ಭಾರತದ ಕಳಪೆ ಆರಂಭ

Update: 2018-01-16 18:59 GMT

ಕೌಲಾಲಂಪುರ, ಜ.16: ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಆಟಗಾರರು ಕಳಪೆ ಪ್ರದರ್ಶನ ನೀಡಿದ್ದಾರೆ. ಇಲ್ಲಿ ಮಂಗಳವಾರ ನಡೆದ ಮಿಶ್ರ ಡಬಲ್ಸ್ ನಲ್ಲಿ ಭಾರತದ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಎನ್.ಸಿಕ್ಕಿ ರೆಡ್ಡಿ ಅವರು ಪ್ರಥಮ ಸುತ್ತಿನಲ್ಲಿ ತೇರ್ಗಡೆಯಾಗುವಲ್ಲಿ ಎಡವಿದ್ದಾರೆ. ಸಿಕ್ಕಿ ಮತ್ತು ಪ್ರಣವ್ ಅವರು ಹಾಂಕಾಂಗ್‌ನ ಲೀ ಚುನ್ ಹೀ ರಿಗಿನಾಲ್ಡ್ ಮತ್ತು ಚವು ಗೊಯ್ ವಾಹ್ ವಿರುದ್ಧ 18-21, 17-21 ಅಂತರದಲ್ಲಿ ಸೋಲು ಅನುಭವಿಸಿದರು.

 ಇನ್ನೊಂದು ಮಿಶ್ರ ಡಬಲ್ಸ್ ಪಂದ್ಯದಲ್ಲಿ ಭಾರತದ ಪ್ರಜಕ್ತಾ ಸಾವಂತ್ ಮತ್ತು ಯೋಗೇಂದ್ರನ್ ಕೃಷ್ಣನ್ ವಾಕ್‌ಓವರ್ ಪಡೆದು ಎರಡನೇ ಸುತ್ತು ತಲುಪಿದ್ದಾರೆ. ಪುರುಷರ ಸಿಂಗಲ್ಸ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತದ ಕಶ್ಯಪ್ ಅವರು ಥಾಯ್ಲೆಂಡ್‌ನ ಕಂಟಫೋನ್ ವಾಂಗ್‌ಚರೊನ್ ವಿರುದ್ಧ 14-21, 17-21 ಅಂತರದಲ್ಲಿ ಸೋಲು ಅನುಭವಿಸಿದರು. ಸುಭಾಂಕರ್ ಡೇ ಅವರು ಡೆನ್ಮಾರ್ಕ್‌ನ ಕಿಮ್ ಬ್ರುನ್ ವಿರುದ್ಧ 21-11, 11-21, 9-21 ಅಂತರದಲ್ಲಿ ಸೋಲುಂಡರು.

   ಮಹಿಳೆಯರ ಡಬಲ್ಸ್‌ನಲ್ಲಿ ಅಪರ್ಣಾ ಬಾಲನ್ ಮತ್ತು ಶ್ರುತಿ ಕೆ.ಪಿ ಅವರು ಸಿಂಗಾಪುರದ ಒಂಗ್ ರೆನ್-ನೆ ಮತ್ತು ವಾಂಗ್ ಜಿಯ ಯಿಂಗ್ ಕೃಸ್ಟಾಲ್ ವಿರುದ್ಧ 12-21, 21-18, 15-21 ಅಂತರದಲ್ಲಿ ಸೋತು ನಿರ್ಗಮಿಸಿದರು. ಇದೇ ವೇಳೆ ಪ್ರಜಕ್ತಾ ಸಾವಂತ್ ಮತ್ತು ಸಾನ್ಯೊಗಿತಾ ಘೋರ್ಪಡೆ ಮಲೇಷ್ಯಾದ ಚೀವ ಸಿಯೆನ್ ಲಿಮ್ ಮತ್ತು ಝೆನ್ ಯಾಪ್ ವಿರುದ್ಧ 20-22, 18-21 ಅಂತರದಲ್ಲಿ ಸೋತು ಅಭಿಯಾನ ಕೊನೆಗೊಳಿಸಿದರು. ಬುಧವಾರ ನಡೆಯಲಿರುವ ಪುರುಷರ ಸಿಂಗಲ್ಸ್‌ನಲ್ಲಿ ಪ್ರಣೀತ್ ಅವರು ಥಾಯ್ಲೆಂಡ್‌ನ ಕಂಟಫೋನ್ ವಾಂಗ್‌ಚರೊನ್‌ರನ್ನು ಎದುರಿಸುವರು. ಮಹಿಳೆಯರ ಡಬಲ್ಸ್ ನಲ್ಲಿ ಅಶ್ವಿನ್ ಪೊನ್ನಪ್ಪ ಮತ್ತು ಎನ್.ಸಿಕ್ಕಿ ರೆಡ್ಡಿ ಅವರು ಜರ್ಮನಿಯ ಜೋಹಾನ್ನಾ ಗೊಲಿಸ್ಜೆವಿಸ್ಕಿ ಮತ್ತು ಕೇಪ್ಲಿನ್ ಲಾರಾ ವಿರುದ್ಧ ಸೆಣಸಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News