ಮರಳು ಅಂಗಡಿ ತೆರೆದು ಜನರಿಗೆ ಹಂಚಿ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ

Update: 2018-01-16 15:42 GMT

ಬೆಂಗಳೂರು, ಜ.16: ಜನರಿಗೆ ಒಳ್ಳೆಯದು ಮಾಡುವ ಉದ್ದೇಶವೇನಾದರೂ ಇದ್ದರೆ ಇಂದಿರಾ ಕ್ಯಾಂಟೀನ್ ಹಾಗೂ ನ್ಯಾಯಬೆಲೆ ಅಂಗಡಿಯನ್ನು ತೆರೆದು ಪಡಿತರ ಹಂಚುವಂತೆ ಮರಳು ಅಂಗಡಿಯನ್ನು ತೆರೆದು ಜನರಿಗೆ ಮರಳನ್ನು ಹಂಚಿ ಎಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಮೌಖಿಕ ಸಲಹೆ ನೀಡಿದೆ.

ತಮಗೆ ಟೆಂಡರ್ ನೀಡುತ್ತಿಲ್ಲ ಎಂದು ಹಾವೇರಿಯ ವನಜಾಕ್ಷಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ರಾಜ್ಯ ಸರಕಾರದ ಮರಳು ನೀತಿ ಹಾಗೂ ಬಿಡ್ ಕರೆಯುವ ಬಗ್ಗೆ ಯಾವುದೆ ಸ್ಪಷ್ಟತೆ ಇಲ್ಲ ಎಂದು ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.

ಬಿಡ್‌ದಾರರು ಬಿಡ್ ಕೂಗಿದರೂ ಟೆಂಡರ್ ನೀಡುತ್ತಿಲ್ಲ. ಹಾಗಾದರೆ ಯಾತಕ್ಕಾಗಿ ಬಿಡ್ ಕರೆಯುತ್ತೀರಿ ಎಂದು ಪ್ರಶ್ನಿಸಿದ ನ್ಯಾಯಪೀಠವು ನೀವು ಎಲ್ಲರಿಗೂ ಮರಳು ನೀಡಬೇಕೆಂದರೆ ಮರಳು ನೀತಿಯನ್ನು ಜಾರಿಗೆ ತರಬೇಕು. ಅಥವಾ ನ್ಯಾಯಬೆಲೆ ಅಂಗಡಿಯಂತೆ ಮರಳು ಅಂಗಡಿಯನ್ನು ತೆರೆದು ಮರಳನ್ನು ಹಂಚಿ ಎಂದು ಪೀಠಕ್ಕೆ ತಿಳಿಸಿದರು.

ಅಂದುಕೊಂಡದ್ದಕ್ಕಿಂತ ಹೆಚ್ಚಿಗೆ ಬಿಡ್ ಇದೆ ಎಂದು ಟೆಂಡರ್ ರದ್ದು ಮಾಡಿದ್ದೀರಿ. ಹಾಗಾದರೆ ನೀವು ಅಂದುಕೊಂಡಿದ್ದಾರೂ ಎಷ್ಟು ಹೇಳಿ ಎಂದು ಸರಕಾರಿ ಪರ ವಕೀಲರನ್ನು ಪ್ರಶ್ನಿಸಿತು. ಜನರಿಗೆ ಹತ್ತಿರವಾಗುವಂತಹ ಮರಳು ನೀತಿಯನ್ನು ಜಾರಿಗೆ ತರುವ ಬಗ್ಗೆ ಜ.17ರಂದು ನ್ಯಾಯಲಯಕ್ಕೆ ತಿಳಿಸಿ ಎಂದು ಅರ್ಜಿ ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News