×
Ad

ಸಮವಸ್ತ್ರ, ಶೂ ವಿತರಣೆ: ಎರಡು ವರ್ಷಕ್ಕೆ ಒಂದೇ ಬಾರಿ ಟೆಂಡರ್

Update: 2018-01-14 20:40 IST

ಬೆಂಗಳೂರು, ಜ.14: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಶಾಲಾ-ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ ಹಾಗೂ ಬ್ಯಾಗ್ ವಿತರಣೆಯಲ್ಲಾಗುತ್ತಿರುವ ವಿಳಂಬ ತಪ್ಪಿಸುವ ಉದ್ದೇಶದಿಂದ ಮುಂದಿನ ಎರಡು ವರ್ಷಗಳ ಅವಧಿಗೆ ಈಗಲೇ ಟೆಂಡರ್ ನೀಡಲಾಗಿದೆ.

ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಪ್ರತಿಯೊಂದು ವಿದ್ಯಾರ್ಥಿಗೆ ಎರಡು ಜೊತೆ ಸಮವಸ್ತ್ರ ವಿತರಿಸಲು ಅಂಕಿತ್ ಸಂಸ್ಥೆಗೆ ಹಾಗೂ ಎರಡು ಜೊತೆ ಶೂ ಮತ್ತು ಒಂದು ಬ್ಯಾಗ್ ವಿತರಣೆ ಮಾಡುವ ಸಲುವಾಗಿ ಲಿಬರ್ಟಿ ಸಂಸ್ಥೆಗೆ ಟೆಂಡರ್ ನೀಡಲಾಗಿದೆ. ಈ ಕುರಿತು ಮಾರ್ಚ್‌ನಲ್ಲಿ ಕಾರ್ಯಾದೇಶ ನೀಡಲಿದ್ದು, ಜೂನ್‌ನಿಂದ ವಿದ್ಯಾರ್ಥಿಗಳಿಗೆ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಲಿಕೆಯು ಸಮವಸ್ತ್ರಗಳನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ನೀಡಬೇಕಿತ್ತು. ಆದರೆ, ಶೈಕ್ಷಣಿಕ ವರ್ಷ ಮುಗಿಯುವ ಹಂತಕ್ಕೆ ಬಂದಿದ್ದರೂ ವಿತರಿಸಿಲ್ಲ ಎಂದು ಶೈಕ್ಷಣಿಕ ಸ್ಥಾಯಿ ಸಮಿತಿಯ ಸದಸ್ಯೆ ಸವಿತಾ ಮಾಯಣ್ಣಗೌಡ ಇತ್ತೀಚೆಗೆ ಪಾಲಿಕೆ ಸಭೆಯಲ್ಲಿ ದೂರಿದ್ದರು. ಇದರಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು, ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ ಹಾಗೂ ಬ್ಯಾಗ್ ವಿತರಿಸಲು ಕ್ರಮ ಕೈಗೊಂಡಿದ್ದಾರೆ.

ಶಿಕ್ಷಣ ಇಲಾಖೆಯು ಶೈಕ್ಷಣಿಕ ವರ್ಷದ ಆರಂಭದಲ್ಲೇ ಒಂದು ಜೊತೆ ಸಮವಸ್ತ್ರವನ್ನು ವಿದ್ಯಾರ್ಥಿಗಳಿಗೆ ವಿತರಿಸಿದೆ. ಪಾಲಿಕೆ ವತಿಯಿಂದ ಬಣ್ಣದ ಹಾಗೂ ಬಿಳಿ ಬಣ್ಣದ ಸಮವಸ್ತ್ರ ವಿತರಣೆ ಮಾಡಬೇಕಿತ್ತು. ಇದಕ್ಕಾಗಿ ಟೆಂಡರ್ ಕರೆಯಲಾಗಿತ್ತು. ಪಾಂಚಜನ್ಯ ಹಾಗೂ ಅಂಕಿತ್ ಸಂಸ್ಥೆಗಳು ಟೆಂಡರ್‌ನಲ್ಲಿ ಪಾಲ್ಗೊಂಡಿದ್ದವು. ಕಡಿಮೆ ಮೊತ್ತ ನಿಗದಿ ಮಾಡಿದ್ದ ಪಾಂಚಜನ್ಯ ಸಂಸ್ಥೆಗೆ ಟೆಂಡರ್ ನೀಡಲಾಗಿತ್ತು. ಆದರೆ, ಈ ಮೊತ್ತಕ್ಕೆ ಸಮವಸ್ತ್ರ ಪೂರೈಸಲು ಸಾಧ್ಯವಾಗುವುದಿಲ್ಲ ಎಂದು ಆ ಸಂಸ್ಥೆಯು ಕೊನೇ ಹಂತದಲ್ಲಿ ತಗಾದೆ ತೆಗೆದ ಪರಿಣಾಮ ಸಮಯಕ್ಕೆ ಸರಿಯಾಗಿ ವಿತರಣೆ ಮಾಡಲು ಸಾಧ್ಯವಾಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಂಚಜನ್ಯ ಸಂಸ್ಥೆಯು ನಮೂದಿಸಿದ್ದ ಮೊತ್ತಕ್ಕೆ ಸಮವಸ್ತ್ರ ವಿತರಿಸುವಂತೆ ಅಂಕಿತ್ ಸಂಸ್ಥೆಯ ಪ್ರತಿನಿಧಿಗಳಿಗೆ ಮನವಿ ಮಾಡಿದ್ದೆವು. ಆರಂಭದಲ್ಲಿ ಇದಕ್ಕೆ ಒಪ್ಪಲು ನಿರಾಕರಿಸಿದ್ದರು. ಮರು ಟೆಂಡರ್ ಕರೆಯುವುದಾಗಿ ತಿಳಿಸಿದ ಬಳಿಕ, ಒಪ್ಪಿಗೆ ಸೂಚಿಸಿದ್ದರು. ಈ ಬಗ್ಗೆ ನ.27 ರಂದು ಕಾರ್ಯಾದೇಶ ನೀಡಲಾಗಿತ್ತು. ಹಾಗೂ 60 ದಿನಗಳೊಳಗೆ ಸಮವಸ್ತ್ರ ವಿತರಣೆ ಮಾಡುವಂತೆ ಷರತ್ತು ವಿಧಿಸಲಾಗಿತ್ತು ಎಂದು ತಿಳಿಸಿದ್ದಾರೆ.


ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ ಹಾಗೂ ಬೇಜಾಬ್ದಾರಿತನದಿಂದ ಸಮವಸ್ತ್ರ ಹಾಗೂ ಶೂ ವಿತರಣೆ ಮಾಡಲು ವಿಳಂಬವಾಗಿದೆ. ಹೀಗಾಗಿ, ಜ.27 ರೊಳಗೆ ವಿತರಣೆ ಮಾಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ.
-ಗಂಗಮ್ಮಶೈಕ್ಷಣಿಕ ಸ್ಥಾಯಿ ಸಮಿತಿ ಅಧ್ಯಕ್ಷೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News