×
Ad

ಸಚಿವ ರೋಷನ್‌ ಬೇಗ್‌ಗೆ ಜಾರಿ ನಿರ್ದೇಶನಾಲಯ ನೋಟಿಸ್ ?

Update: 2018-01-15 21:08 IST

ಬೆಂಗಳೂರು, ಜ.15: ತಾವು ನಿರ್ದೇಶಕರಾಗಿರುವ ಕಂಪೆನಿಗೆ ವಿದೇಶಿ ಕಂಪೆನಿಯೊಂದರ ಮೂಲಕ ಹಣ ವರ್ಗಾವಣೆಯಾಗಿರುವ ಬಗ್ಗೆ ಲೆಕ್ಕ ಕೊಡದ ಆರೋಪದ ಹಿನ್ನೆಲೆಯಲ್ಲಿ ವಿದೇಶಿ ವಿನಿಮಯ ಕಾಯ್ದೆ(ಫೆಮಾ) ಉಲ್ಲಂಘನೆ ಅಡಿಯಲ್ಲಿ ಜಾರಿ ನಿರ್ದೇಶನಾಲಯವು ನಗರಾಭಿವೃದ್ಧಿ ಸಚಿವ ರೋಷನ್ ಬೇಗ್, ಅವರ ಪುತ್ರ ರೂಮಾನ್ ಬೇಗ್ ಹಾಗೂ ಪುತ್ರಿಗೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ.

ಕಳೆದ 7-8 ವರ್ಷದಿಂದ ಯುಎಇಯಿಂದ ತಮ್ಮ ಕಂಪೆನಿಗೆ ಹರಿದು ಬಂದಿರುವ ಹಣದ ಬಗ್ಗೆ ರೋಷನ್‌ಬೇಗ್, ಅವರ ಪುತ್ರ ಹಾಗೂ ಪುತ್ರಿ ಯಾವುದೆ ಲೆಕ್ಕವನ್ನು ಕೊಟ್ಟಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹವಾಲಾ ವ್ಯವಹಾರದಲ್ಲಿ ಭಾಗಿಯಾಗಿರುವ ಸಂಶಯದಿಂದ ಜಾರಿ ನಿರ್ದೇಶನಾಲಯವು ನೋಟಿಸ್ ನೀಡಿದೆ ಎನ್ನಲಾಗಿದೆ.

ಕೊಲ್ಲಿ ರಾಷ್ಟ್ರದಲ್ಲಿರುವ ರೂಮನ್ ಎಂಟರ್‌ಪ್ರೈಸಸ್ ಕಂಪೆನಿಗೆ ರೋಷನ್‌ಬೇಗ್ ನಿರ್ದೇಶಕರಾಗಿದ್ದಾರೆ ಎನ್ನಲಾಗಿದೆ. ಈ ಕಂಪೆನಿಗೆ ಮತ್ತೊಂದು ವಿದೇಶಿ ಮೂಲದ ಫಸೂಲ್ ಸ್ಟೀಲ್ಸ್ ಕಂಪೆನಿಯಿಂದ ಕೋಟ್ಯಂತರ ರೂ.ಗಳು ಪಾವತಿಯಾಗಿತ್ತು. ಆದರೆ, ಈ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆ, ಲೆಕ್ಕಾಚಾರವನ್ನು ರೂಮನ್ ಕಂಪೆನಿ ಇಟ್ಟಿರಲಿಲ್ಲ ಎನ್ನಲಾಗುತ್ತಿದೆ.

ರೋಷನ್‌ಬೇಗ್ ಪುತ್ರ ರೂಮಾನ್ ಬೇಗ್ ಹೂಡಿಕೆಗಾಗಿ ಈ ಹಣವನ್ನು ಫಸೂಲ್ ಸ್ಟೀಲ್ಸ್ ಕಂಪೆನಿಯಿಂದ ಪಡೆದಿದ್ದರು. ಈ ಹಣದ ಬದಲು ರೂಮನ್ ಕಂಪೆನಿಯಲ್ಲಿ ಶೇರು ನೀಡುವುದಾಗಿ ಫಸೂಲ್ ಸ್ಟೀಲ್ಸ್ ಕಂಪೆನಿಗೆ ತಿಳಿಸಿದ್ದರು. ಆದರೆ, ಯಾವುದೇ ಶೇರುಗಳನ್ನು ನೀಡಿರಲಿಲ್ಲ ಎಂದು ಆರೋಪಿಸಲಾಗುತ್ತಿದೆ.

ಈ ಹಣವನ್ನು ಭಾರತದಿಂದ ಹವಾಲಾ ಮೂಲಕ ವಿದೇಶಕ್ಕೆ ಸಾಗಿಸಿ, ಅದನ್ನು ವಿದೇಶಿ ಕಂಪೆನಿಯ ಖಾತೆಯಲ್ಲಿ ಜಮೆ ಮಾಡಿಸಿ, ನಂತರ ಆ ಹಣವನ್ನು ತಮ್ಮ ರೂಮನ್ ಎಂಟರ್‌ಪ್ರೈಸಸ್‌ಗೆ ವರ್ಗಾಯಿಸಲಾಗಿದೆ ಎಂದು ಸಂಶಯ ವ್ಯಕ್ತಪಡಿಸಿರುವ ಜಾರಿ ನಿರ್ದೇಶನಾಲಯವು, ಫೆಮಾ ಸೆಕ್ಷನ್ 6(ಬಿ) ಅಡಿಯಲ್ಲಿ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ.


ನೋಟಿಸ್ ಕೈ ಸೇರಿಲ್ಲ
ಜಾರಿ ನಿರ್ದೇಶನಾಲಯದಿಂದ ನನಗೆ ಯಾವುದೆ ನೋಟಿಸ್ ಸಿಕ್ಕಿಲ್ಲ. ಇಂದು ಬೆಳಗ್ಗೆಯಷ್ಟೇ ನಾನು ಊರಿನಿಂದ ಬಂದಿದ್ದೇನೆ. ನನ್ನ ಆಪ್ತ ಸಹಾಯಕರಿಗೂ ನೋಟಿಸ್ ಜಾರಿಯಾಗಿರುವ ಬಗ್ಗೆ ಯಾವುದೆ ಮಾಹಿತಿ ಇಲ್ಲ. ನೋಟಿಸ್ ಕೈ ಸೇರಿದರೆ ನೆಲದ ಕಾನೂನಿನಂತೆ ಉತ್ತರಿಸಲಾಗುವುದು.
ರೋಷನ್‌ಬೇಗ್, ನಗರಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News