ಹಜ್ ಯಾತ್ರೆ ಸಬ್ಸಿಡಿ ರದ್ದತಿಗೆ ಸ್ವಾಗತ: ಸಚಿವ ರೋಷನ್‌ ಬೇಗ್

Update: 2018-01-16 14:47 GMT

ಬೆಂಗಳೂರು, ಜ.16: ಕೇಂದ್ರ ಸರಕಾರವು ಪವಿತ್ರ ಹಜ್‌ ಯಾತ್ರೆಗೆ ಸಬ್ಸಿಡಿಯನ್ನು ರದ್ದುಪಡಿಸಿದರೆ ನಾವು ಸ್ವಾಗತಿಸುತ್ತೇವೆ ಎಂದು ನಗರಾಭಿವೃದ್ಧಿ ಹಾಗೂ ಹಜ್ ಸಚಿವ ಆರ್.ರೋಷನ್‌ ಬೇಗ್ ಹೇಳಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಜ್‌ ಯಾತ್ರೆ ಒಂದು ಪವಿತ್ರ ಕಾರ್ಯ. ಇದಕ್ಕಾಗಿ ನಮಗೆ ಬೇರೆಯವರ ಸಹಾಯ, ನೆರವಿನ ಅಗತ್ಯವಿಲ್ಲ ಎಂದರು.

ಜಾರಿ ನಿರ್ದೇಶನಾಲಯದಿಂದ ತಮಗೆ ಬಂದಿರುವ ನೋಟಿಸ್ ಕುರಿತು ಪ್ರತಿಕ್ರಿಯಿಸಿದ ಅವರು, ಎರಡು ವರ್ಷಗಳ ಹಿಂದೆಯೂ ನೋಟಿಸ್ ಬಂದಿತ್ತು. ಆದರೆ, ಆಗ ಚುನಾವಣೆ ಇರದ ಹಿನ್ನೆಲೆಯಲ್ಲಿ ಯಾವುದೆ ಸುದ್ದಿ ಆಗಿರಲಿಲ್ಲ. ನಿನ್ನೆ ಸಂಜೆ ಏಕಾಏಕಿ ದೊಡ್ಡ ಮಟ್ಟದ ಸುದ್ದಿಯಾಗಿದೆ ಎಂದರು.

ನೆಲದ ಕಾನೂನಿನ ಬಗ್ಗೆ ನನಗೆ ಗೌರವವಿದೆ. ಅದರಂತೆ ವಕೀಲರ ಜತೆ ಚರ್ಚಿಸಿ ಜಾರಿ ನಿರ್ದೇಶನಾಲಯ ನೀಡಿರುವ ನೋಟಿಸ್‌ಗೆ ಸೂಕ್ತವಾದ ಉತ್ತರ ಒದಗಿಸಿಕೊಡಲಾಗುವುದು. ಮುಂಬರುವ ಚುನಾವಣೆಯಲ್ಲಿ ನನ್ನ ವ್ಯಕ್ತಿತ್ವಕ್ಕೆ ಹಿನ್ನಡೆಯುಂಟು ಮಾಡುವ ಉದ್ದೇಶದಿಂದ ರಾಜಕೀಯ ಪ್ರೇರಿತವಾಗಿ ಈ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದರು.

ನನ್ನ ಪುತ್ರ ರೂಮಾನ್‌ಬೇಗ್ ಒಬ್ಬ ಸ್ವತಂತ್ರ ಉದ್ಯಮಿ. ಈ ಪ್ರಕ್ರಿಯೆಯನ್ನು ಆತ ನಿರ್ವಹಿಸಿಕೊಳ್ಳುತ್ತಾನೆ. ಈಗ ಬಂದಿರುವ ನೋಟಿಸ್ ನಮಗೆ 2015ರಲ್ಲೂ ಬಂದಿತ್ತು. ಆಗ ರೂಮಾನ್‌ಬೇಗ್ ಎಲ್ಲ ರೀತಿಯ ದಾಖಲೆಗಳು, ಸ್ಪಷ್ಟಣೆಗಳನ್ನು ನೀಡಿದ್ದಾರೆ. ಈಗ ಮತ್ತೆ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಿದ್ದಾರೆ ಎಂದು ರೋಷನ್‌ಬೇಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News