ನಾಲ್ಕನೇ ಏಕದಿನ: ನ್ಯೂಝಿಲೆಂಡ್‌ಗೆ ಗೆಲುವು

Update: 2018-01-16 18:49 GMT

ಹ್ಯಾಮಿಲ್ಟನ್(ನ್ಯೂಝಿಲೆಂಡ್)ಜ.16:ಪಾಕಿಸ್ತಾನ ವಿರುದ್ಧದ ನಾಲ್ಕನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆತಿಥೇಯ ನ್ಯೂಝಿಲೆಂಡ್ 5 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 4-0 ಮುನ್ನಡೆ ಗಳಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ ಮುಹಮ್ಮದ್ ಹಫೀಝ್(81, 80 ಎಸೆತ, 5 ಬೌಂಡರಿ, 4 ಸಿಕ್ಸರ್), ಫಖರ್ ಝಮಾನ್(54), ಹಾರಿಸ್ ಸೊಹೈಲ್(50) ಹಾಗೂ ಸರ್ಫರಾಝ್ ಅಹ್ಮದ್(51) ಅರ್ಧಶತಕಗಳ ಕೊಡುಗೆ ನೆರವಿನಿಂದ 8 ವಿಕೆಟ್‌ಗಳ ನಷ್ಟಕ್ಕೆ 262 ರನ್ ಗಳಿಸಿತು.

ಗೆಲ್ಲಲು 263 ರನ್ ಗುರಿ ಪಡೆದ ನ್ಯೂಝಿಲೆಂಡ್‌ಗೆ ಕಾಲಿನ್ ಮುನ್ರೊ(56,42 ಎಸೆತ) ಹಾಗೂ ಮಾರ್ಟಿನ್ ಗಪ್ಟಿಲ್(31) ಮೊದಲ ವಿಕೆಟ್‌ಗೆ 88 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು. ಆದರೆ, ಲೆಗ್ ಸ್ಪಿನ್ನರ್ ಶಾದಾಬ್ ಖಾನ್ ಕ್ಷಿಪ್ರವಾಗಿ ಮೂರು ವಿಕೆಟ್‌ಗಳನ್ನು ಉರುಳಿಸಿ ಕಿವೀಸ್‌ಗೆ ಶಾಕ್ ನೀಡಿದರು. 1 ವಿಕೆಟ್ ನಷ್ಟಕ್ಕೆ 88 ರನ್ ಗಳಿಸಿದ್ದ ಕಿವೀಸ್ 90 ರನ್‌ಗೆ 3 ವಿಕೆಟ್ ಕಳೆದುಕೊಂಡಿತು.

ನ್ಯೂಝಿಲೆಂಡ್ 99 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದಾಗ ತಂಡಕ್ಕೆ ಆಸರೆಯಾದ ನಾಯಕ ಕೇನ್ ವಿಲಿಯಮ್ಸನ್(32 ರನ್, 54 ಎಸೆತ) 5ನೇ ವಿಕೆಟ್‌ಗೆ ಹೆನ್ರಿ ನಿಕೊಲ್ಸ್‌ರೊಂದಿಗೆ 55 ರನ್ ಜೊತೆಯಾಟ ನಡೆಸಿದರು.

35ನೇ ಓವರ್‌ಗೆ ನ್ಯೂಝಿಲೆಂಡ್ 5 ವಿಕೆಟ್‌ಗಳ ನಷ್ಟಕ್ಕೆ 154 ರನ್ ಗಳಿಸಿತ್ತು. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿದ ಗ್ರಾಂಡ್‌ಹೋಮ್ ಔಟಾಗದೆ 74 ರನ್ ಗಳಿಸಿ 4.1 ಓವರ್‌ಗಳು ಬಾಕಿ ಇರುವಾಗಲೇ ಆತಿಥೇಯರು ಗೆಲುವಿನ ದಡ ತಲುಪಲು ನೆರವಾದರು. ಕೇವಲ 40 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 74 ರನ್ ಗಳಿಸಿದ ಗ್ರಾಂಡ್‌ಹೋಮ್ ಗೆಲುವಿನ ರೂವಾರಿಯಾದರು.

ಗ್ರಾಂಡ್‌ಹೋಮ್‌ಗೆ ಉತ್ತಮ ಸಾಥ್ ನೀಡಿದ ನಿಕೊಲ್ಸ್ (ಔಟಾಗದೆ 51)69 ಎಸೆತಗಳಲ್ಲಿ ಅರ್ಧಶತಕ ತಲುಪಿದರು.

ಇದಕ್ಕೆ ಮೊದಲು ಪಾಕ್ ಉತ್ತಮ ಬ್ಯಾಟಿಂಗ್‌ನಿಂದ ಗಮನ ಸೆಳೆಯಿತು. ಫಖರ್ ಅಗ್ರ ಕ್ರಮಾಂಕದಲ್ಲಿ 54 ರನ್ ಗಳಿಸಿದರು. ಹಫೀಝ್ 34ನೇ ಅರ್ಧಶತಕ ದಾಖಲಿಸಿದರು. ನಾಯಕ ಸರ್ಫ್ ರಾಝ್ ಅವರೊಂದಿಗೆ 6ನೇ ವಿಕೆಟ್‌ಗೆ 98 ರನ್ ಜೊತೆಯಾಟ ನಡೆಸಿ ಪಾಕ್ ಸ್ಕೋರನ್ನು ಹೆಚ್ಚಿಸಿದರು.

ಈ ಗೆಲುವಿನೊಂದಿಗೆ ನ್ಯೂಝಿಲೆಂಡ್ ಈ ಬೇಸಿಗೆ ಋತುವಿನಲ್ಲಿ ಸ್ವದೇಶದಲ್ಲಿ ಆಡಿರುವ ಎಲ್ಲ 12 ಪಂದ್ಯಗಳನ್ನು ಜಯಿಸಿದ ಸಾಧನೆ ಮಾಡಿದೆ. ವೆಸ್ಟ್‌ಇಂಡೀಸ್ ವಿರುದ್ಧ 2 ಟೆಸ್ಟ್, 3 ಏಕದಿನ ಹಾಗೂ ಮೂರು ಟ್ವೆಂಟಿ-20 ಪಂದ್ಯಗಳನ್ನು ಜಯಿಸಿದ್ದ ನ್ಯೂಝಿಲೆಂಡ್ ತಂಡ ಪಾಕ್ ವಿರುದ್ಧ ಸತತ 4ನೇ ಏಕದಿನ ಪಂದ್ಯ ಗೆದ್ದುಕೊಂಡಿದೆ.

ಸಂಕ್ಷಿಪ್ತ ಸ್ಕೋರ್

►ಪಾಕಿಸ್ತಾನ: 50 ಓವರ್‌ಗಳಲ್ಲಿ 262/8

(ಹಫೀಝ್ 81, ಫಖರ್ ಝಮಾನ್ 54, ಅಹ್ಮದ್ 51, ಸೊಹೈಲ್ 50, ಸೌಥಿ 3-44, ವಿಲಿಯಮ್ಸನ್ 2-32)

►ನ್ಯೂಝಿಲೆಂಡ್: 45.5 ಓವರ್‌ಗಳಲ್ಲಿ 263/5

(ಗ್ರಾಂಡ್‌ಹೋಮ್ ಔಟಾಗದೆ 74, ಮುನ್ರೊ 56,ನಿಕೊಲ್ಸ್ ಔಟಾಗದೆ 52, ಗಪ್ಟಿಲ್ 31, ಶಾದಾಬ್ ಖಾನ್ 3-43)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News