4 ಬಾರಿ ಒಲಿಂಪಿಕ್ಸ್‌ ಪದಕ ಜಯಿಸಿದ ಸಿಮೋನ್ ಬೈಲ್ಸ್ ಗೆ ವೈದ್ಯರಿಂದ ಲೈಂಗಿಕ ಕಿರುಕುಳ: ಆರೋಪ

Update: 2018-01-16 08:38 GMT

ನ್ಯೂಯಾರ್ಕ್, ಜ.16: "ಅಮೆರಿಕ ಜಿಮ್ನಾಸ್ಟಿಕ್ ತಂಡದ ಮಾಜಿ ವೈದ್ಯರಾದ ಲ್ಯಾರಿ ನಸ್ಸಾರ್ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ" ಎಂದು ನಾಲ್ಕು ಬಾರಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿರುವ ಅಮೆರಿಕದ ಜಿಮ್ನಾಸ್ಟಿಕ್ ತಾರೆ ಸಿಮೋನ್ ಬೈಲ್ಸ್ಸ್ ಆರೋಪಿಸಿದ್ದಾರೆ.

20ರ ಹರೆಯದ ಸಿಮೋನ್ ಬೈಲ್ಸ್ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಅಮೆರಿಕ ತಂಡ ಚಿನ್ನ ಜಯಿಸಲು ಪ್ರಮುಖ ಪಾತ್ರವಹಿಸಿದ್ದರು. ವೈದ್ಯ ಲ್ಯಾರಿ ನಸ್ಸಾರ್ ಅನುಚಿತ ವರ್ತನೆ ಬಗ್ಗೆ ಆರೋಪಿಸುತ್ತಿರುವ ಮಹಿಳಾ ಅಥ್ಲೀಟ್‌ಗಳ ಪಟ್ಟಿಗೆ ಸಿಮೋನ್ ಹೊಸ ಸೇರ್ಪಡೆಯಾಗಿದ್ದಾರೆ. ಅಮೆರಿಕದ ಇತರ ಶ್ರೇಷ್ಠ ಜಿಮ್ನಾಸ್ಟಿಕ್‌ಗಳಾದ ಗ್ಯಾಬ್ಬಿ ಡೌಗ್ಲಾಸ್, ಅಲಿ ರೈಸ್ಮಾನ್ ಹಾಗೂ ಮೆಕ್‌ಕೆಲಾ ಮರೊನಿ ಅವರು ಲ್ಯಾರಿ ನಸ್ಸಾರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರು. ನಸ್ಸಾರ್‌ಗೆ ಕಳೆದ ತಿಂಗಳು 60 ವರ್ಷ ಜೈಲು ಸಜೆ ಪ್ರಕಟಿಸಲಾಗಿದೆ.

‘‘ಲ್ಯಾರಿ ನಸ್ಸಾರ್‌ರಿಂದ ಲೈಂಗಿಕ ಕಿರುಕುಳಕ್ಕೆ ಗುರಿಯಾದ ಹಲವು ಸಂತ್ರಸ್ತರ ಪೈಕಿ ನಾನೂ ಒಬ್ಬಳು. ನನ್ನ ಕಥೆ ಹಂಚಿಕೊಳ್ಳಲು ಹಲವು ಕಾರಣಗಳಿವೆ. ಇದು ನನ್ನ ತಪ್ಪಲ್ಲ ಎಂದು ನನಗೆ ಗೊತ್ತಿದೆ. ವೈದ್ಯರ ವರ್ತನೆ ಸ್ವೀಕಾರಾರ್ಹವಲ್ಲ. ನಂಬಿಕಸ್ಥರಿಂದ ಇಂತಹ ವರ್ತನೆ ಸರಿಯಲ್ಲ’’ ಎಂದು ಟ್ವಿಟರ್ ಖಾತೆಯಲ್ಲಿ ಬೈಲ್ಸ್ ಬರೆದಿರುವ ಪತ್ರದಲ್ಲಿ ಬೈಲ್ ತಿಳಿಸಿದ್ದಾರೆ.

  ಬೈಲ್ಸ್ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ನಾಲ್ಕು ಚಿನ್ನದ ಪದಕ ಜಯಿಸುವ ಮೊದಲು ಸತತ ಮೂರು ವರ್ಲ್ಡ್ ಆಲ್‌ರೌಂಡ್ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸಿದ್ದರು. 2011ರಿಂದ ಇಲೈಟ್ ಜಿಮ್ನಾಸ್ಟಿಕ್ ಆಗಿರುವ ಬೈಲ್ಸ್ ಜುಲೈನಲ್ಲಿ ನಡೆಯಲಿರುವ ಯುಎಸ್ ಕ್ಲಾಸಿಕ್‌ನಲ್ಲಿ ಭಾಗವಹಿಸಲು ಸಜ್ಜಾಗುತ್ತಿದ್ದಾರೆ. 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದು ಬೈಲ್ಸ್ ಗುರಿಯಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News