ಗೋವಾ ನೀರಾವರಿ ಸಚಿವರ ವಿರುದ್ಧ ಸಿದ್ದರಾಮಯ್ಯ ಆಕ್ರೋಶ
ಬೆಂಗಳೂರು, ಜ.16: ಮಹಾದಾಯಿ ವಿಚಾರದಲ್ಲಿ ಗೋವಾ ನೀರಾವರಿ ಸಚಿವ ವಿನೋದ್ ಪಾಳೇಕರ್ ನೀಡಿರುವ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ನಗರದ ಸರ್ದಾರ್ ಪಟೇಲ್ ಭವನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾದಾಯಿ ವಿಚಾರದಲ್ಲಿ ಕರ್ನಾಟಕವು ಸಾಕ್ಷಿಗಳಿಗೆ ಹಣ ನೀಡುತ್ತಿದೆ ಎಂದು ಹೇಳಿರುವುದು ಅತ್ಯಂತ ಬೇಜವಾಬ್ದಾರಿಯುತವಾದ ಹೇಳಿಕೆಯಾಗಿದೆ ಎಂದರು.
ಅವರಂತೆ ನಮಗೂ ಮಾತನಾಡಲು ಬರುತ್ತದೆ. ಅವರ ಮಾತು ಅವರ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಇಂತಹ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ವಿನೋದ್ ಪಾಳೇಕರ್ ಸಚಿವರಾಗಲು ನಾಲಾಯಕ್ ಎಂದು ಅವರು ಹೇಳಿದರು.
ನಗರಾಭಿವೃದ್ಧಿ ಸಚಿವ ರೋಷನ್‌ಬೇಗ್‌ಗೆ ಜಾರಿ ನಿರ್ದೇಶನಾಲಯ ನೀಡಿರುವ ನೋಟಿಸ್ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹೀಂ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಈ ಬಗ್ಗೆ ಸಂಬಂಧಪಟ್ಟವರನ್ನೆ ಕೇಳಿ, ನನಗೇನು ಗೊತ್ತಿಲ್ಲ ಎಂದರು.
ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಕುಡಿಯುವ ನೀರಿನ ವಿಚಾರದಲ್ಲಿ ಗೋವಾ ಸರಕಾರದ ನಡೆ ಸರಿಯಲ್ಲ. ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರಕಾರವು ಇಂತಹ ರಾಜಕಾರಣ ಮಾಡಬಾರದು. ಯಾವುದೇ ದೇಶದಲ್ಲೂ ಕುಡಿಯುವ ನೀರಿಗಾಗಿ ಇಂತಹ ಸ್ಥಿತಿ ನಿರ್ಮಾಣವಾಗಿಲ್ಲ ಎಂದರು.
ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಬಳಿಯೋ ಕೆಲಸವನ್ನ ಮೋದಿ ಸರಕಾರ ಮಾಡುತ್ತಿದೆ. ಮಧ್ಯಪ್ರದೇಶದ ಜನತೆಯ ವಿರೋಧದ ನಡುವೆಯೂ ಗುಜರಾತಿಗೆ ನರ್ಮದಾ ನದಿ ನೀರನ್ನು ತಂದರು. ಮಹಾನದಿ ವಿಚಾರದಲ್ಲಿ ಜಾರ್ಖಂಡಿಗೆ ಮೋಸ ಮಾಡಿ ಓಡಿಶಾಗೆ ನೀರನ್ನು ಹರಿಸಿದರು. ಆದರೆ, ಕರ್ನಾಟಕದ ವಿಚಾರದಲ್ಲಿ ಮಾತ್ರ ಕೇಂದ್ರ ಸರಕಾರ ರಾಜಕಾರಣ ಮಾಡುತ್ತಿದೆ. ಅವರು ಮನಸ್ಸು ಮಾಡಿದರೆ ವಿವಾದವನ್ನು ಸುಲಭವಾಗಿ ಇತ್ಯರ್ಥ ಮಾಡಬಹುದು ಎಂದು ಹರಿಪ್ರಸಾದ್ ಹೇಳಿದರು.