×
Ad

ಕಾನೂನು ಬಾಹಿರವಾಗಿ ವಕ್ಫ್ ಬೋರ್ಡ್ ಕಾರ್ಯ ನಿರ್ವಹಣೆ: ಡಾ.ಕೆ.ರಹ್ಮಾನ್‌ಖಾನ್ ಆರೋಪ

Update: 2018-01-15 19:58 IST

ಬೆಂಗಳೂರು, ಜ.15: ರಾಜ್ಯದಲ್ಲಿ ವಕ್ಫ್ ಬೋರ್ಡ್ ಕಾನೂನು ಬಾಹಿರವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಡಾ.ಕೆ.ರಹ್ಮಾನ್‌ಖಾನ್ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಯಮಾವಳಿಗಳ ರಚನೆಯ ನೆಪ ಮುಂದಿಟ್ಟುಕೊಂಡು ವಕ್ಫ್ ಬೋರ್ಡ್‌ಗೆ ಕಾಲಮಿತಿಯಲ್ಲಿ ಚುನಾವಣೆ ನಡೆಸದೆ ಕಳೆದ ಮೂರು ವರ್ಷಗಳಿಂದ ಕಾಲಹರಣ ಮಾಡಲಾಗುತ್ತಿದೆ ಎಂದು ದೂರಿದರು.

ಈ ಸಂಬಂಧ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಹಾಗೂ ಇಲಾಖೆಯ ಸಚಿವರಿಗೆ ಹತ್ತಾರು ಪತ್ರಗಳನ್ನು ಬರೆದರು ಯಾವುದಕ್ಕೂ ಪ್ರತಿಕ್ರಿಯೆ ಇಲ್ಲ. ಯಾವ ಕಾನೂನಿನಡಿಯಲ್ಲಿ ಸರಕಾರವು ವಕ್ಫ್ ಬೋರ್ಡ್‌ಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ರಹ್ಮಾನ್‌ಖಾನ್ ಅಸಮಾಧಾನ ವ್ಯಕ್ತಪಡಿಸಿದರು.

ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಪ್ರಣಾಳಿಕೆಯನ್ನು ಸಿದ್ಧಪಡಿಸುವ ಕೆಲಸ ಸಂಸದ ವೀರಪ್ಪ ಮೊಯ್ಲಿ ನೇತೃತ್ವದಲ್ಲಿ ನಡೆಯುತ್ತಿದೆ. ಕಳೆದ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳು, ಅವುಗಳ ಈಡೇರಿಕೆಯ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಅವರು ಹೇಳಿದರು.
ಅಲ್ಪಸಂಖ್ಯಾತರ ಕಲ್ಯಾಣಕ್ಕೆ ದೂರಗಾಮಿ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ನೀಡಬೇಕೆಂಬುದು ನಮ್ಮ ಉದ್ದೇಶವಾಗಿದೆ. ಇದರಿಂದಾಗಿ, ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವುದರ ಜತೆಗೆ, ರಾಜ್ಯದ ಸರ್ವಾಗೀಂಣ ಅಭಿವೃದ್ಧಿಯ ಪಾಲುದಾರರನ್ನಾಗಿ ಅವರನ್ನು ಮಾಡಬೇಕಿದೆ ಎಂದು ರಹ್ಮಾನ್‌ಖಾನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News