×
Ad

ಅಲ್ಪಸಂಖ್ಯಾತರಿಗೆ ಬಜೆಟ್‌ನಲ್ಲಿ ಆರು ಸಾವಿರ ಕೋಟಿ ರೂ.ಅನುದಾನದ ಅಗತ್ಯವಿದೆ: ದಿನೇಶ್‌ ಗುಂಡೂರಾವ್

Update: 2018-01-16 20:25 IST

ಬೆಂಗಳೂರು, ಜ.15: ಜನಸಂಖ್ಯೆಗೆ ಅನುಗುಣವಾಗಿ ಅಲ್ಪಸಂಖ್ಯಾತರಿಗೆ ರಾಜ್ಯ ಬಜೆಟ್‌ನಲ್ಲಿ ಕನಿಷ್ಠ ಐದರಿಂದ ಆರು ಸಾವಿರ ಕೋಟಿ ರೂ.ಗಳ ಅನುದಾನ ಒದಗಿಸುವ ಅಗತ್ಯವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಅಭಿಪ್ರಾಯಪಟ್ಟರು.

ಮಂಗಳವಾರ ನಗರದ ಸಿಎಂಎ ಸಭಾಂಗಣದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗವು ಬೆಂಗಳೂರು ಕೇಂದ್ರ, ಉತ್ತರ ಮತ್ತು ದಕ್ಷಿಣ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಅಲ್ಪಸಂಖ್ಯಾತರ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾನಾಡಿದರು.

ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಒದಗಿಸಲಾಗುತ್ತಿದ್ದ 500 ಕೋಟಿ ರೂ.ಗಳ ಬಜೆಟ್‌ನ್ನು ನಮ್ಮ ಸರಕಾರವು 2700 ಕೋಟಿ ರೂ.ಗಳಿಗೆ ತಲುಪಿಸಿದೆ. ಆದರೆ, ಜನಸಂಖ್ಯೆಗೆ ಅನುಗುಣವಾಗಿ ನೋಡಿದ್ದಲ್ಲಿ ಈ ಅನುದಾನ ಸಾಕಾಗುವುದಿಲ್ಲ. ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿವೇತನ ಸಿಗಬೇಕು, ಸ್ವ ಉದ್ಯೋಗಗಳಿಗೆ ಆರ್ಥಿಕ ನೆರವು ಸಿಗಬೇಕು ಎಂದು ಅವರು ಹೇಳಿದರು.

ಅಲ್ಪಸಂಖ್ಯಾತರಾದ ಮುಸ್ಲಿಮ್, ಕ್ರೈಸ್ತ, ಜೈನ, ಬೌದ್ಧ ಹಾಗೂ ಸಿಖ್ಖ್ ಸಮುದಾಯದ ಮುಖಂಡರು ಚರ್ಚಿಸಿ, ನಿಮ್ಮ ಬೇಡಿಕೆಗಳ ಪಟ್ಟಿಯನ್ನು ಸಿದ್ಧಪಡಿಸಿ ನಮಗೆ ನೀಡಿ, ಅವುಗಳ ಈಡೇರಿಕೆಗಾಗಿ ಪಕ್ಷದ ವತಿಯಿಂದ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಲಾಗುವುದು. ಮುಂದಿನ ಬಜೆಟ್ ಹಾಗೂ ಚುನಾವಣಾ ಪ್ರಣಾಳಿಕೆಯಲ್ಲಿ ಬೇಡಿಕೆಗಳನ್ನು ಅಳವಡಿಸಲಾಗುವುದು ಎಂದು ಅವರು ತಿಳಿಸಿದರು.

ಬಿಜೆಪಿ-ಆರೆಸೆಸ್ಸ್ ದೇಶದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಭ್ರಷ್ಟಾಚಾರ ನಿರ್ಮೂಲನೆ, ಅಚ್ಛೇದಿನ್, ಕಪ್ಪು ಹಣ ವಾಪಸ್ ಎಂದು ಘೋಷಣೆಗಳನ್ನು ಮಾಡಿತ್ತು. ಆದರೆ, ಕಳೆದ ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಕೊಟ್ಟ ಒಂದು ಮಾತನ್ನು ಈಡೇರಿಸಲು ಅವರಿಗೆ ಸಾಧ್ಯವಾಗಿಲ್ಲ ಎಂದು ದಿನೇಶ್‌ ಗುಂಡೂರಾವ್ ಹೇಳಿದರು.

ಪ್ರಧಾನಿ ನರೇಂದ್ರಮೋದಿ ಕೇವಲ ಭಾಷಣಗಳನ್ನು ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಅವರಂತೆ ನಮ್ಮದು ಮನ್ ಕೀ ಬಾತ್ ಅಲ್ಲ, ಕಾಮ್ ಕೀ ಬಾತ್. ಬಿಜೆಪಿಯವರು ಬಿಂಬಿಸುವಂತೆ ದೇಶದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದ್ದರೆ, ಗುಜರಾತ್ ಚುನಾವಣೆಯಲ್ಲಿ ನರೇಂದ್ರಮೋದಿ ಯಾಕೆ ಅಭಿವೃದ್ಧಿಯ ವಿಚಾರಗಳನ್ನು ಮುಂದಿಟ್ಟು ಮತಯಾಚನೆ ಮಾಡಲಿಲ್ಲ ಎಂದು ಅವರು ಪ್ರಶ್ನಿಸಿದರು.

ಹಿಂದೂ-ಮುಸ್ಲಿಮರ ನಡುವೆ ದ್ವೇಷದ ಭಾವನೆ ಮೂಡಿಸಿದ್ದಲ್ಲದೆ, ಮಾಜಿ ಪ್ರಧಾನಿ ಡಾ.ಮನಮೋಹನ್‌ಸಿಂಗ್‌ರನ್ನು ದೇಶದ್ರೋಹಿ ಎಂದು ಬಿಂಬಿಸಲಾಯಿತು. ಆದರೆ, ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನುಡಿದಂತೆ ನಡೆಯುವ ಸರಕಾರವಿದೆ. ಅವರು ಎಷ್ಟೇ ಪ್ರಯತ್ನಪಟ್ಟರೂ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಎಂದು ದಿನೇಶ್‌ಗುಂಡೂರಾವ್ ಹೇಳಿದರು.

ನಮ್ಮ ರಾಜ್ಯದ ವಿಧಾನಸಭೆ ಚುನಾವಣೆಯು ಇಡೀ ದೇಶದ ಗಮನ ಸೆಳೆಯಲಿದೆ. ನರೇಂದ್ರಮೋದಿ ವಿರುದ್ಧ ಧ್ವನಿ ಎತ್ತಿದರೆ ಬ್ಲಾಕ್‌ಮೇಲ್ ಮಾಡಲಾಗುತ್ತದೆ, ಆದಾಯ ತೆರಿಗೆ ಇಲಾಖೆಯಿಂದ ದಾಳಿ ಮಾಡಿಸಲಾಗುತ್ತಿದೆ, ಜನಸಾಮಾನ್ಯರು ಇಲ್ಲಿನ ಚುನಾವಣೆಯ ಬಳಿಕ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಲಿದ್ದಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News