪ್ರಶಸ್ತಿ ಪ್ರಧಾನ ಮಾಡಿದರು.
ಕಾರ್ಯಕ್ರಮದಲ್ಲಿ ವಿಣಾವಾದಕಿ ಡಾ.ಭಾಗ್ಯಶ್ರೀ ಚಂದ್ರಶೇಖರ, ಸಾಮಾಜ ಸೇವಕಿ ಲೈನಿಸ್ ಅನಿತಾ ಶೇಷಾದ್ರಿ, ಹೆಗಡೆ ಕಲ್ಚರಲ್ ಮತ್ತು ಸೋಷಿಯಲ್ ಅಕಾಡಮಿ ಅಧ್ಯಕ್ಷ ಡಾ.ವಿ.ಎನ್.ಹೆಗಡೆ ಉಪಸ್ಥಿತರಿದ್ದರು